ಏಶ್ಯಕಪ್: ನೇಪಾಳದ ವಿರುದ್ಧ ಪಾಕಿಸ್ತಾನಕ್ಕೆ ಭರ್ಜರಿ ಜಯ
Photo: PTI
ಮುಲ್ತಾನ್, ಆ.30: ಬಾಬರ್ ಆಝಂ ಹಾಗೂ ಇಫ್ತಿಕಾರ್ ಅಹ್ಮದ್ ಶತಕ, ಶಾದಾಬ್‌ಖಾನ್(4-27) ನೇತೃತ್ವದ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಪಾಕಿಸ್ತಾನ ಕ್ರಿಕೆಟ್ ತಂಡ ನೇಪಾಳ ವಿರುದ್ಧ ಬುಧವಾರ ನಡೆದ ಏಶ್ಯಕಪ್‌ನ ಗ್ರೂಪ್ ನ ಉದ್ಘಾಟನಾ ಪಂದ್ಯದಲ್ಲಿ 238 ರನ್‌ನಿಂದ ಭರ್ಜರಿ ಗೆಲುವು ದಾಖಲಿಸಿದೆ.
ಗೆಲ್ಲಲು 343 ರನ್ ಗುರಿ ಪಡೆದಿದ್ದ ನೇಪಾಳ ತಂಡ 23.4 ಓವರ್‌ಗಳಲ್ಲಿ ಕೇವಲ 104 ರನ್ ಗಳಿಸಿ ಆಲೌಟಾಯಿತು. ನೇಪಾಳದ ಪರ ಸಂಪಾಲ್ ಕಮಿ(28 ರನ್) ಹಾಗೂ ಆರಿಫ್ ಶೇಖ್(26)ಎರಡಂಕೆಯ ಸ್ಕೋರ್ ಗಳಿಸಿದರು. ಉಳಿದವರು ಶಾದಾಬ್, ಹಾರಿಸ್ ರವೂಫ್(2-16) ಹಾಗೂ ಶಾಹೀನ್ ಅಫ್ರಿದಿ(2-27)ದಾಳಿಗೆ ತತ್ತರಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕ್ ತಂಡ ನಾಯಕ ಬಾಬರ್ ಆಝಂ(151 ರನ್, 131 ಎಸೆತ) ಹಾಗೂ ಇಫ್ತಿಕಾರ್ ಅಹ್ಮದ್(109 ರನ್, 71 ಎಸೆತ)ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 342 ರನ್ ಗಳಿಸಿತು.
ಪಾಕ್ ತಂಡ 4 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತ್ತು. ಆಗ 5ನೇ ವಿಕೆಟ್‌ಗೆ 214 ರನ್ ಜೊತೆಯಾಟ ನಡೆಸಿದ ಆಝಂ ಹಾಗೂ ಅಹ್ಮದ್ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. ಇದಕ್ಕೂ ಮೊದಲು ಮುಹಮ್ಮದ್ ರಿಝ್ವೆನ್(44 ರನ್) ಹಾಗೂ ಆಝಂ 3ನೇ ವಿಕೆಟಿಗೆ 86 ರನ್ ಸೇರಿಸಿ ತಂಡವನ್ನು ಆಧರಿಸಿದ್ದರು.