ವಿಜಯ ಹಝಾರೆ ಟ್ರೋಫಿ: ಕೊಹ್ಲಿ ವಿಶ್ವ ದಾಖಲೆ
ವಿರಾಟ್ ಕೊಹ್ಲಿ | Photo Credit : PTI
ಬೆಂಗಳೂರು, ಡಿ. 26: ವಿಜಯ ಹಝಾರೆ ಟ್ರೋಫಿ ಪಂದ್ಯಾವಳಿಯಲ್ಲಿ, ಶುಕ್ರವಾರ ಗುಜರಾತ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಿಲ್ಲಿ ತಂಡದ ಪರವಾಗಿ 77 ರನ್‍ಗಳನ್ನು ಬಾರಿಸಿದ್ದಾರೆ. ಇದರೊಂದಿಗೆ, ಲಿಸ್ಟ್ ಎ ಕ್ರಿಕೆಟ್‍ನಲ್ಲಿ ಅತಿ ಹೆಚ್ಚಿನ ರನ್ ಸರಾಸರಿಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆ ಈವರೆಗೆ ಆಸ್ಟ್ರೇಲಿಯದ ಮೈಕೆಲ್ ಬೆವನ್ ಹೆಸರಿನಲ್ಲಿತ್ತು.
ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ 61 ಎಸೆತಗಳಲ್ಲಿ 77 ರನ್‍ಗಳನ್ನು ಬಾರಿಸಿದರು. ಇದರೊಂದಿಗೆ ಅವರ ಲಿಸ್ಟ್ ಎ ಸರಾಸರಿ 57.87ಕ್ಕೆ ಏರಿತು. ಈ ಮೂಲಕ ಅವರು ಬೆವನ್‍ರ 57.86ರ ಸರಾಸರಿಯನ್ನು ಕೂದಲೆಳೆಯ ಅಂತರದಿಂದ ಹಿಂದಿಕ್ಕಿದರು.
ಕೊಹ್ಲಿ ಕಳೆದ ಆರು 50-ಓವರ್ ಪಂದ್ಯಗಳಲ್ಲಿ 146ರ ಸರಾಸರಿಯಲ್ಲಿ ರನ್‍ಗಳನ್ನು ಗಳಿಸಿದ್ದಾರೆ.
ಶುಕ್ರವಾರ ದಿಲ್ಲಿ ತಂಡವು ಗುಜರಾತನ್ನು ಏಳು ರನ್‍ಗಳಿಂದ ಸೋಲಿಸಿದೆ. 77 ರನ್‍ಗಳನ್ನು ಬಾರಿಸಿದ ಹಾಗೂ ಎರಡು ಕ್ಯಾಚ್‍ಗಳನ್ನು ಹಿಡಿದ ಕೊಹ್ಲಿಯನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.
ಟಾಸ್ ಗೆದ್ದ ಗುಜರಾತ್ ಎದುರಾಳಿಯನ್ನು ಮೊದಲು ಬ್ಯಾಟಿಂಗ್‍ಗೆ ಇಳಿಸಿತು. ದಿಲ್ಲಿ 50 ಓವರ್‌ಗಳಲ್ಲಿ 9 ವಿಕೆಟ್‍ಗಳ ನಷ್ಟಕ್ಕೆ 254 ರನ್‍ಗಳನ್ನು ಗಳಿಸಿತು.
ವಿರಾಟ್ ಕೊಹ್ಲಿಯ 77 ರನ್ ತಂಡದ ಗರಿಷ್ಠ ಮೊತ್ತವಾಯಿತು. ಉಳಿದಂತೆ ನಾಯಕ ರಿಶಭ್ ಪಂತ್ 70 ರನ್‍ಗಳ ದೇಣಿಗೆ ನೀಡಿದರು. ಹರ್ಷ ತ್ಯಾಗಿ 40 ರನ್‍ಗಳನ್ನು ಗಳಿಸಿದರು.
ಗುಜರಾತ್ ಪರವಾಗಿ ವಿಶಾಲ್ ಜೈಸ್ವಾಲ್ ನಾಲ್ಕು ವಿಕೆಟ್‍ಗಳನ್ನು ಉರುಳಿಸಿದರೆ, ರವಿ ಬಿಷ್ಣೋಯ್ ಎರಡು ವಿಕೆಟ್‍ಗಳನ್ನು ಪಡೆದರು.
ಗೆಲ್ಲಲು 255 ರನ್‍ಗಳ ಗುರಿಯನ್ನು ಪಡೆದ ಗುಜರಾತ್, 47.4 ಓವರ್‌ಗಳಲ್ಲಿ 247 ರನ್‍ಗಳಿಗೆ ಸರ್ವಪತನಗೊಂಡಿತು.
ಆರಂಭಿಕ ಬ್ಯಾಟರ್ ಆರ್ಯ ದೇಸಾಯಿ 57 ರನ್‍ಗಳನ್ನು ಗಳಿಸಿದರು. ಉರ್ವಿ ಪಟೇಲ್ 31, ಅಭಿಶೇಕ್ ದೇಸಾಯಿ 26, ಸೌರವ್ ಚೌಹಾಣ್ 49 ಮತ್ತು ವಿಶಾಲ್ ಜೈಸ್ವಾಲ್ 26 ರನ್‍ಗಳ ದೇಣಿಗೆ ನೀಡಿದರು.
ದಿಲ್ಲಿ ಪರವಾಗಿ ಪ್ರಿನ್ಸ್ ಯಾದವ್ 3 ವಿಕೆಟ್‍ಗಳನ್ನು ಕೆಡವಿದರೆ, ಇಶಾಂತ್ ಶರ್ಮಾ ಮತ್ತು ಅರ್ಪಿತ್ ರಾಣಾ ತಲಾ ಎರಡು ವಿಕೆಟ್‍ಗಳನ್ನು ಪಡೆದರು.
ಲಿಸ್ಟ್ ಎ ಕ್ರಿಕೆಟ್‍ನಲ್ಲಿ ಗರಿಷ್ಠ ರನ್ ಸರಾಸರಿ ಹೊಂದಿರುವ ಬ್ಯಾಟರ್‍ಗಳು
1. ವಿರಾಟ್ ಕೊಹ್ಲಿ (ಭಾರತ)- 57.87
2. ಮೈಕೆಲ್ ಬೆವನ್ (ಆಸ್ಟ್ರೇಲಿಯ)- 57.86
3. ಸ್ಯಾಮ್ ಹೇನ್ (ಇಂಗ್ಲೆಂಡ್)- 57.76
4. ಚೇತೇಶ್ವರ್ ಪೂಜಾರ (ಭಾರತ)- 57.01
5. ಋತುರಾಜ್ ಗಾಯಕ್ವಾಡ್ (ಭಾರತ)- 56.68
6. ಬಾಬರ್ ಅಝಮ್ (ಪಾಕಿಸ್ತಾನ)- 53.82
7. ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕ)- 53.46