×
Ad

ನಾಳೆ ಏಶ್ಯಕಪ್ ಟಿ-20 ಟೂರ್ನಿಯ ಫೈನಲ್ : ಭಾರತ-ಪಾಕಿಸ್ತಾನ ಮುಖಾಮುಖಿ

9ನೇ ಬಾರಿ ಪ್ರಶಸ್ತಿ ಗೆಲ್ಲುವ ತವಕದಲ್ಲಿ ಸೂರ್ಯಕುಮಾರ್ ಬಳಗ

Update: 2025-09-27 20:21 IST
PC : PTI 

ದುಬೈ, ಸೆ.27: ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ರವಿವಾರ ನಡೆಯಲಿರುವ 2025ರ ಆವೃತ್ತಿಯ ಏಶ್ಯಕಪ್ ಟಿ-20 ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಮುಖಾಮುಖಿಯಾಗಲಿವೆ. ಕ್ರಿಕೆಟಿನ ಒಂದು ಅತ್ಯಂತ ಬಹುನಿರೀಕ್ಷಿತ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.

41 ವರ್ಷಗಳ ಏಶ್ಯಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಣಸಾಡಲಿವೆ.

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ತಂಡಗಳು ಪ್ರಸಕ್ತ ಟೂರ್ನಮೆಂಟ್‌ನಲ್ಲಿ ಮೂರನೇ ಬಾರಿ ಸೆಣಸಾಡುತ್ತಿವೆ. ಎರಡೂ ಬಾರಿಯೂ ಟೀಮ್ ಇಂಡಿಯಾವು ಪಾಕ್ ವಿರುದ್ಧ ಸುಲಭ ಜಯ ದಾಖಲಿಸಿ ಭರ್ಜರಿ ಫಾರ್ಮ್‌ನಲ್ಲಿದ್ದು, ಪಂದ್ಯಾವಳಿಯಲ್ಲಿ ಆಡಿರುವ ಎಲ್ಲ 6 ಪಂದ್ಯಗಳನ್ನು ಗೆದ್ದುಕೊಂಡಿದೆ.

ಪ್ರಸಕ್ತ ಏಶ್ಯ ಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಲೀಗ್ ಹಂತ ಹಾಗೂ ಸೂಪರ್-4 ಹಂತದಲ್ಲಿ ಭಾರತ ತಂಡವು ಜಯಭೇರಿ ಬಾರಿಸಿದೆ. ಸೂರ್ಯಕುಮಾರ್ ನೇತೃತ್ವದಲ್ಲಿ ಭಾರತ ತಂಡವು ರವಿವಾರದ ಫೈನಲ್ ಪಂದ್ಯದಲ್ಲೂ ಪಾಕಿಸ್ತಾನ ತಂಡಕ್ಕೆ ಸೋಲುಣಿಸಿ 9ನೇ ಬಾರಿ ಏಶ್ಯ ಕಪ್ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಲು ಎದುರು ನೋಡುತ್ತಿದೆ.

ಮತ್ತೊಂದೆಡೆ ಪಾಕಿಸ್ತಾನ ತಂಡವು ಪಂದ್ಯಾವಳಿಯಲ್ಲಿ ಮಿಶ್ರ ಫಲಿತಾಂಶ ಪಡೆದಿದೆ. ಪಂದ್ಯಾವಳಿಯಲ್ಲಿ ಭಾರತದ ವಿರುದ್ಧ ಆಡಿರುವ ಎರಡೂ ಪಂದ್ಯಗಳನ್ನು ಸೋತಿದ್ದು, ಇನ್ನುಳಿದ ಕೆಲವು ಪಂದ್ಯಗಳಲ್ಲಿ ಪ್ರಯಾಣದ ಗೆಲುವು, ಇನ್ನೂ ಕೆಲವು ಪಂದ್ಯದಲ್ಲಿ ಸುಲಭ ಜಯ ದಾಖಲಿಸಿದೆ.




 


ಪಾಕಿಸ್ತಾನ ಕ್ರಿಕೆಟ್ ತಂಡವು ತನ್ನ ತಪ್ಪನ್ನು ತಿದ್ದಿಕೊಂಡು ಭಾರತ ತಂಡದ ವಿರುದ್ಧ ಫೈನಲ್‌ನಲ್ಲಿ ಗೆಲುವು ದಾಖಲಿಸಿ 2012ರ ನಂತರ ಮೊದಲ ಬಾರಿ ಮೂರನೇ ಬಾರಿ ಏಶ್ಯ ಕಪ್ ಕಿರೀಟವನ್ನು ಧರಿಸುವ ವಿಶ್ವಾಸದಲ್ಲಿದೆ.

ಭಾರತ ತಂಡವು ಟೂರ್ನಿಯಲ್ಲಿ ತನ್ನ ಗೆಲುವಿನ ಓಟ ಮುಂದುವರಿಸುವತ್ತ ಚಿತ್ತ ಹರಿಸಿದರೆ, ಪಾಕಿಸ್ತಾನ ತಂಡ ‘ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ’ ಭಾರತಕ್ಕೆ ಸೋಲುಣಿಸಿ ಏಶ್ಯ ಕಪ್ ಟ್ರೋಫಿಯನ್ನು ಗೆಲ್ಲುವ ಗುರಿ ಇಟ್ಟುಕೊಂಡಿದೆ.

ಐದಕ್ಕಿಂತ ಹೆಚ್ಚು ತಂಡಗಳು ಭಾಗವಹಿಸಿರುವ ಐದು ಪಂದ್ಯಾವಳಿಗಳಲ್ಲಿ ಎರಡೂ ತಂಡಗಳು 5 ಬಾರಿ ಫೈನಲ್‌ನಲ್ಲಿ ಸೆಣಸಾಡಿವೆ. ಈ ಟೂರ್ನಿಗಳ ಹೆಡ್-ಟು-ಹೆಡ್ ದಾಖಲೆಯಲ್ಲಿ ಪಾಕಿಸ್ತಾನ ತಂಡವು 3-2 ಅಲ್ಪ ಮುನ್ನಡೆಯಲ್ಲಿದೆ.

ಪಾಕಿಸ್ತಾನ ತಂಡದ ಹಿರಿಯ ಬೌಲರ್ ಶಾಹೀನ್ ಅಫ್ರಿದಿ ಹಿಂದಿನ ಎರಡು ಪಂದ್ಯಗಳಲ್ಲಿ ತಲಾ 3 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೂರ್ನಿಯಲ್ಲಿ ಒಟ್ಟು 9 ವಿಕೆಟ್‌ಗಳನ್ನು ಪಡೆದಿದ್ದರೂ ಭಾರತ ತಂಡದ ವಿರುದ್ಧ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ. ಭಾರತ ವಿರುದ್ಧ ಆಡಿರುವ 2 ಪಂದ್ಯಗಳಲ್ಲಿ ತನ್ನ 5.5 ಓವರ್‌ಗಳಲ್ಲಿ 63 ರನ್ ನೀಡಿದ್ದಾರೆ.

ಭಾರತ ತಂಡವು ಫೈನಲ್‌ಗೆ ಅರ್ಹತೆ ಪಡೆದಿದ್ದರೂ ಅಷ್ಟೇನೂ ಮಹತ್ವವಲ್ಲದ ಶ್ರೀಲಂಕಾ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಒಟ್ಟು 202 ರನ್ ಗಳಿಸಿದ್ದರೂ ಸೂಪರ್ ಓವರ್‌ನಲ್ಲಿ ಗೆಲುವು ದಾಖಲಿಸಿದೆ.

ಮತ್ತೊಂದೆಡೆ, ಪಾಕಿಸ್ತಾನ ತಂಡವು ಶ್ರೀಲಂಕಾ ಹಾಗೂ ಬಾಂಗ್ಲಾದೇಶ ವಿರುದ್ಧ ಬ್ಯಾಟಿಂಗ್ ಕುಸಿತಕ್ಕೆ ಒಳಗಾಗಿದ್ದರೂ ಅದರಿಂದ ಹೊರಬಂದು ಫೈನಲ್‌ನಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಂಡಿದೆ.

ಭಾರತ ತಂಡದಲ್ಲಿ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸತತ 3 ಅರ್ಧಶತಕಗಳನ್ನು ಗಳಿಸಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆದರೆ ನಾಯಕ ಸೂರ್ಯಕುಮಾರ್ 5 ಇನಿಂಗ್ಸ್‌ಗಳಲ್ಲಿ ಕೇವಲ 71 ರನ್ ಗಳಿಸಿದ್ದು, ಇದರಲ್ಲಿ ಔಟಾಗದೆ 47 ರನ್ ಕೂಡ ಸೇರಿದೆ.

ಪಾಕಿಸ್ತಾನ ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, 3 ರಿಂದ 6ನೇ ಕ್ರಮಾಂಕದ ಬ್ಯಾಟರ್‌ಗಳು ಒಟ್ಟು 18.85 ಸರಾಸರಿ ಹೊಂದಿದ್ದಾರೆ. ಸಯೀಮ್ ಅಯ್ಯೂಬ್ ಹಾಗೂ ನಾಯಕ ಸಲ್ಮಾನ್ ಅಲಿ ಕಳಪೆ ಫಾರ್ಮ್‌ನಲ್ಲಿದ್ದಾರೆ. ಶ್ರೀಲಂಕಾ ವಿರುದ್ದ 134 ರನ್ ಚೇಸ್ ವೇಳೆ ಆಲ್‌ರೌಂಡರ್‌ಗಳಾದ ಹುಸೇನ್ ತಲತ್ ಹಾಗೂ ಮುಹಮ್ಮದ್ ನವಾಝ್ ತಂಡವನ್ನು ಆಧರಿಸಿದ್ದರು.

ಬಾಂಗ್ಲಾದೇಶ ವಿರುದ್ಧ ನವಾಝ್ ಹಾಗೂ ವಿಕೆಟ್‌ಕೀಪರ್ ಮುಹಮ್ಮದ್ ಹಾರಿಸ್ ಪಾಕಿಸ್ತಾನ ತಂಡವು 135 ರನ್ ಗಳಿಸಲು ನೆರವಾಗಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News