Davis Cup | ಶ್ರೀರಾಮ್ ಬಾಲಾಜಿ ಯಾವತ್ತೂ ರಾಷ್ಟ್ರೀಯ ತಂಡದ ಸದಸ್ಯ: ನಾಯಕ ರೋಹಿತ್ ರಾಜ್ ಪಾಲ್
ಎನ್. ಶ್ರೀರಾಮ್ ಬಾಲಾಜಿ | Photo Credit : PTI
ಹೊಸದಿಲ್ಲಿ, ಡಿ. 25: ಮುಂಬರುವ ನೆದರ್ ಲ್ಯಾಂಡ್ಸ್ ವಿರುದ್ಧದ ಡೇವಿಸ್ ಕಪ್ ಪಂದ್ಯಕ್ಕೆ ಅನುಭವಿ ಡಬಲ್ಸ್ ಆಟಗಾರ ಎನ್. ಶ್ರೀರಾಮ್ ಬಾಲಾಜಿಯನ್ನು ತಂಡದಿಂದ ಹೊರಗಿಟ್ಟರೂ ಅವರು ಯಾವಾಗಲೂ ರಾಷ್ಟ್ರೀಯ ತಂಡದಲ್ಲಿ ಆಡುವ ಅರ್ಹತೆಯನ್ನು ಹೊಂದಿದ್ದಾರೆ ಎಂದು ಭಾರತೀಯ ಡೇವಿಸ್ ಕಪ್ ತಂಡದ ನಾಯಕ ರೋಹಿತ್ ರಾಜ್ ಪಾಲ್ ಗುರುವಾರ ಹೇಳಿದ್ದಾರೆ. ತಂಡದ ಸಂಯೋಜನೆಯನ್ನು ಆಧರಿಸಿ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ನುಡಿದರು.
ಡಬಲ್ಸ್ ಪಂದ್ಯದಲ್ಲಿ ಡ್ಯೂಸ್- ಅಂಗಣದ ಪರಿಣತ ಆಟಗಾರನ ಅಗತ್ಯವಿತ್ತು, ಅದರ ಆಧಾರದಲ್ಲಿ ಡೇವಿಸ್ ಕಪ್ ತಂಡವನ್ನು ಆಯ್ಕೆಮಾಡಲಾಗಿದೆ ಎಂದು ರಾಜ್ ಪಾಲ್ ವಿವರಿಸಿದರು. ಈ ಸ್ಥಾನಕ್ಕೆ ಋತ್ವಿಕ್ ಬೊಲ್ಲಿಪಲ್ಲಿ ಅರ್ಹತೆ ಹೊಂದಿದ್ದಾರೆ. ಹಾಗಾಗಿ, ಯೂಕಿ ಭಾಂಬ್ರಿ ಜೊತೆಗಿನ ಡಬಲ್ಸ್‌ಗೆ ಅವರನ್ನು ಆಯ್ಕೆ ಮಾಡಲಾಯಿತು ಎಂದರು.
‘‘ತಂಡ ಸಂಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ನಾವು ಡ್ಯೂಸ್-ಅಂಗಣದ ಪರಿಣತ ಆಟಗಾರನ ಹುಡುಕಾಟದಲ್ಲಿದ್ದೆವು. ಯೂಕಿ ಆ್ಯಡ್- ಅಂಗಣದಿಂದ ಮಾತ್ರ ಆಡುತ್ತಾರೆ. ಹಾಗಾಗಿ ಡ್ಯೂಸ್-ಅಂಗಣ ಪರಿಣತ ಋತ್ವಿಕ್‌ರನ್ನು ಆಯ್ಕೆ ಮಾಡಲಾಯಿತು. ಬಾಲಾಜಿ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗೆ ಯಾವತ್ತೂ ಕಣದಲ್ಲಿರುತ್ತಾರೆ’’ ಎಂದು ಪಿಟಿಐಯೊಂದಿಗೆ ಮಾತನಾಡಿದ ರಾಜ್ ಪಾಲ್ ಹೇಳಿದರು.
ಡ್ಯೂಸ್-ಅಂಗಣವೆಂದರೆ ಟೆನಿಸ್ ಅಂಗಣದ ಬಲ ಭಾಗ ಮತ್ತು ಆ್ಯಡ್ (ಅಡ್ವಾಂಟೇಜ್) ಅಂಗಣವೆಂದರೆ ಎಡ ಭಾಗ.