×
Ad

ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್‌ ಶಿಪ್ | ಗುಲ್ವೀರ್ ಸಿಂಗ್, ಪೂಜಾ, ನಂದಿನಿಗೆ ಒಲಿದ ಬಂಗಾರ

Update: 2025-05-30 21:32 IST

 ಗುಲ್ವೀರ್ ಸಿಂಗ್ | PC : X 

ಗುಮಿ(ದಕ್ಷಿಣ ಕೊರಿಯಾ): ಗುಲ್ವೀರ್ ಸಿಂಗ್, ಪೂಜಾ ಹಾಗೂ ನಂದಿನಿ ಅಗಸರ ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ ನಲ್ಲಿ ಬಂಗಾರ ಪದಕವನ್ನು ಗೆದ್ದುಕೊಂಡಿದ್ದಾರೆ. ಪಾರುಲ್ ಚೌಧರಿ ರಾಷ್ಟ್ರೀಯ ದಾಖಲೆಯೊಂದಿಗೆ ಬೆಳ್ಳಿ ಪದಕ ಬಾಚಿಕೊಂಡಿದ್ದಾರೆ.

ಚಾಂಪಿಯನ್‌ ಶಿಪ್‌ ನ 4ನೇ ದಿನವಾದ ಶುಕ್ರವಾರ ಪದಕಪಟ್ಟಿಯಲ್ಲಿ ಭಾರತ ತಂಡವು 2ನೇ ಸ್ಥಾನದಲ್ಲಿ ಮುಂದುವರಿದಿದೆ. ಭಾರತ ಗೆದ್ದಿರುವ ಒಟ್ಟು ಚಿನ್ನದ ಪದಕದ ಸಂಖ್ಯೆಯು 8ಕ್ಕೇರಿದೆ.

ಪುರುಷರ 5,000 ಮೀ. ಓಟದಲ್ಲಿ 13:24.78 ಸೆಕೆಂಡ್ ನಲ್ಲಿ ಗುರಿ ತಲುಪಿ ನೂತನ ಚಾಂಪಿಯನ್‌ ಶಿಪ್ ದಾಖಲೆ ನಿರ್ಮಿಸಿದ ಗುಲ್ವೀರ್ ಮೊದಲ ಸ್ಥಾನ ಪಡೆದರು. 2015ರಲ್ಲಿ ಮುಹಮ್ಮದ್ ಅಲ್-ಗರ್ನಿ ನಿರ್ಮಿಸಿದ್ದ ದಾಖಲೆ(13:34.47 ಸೆ.)ಯನ್ನು ಮುರಿದರು.

ಗುಲ್ವೀರ್ ಏಶ್ಯನ್ ಚಾಂಪಿಯನ್‌ ಶಿಪ್‌ ನಲ್ಲಿ ಪುರುಷರ 5,000 ಮೀ. ಓಟದಲ್ಲಿ ಚಿನ್ನದ ಪದಕ ಜಯಿಸಿರುವ ಭಾರತದ 3ನೇ ಅತ್ಲೀಟ್ ಆಗಿದ್ದಾರೆ. ಈ ಮೊದಲು ಗೋಪಾಲ್ ಸೈನಿ(1981)ಹಾಗೂ ಜಿ. ಲಕ್ಷ್ಮಣನ್(2017) ಈ ಸಾಧನೆ ಮಾಡಿದ್ದರು.

ಉತ್ತರಪ್ರದೇಶದ 26ರ ಹರೆಯದ ಗುಲ್ವೀರ್ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಕಳೆದ ಆವೃತ್ತಿಯ ಚಾಂಪಿಯನ್‌ ಶಿಪ್‌ ನಲ್ಲಿ ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು.

ಗುಲ್ವೀರ್ ಈ ವಾರಾರಂಭದಲ್ಲಿ ಪುರುಷರ 10,000 ಮೀ.ಓಟದಲ್ಲಿ ಭಾರತಕ್ಕೆ ಕ್ರೀಡಾಕೂಟದಲ್ಲಿ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಇದೀಗ 5 ಸಾವಿರ ಮೀ. ಓಟದಲ್ಲೂ ಚಿನ್ನ ಜಯಿಸಿ ಡಬಲ್ ಸಾಧನೆ ಮಾಡಿದ್ದಾರೆ.

ಮಾರ್ಚ್‌ನಲ್ಲಿ ನಡೆದಿದ್ದ ದಿ ಟೆನ್ ಸ್ಪರ್ಧಾವಳಿಯಲ್ಲಿ 10,000 ಮೀ.ಓಟದಲ್ಲಿ ತನ್ನ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. ಅಮೆರಿಕದಲ್ಲಿ ನಡೆದಿದ್ದ ವರ್ಲ್ಡ್ ಅತ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್‌ ನ ಭಾಗವಾಗಿರುವ ಈ ಸ್ಪರ್ಧಾವಳಿಯಲ್ಲಿ 27:00.22 ಸೆಕೆಂಡ್ ನಲ್ಲಿ ಗುರಿ ತಲುಪಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News