ಏಶ್ಯಕಪ್: ಪಾಕಿಸ್ತಾನದ ವಿರುದ್ಧ ಭಾರತದ ದಾಖಲೆಯತ್ತ ಒಂದು ನೋಟ
ಸಾಂದರ್ಭಿಕ ಚಿತ್ರ|PC : PTI
ಹೊಸದಿಲ್ಲಿ, ಆ.14: ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಪ್ರತೀ ಪಂದ್ಯವೂ ಭಾರೀ ಪ್ರಮಾಣದ ಜಾಗತಿಕ ವೀಕ್ಷಕರನ್ನು ಸೆಳೆಯುತ್ತಾ ಬಂದಿದೆ.
ಐಸಿಸಿ ಆಯೋಜಿತ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಸಂಪೂರ್ಣ ಪ್ರಾಬಲ್ಯ ಮೆರೆದಿದೆ. ಏಕದಿನ ವಿಶ್ವಕಪ್‌ನಲ್ಲಿ 16 ಪಂದ್ಯಗಳಲ್ಲಿ 15ರಲ್ಲಿ ಜಯ ದಾಖಲಿಸಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ 7-1 ದಾಖಲೆ ಹೊಂದಿದೆ. ಏಶ್ಯಕಪ್ ದಾಖಲೆಯು ಭಾರತದ ಪರವಾಗಿಯೇ ಇದೆ.
1984ರಲ್ಲಿ ಕಾಂಟಿನೆಂಟಲ್ ಟೂರ್ನಮೆಂಟ್ ಏಶ್ಯಕಪ್ ಆರಂಭವಾದ ನಂತರ ಉಭಯ ತಂಡಗಳು 16 ಆವೃತ್ತಿಗಳ ಪೈಕಿ 15ರಲ್ಲಿ ಆಡಿವೆ. ಏಕದಿನ ಹಾಗೂ ಟಿ20 ಮಾದರಿಯಲ್ಲಿ ನಡೆದ ಏಶ್ಯಕಪ್ ಟೂರ್ನಿಯಲ್ಲಿ 18 ಬಾರಿ ಸೆಣಸಾಡಿವೆ.
ಏಶ್ಯಕಪ್‌ನಲ್ಲಿ ಹೆಡ್-ಟು-ಹೆಡ್‌ನಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ದ 10-6ರಿಂದ ಮುನ್ನಡೆಯಲ್ಲಿದೆ. ಎರಡು ಪಂದ್ಯಗಳು ಫಲಿತಾಂಶರಹಿತವಾಗಿದೆ. ಭಾರತ ತಂಡವು 8 ಬಾರಿ ಏಶ್ಯಕಪ್ ಎತ್ತಿ ಹಿಡಿದರೆ, ಪಾಕಿಸ್ತಾನವು ಕೇವಲ 2 ಬಾರಿ ಈ ಸಾಧನೆ ಮಾಡಿದೆ.
ಈ ಎರಡು ತಂಡಗಳ ನಡುವಿನ ಸ್ಪರ್ಧೆಯಲ್ಲಿ ಸ್ಮರಣೀಯ ಫಲಿತಾಂಶ ದಾಖಲಾಗಿವೆ. 1984ರ ಮೊದಲ ಆವೃತ್ತಿಯ ಏಶ್ಯಕಪ್‌ನಲ್ಲಿ ಭಾರತವು 54 ರನ್ ನಿಂದ ಜಯ ಸಾಧಿಸಿತ್ತು. 2023ರಲ್ಲಿ 228 ರನ್ ನಿಂದ ಭರ್ಜರಿ ಜಯ ಗಳಿಸಿ ದಾಖಲೆ ನಿರ್ಮಿಸಿತ್ತು. ಪಾಕಿಸ್ತಾನ ತಂಡವು 1995ರಲ್ಲಿ ಭಾರತದ ವಿರುದ್ಧ 97 ರನ್ ಗಳಿಂದ ಭರ್ಜರಿ ಜಯ ಸಾಧಿಸಿತ್ತು. 2022ರಲ್ಲಿ ಟಿ20 ಪಂದ್ಯದಲ್ಲಿ 5 ವಿಕೆಟ್ ಗಳ ಅಂತರದಿಂದ ಗೆಲುವು ದಾಖಲಿಸಿದೆ.
ಭಾರತ ತಂಡವು 1986ರಲ್ಲಿ ಮಾತ್ರ ಏಶ್ಯಕಪ್‌ನಲ್ಲಿ ಭಾಗವಹಿಸಿರಲಿಲ್ಲ. ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟ ಕಾರಣ 1990-91ರ ಏಶ್ಯಕಪ್ ಟೂರ್ನಿಯಿಂದ ಪಾಕಿಸ್ತಾನವು ಹೊರಗುಳಿದಿತ್ತು.
ಈ ವರ್ಷದ ಏಶ್ಯಕಪ್ ಟೂರ್ನಿಯು ಸೆಪ್ಟಂಬರ್ 9ರಿಂದ 28ರ ತನಕ ಯುಎಇನಲ್ಲಿ ನಡೆಯಲಿದೆ. ಟಿ20 ಮಾದರಿಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ‘ಎ’ ಗುಂಪಿನಲ್ಲಿರುವ ಭಾರತ ತಂಡವು ಪಾಕಿಸ್ತಾನ, ಯುಎಇ ಹಾಗೂ ಒಮಾನ್ ತಂಡದೊಂದಿಗೆ ಸ್ಥಾನ ಪಡೆದಿದೆ. ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಹಾಂಕಾಂಗ್ ‘ಬಿ’ ಗುಂಪಿನಲ್ಲಿವೆ.
*ಏಶ್ಯಕಪ್‌ನಲ್ಲಿ ಭಾರತ-ಪಾಕಿಸ್ತಾನ
1984: ಭಾರತಕ್ಕೆ 54 ರನ್ ಜಯ
1988: ಭಾರತಕ್ಕೆ 4 ವಿಕೆಟ್ ಗೆಲುವು
1995: ಪಾಕಿಸ್ತಾನಕ್ಕೆ 97 ರನ್ ಜಯ
1997: ಫಲಿತಾಂಶರಹಿತ
2000: ಪಾಕಿಸ್ತಾನಕ್ಕೆ 44 ರನ್ ಗೆಲುವು
2004: ಪಾಕಿಸ್ತಾನಕ್ಕೆ 59 ರನ್ ಜಯ
2008: ಭಾರತಕ್ಕೆ 6 ವಿಕೆಟ್; ಪಾಕಿಸ್ತಾನಕ್ಕೆ 8 ವಿಕೆಟ್ ಗೆಲುವು
2010: ಭಾರತಕ್ಕೆ 3 ವಿಕೆಟ್ ಗೆಲುವು
2012: ಭಾರತಕ್ಕೆ 6 ವಿಕೆಟ್ ಜಯ
2014: ಪಾಕಿಸ್ತಾನಕ್ಕೆ 1 ವಿಕೆಟ್ ಗೆಲುವು
2016*: ಭಾರತಕ್ಕೆ 5 ವಿಕೆಟ್ ಜಯ
2018: ಭಾರತಕ್ಕೆ 8 ವಿಕೆಟ್; 9 ವಿಕೆಟ್ ಗೆಲುವು
2022*: ಭಾರತಕ್ಕೆ 5 ವಿಕೆಟ್, ಪಾಕಿಸ್ತಾನಕ್ಕೆ 5 ವಿಕೆಟ್ ಜಯ
2023: ಫಲಿತಾಂಶ ರಹಿತ; ಭಾರತಕ್ಕೆ 228 ರನ್ ಜಯ
(* ಟಿ20 ಪಂದ್ಯಗಳು)