×
Ad

Vijay Hazare Trophy | ಕೇರಳವನ್ನು 8 ವಿಕೆಟ್‍ ನಿಂದ ಸೋಲಿಸಿದ ಕರ್ನಾಟಕ

Update: 2025-12-26 21:45 IST

ಸಾಂದರ್ಭಿಕ ಚಿತ್ರ | Photo Credit : X

ಅಹ್ಮದಾಬಾದ್, ಡಿ. 26: ವಿಜಯ ಹಝಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಶುಕ್ರವಾರ, ದೇವದತ್ತ ಪಡಿಕ್ಕಲ್ ಮತ್ತು ಕರುಣ್ ನಾಯರ್ ಅವರ ಶತಕಗಳ ನೆರವಿನಿಂದ ಹಾಲಿ ಚಾಂಪಿಯನ್ ಕರ್ನಾಟಕವು ಕೇರಳ ತಂಡವನ್ನು ಎಂಟು ವಿಕೆಟ್‍ ಗಳ ಭರ್ಜರಿ ಅಂತರದಿಂದ ಸೋಲಿಸಿದೆ.

ಅಹ್ಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಮ್ ಬಿ ಮೈದಾನದಲ್ಲಿ ನಡೆದ ಎರಡನೇ ಗುಂಪು ಎ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕವು ಎದುರಾಳಿ ತಂಡವನ್ನು ಮೊದಲು ಬ್ಯಾಟಿಂಗ್‍ ಗೆ ಇಳಿಸಿತು.

ಕೇರಳವು ಬಾಬಾ ಅಪರಾಜಿತ ಮತ್ತು ಮುಹಮ್ಮದ್ ಅಝರುದ್ದೀನ್‍ರ ಅರ್ಧ ಶತಕಗಳ ನೆರವಿನಿಂದ 50 ಓವರ್‍ ಗಳಲ್ಲಿ ಏಳು ವಿಕೆಟ್‍ ಗಳ ನಷ್ಟಕ್ಕೆ 284 ರನ್ ಗಳಿಸಿತು.

ಕೇರಳದ ಆರಂಭ ಉತ್ತಮವಾಗಿರಲಿಲ್ಲ. ಅದು ತನ್ನ ಮೊದಲ ಮೂರು ವಿಕೆಟ್‍ ಗಳನ್ನು ಕೇವಲ 49 ರನ್‍ ಗಳಿಗೆ ಕಳೆದುಕೊಂಡಿತು. ಆದರೆ ಬಾಬಾ ಅಪರಾಜಿತ (62 ಎಸೆತಗಳಲ್ಲಿ 71 ರನ್) ಮತ್ತು ವಿಕೆಟ್‍ ಕೀಪರ್ ಮುಹಮ್ಮದ್ ಅಝರುದ್ದೀನ್ (58 ಎಸೆತಗಳಲ್ಲಿ 84 ರನ್) ತಂಡಕ್ಕೆ ಸ್ಥಿರತೆ ಒದಗಿಸಿದರು.

ಅಖಿಲ್ ಸ್ಕಾರಿಯ 27 ರನ್‍ ಗಳ ಕೊಡುಗೆ ನೀಡಿದರೆ, ವಿಷ್ಣು ವಿನೋದ್ 35 ರನ್‍ ಗಳನ್ನು ಗಳಿಸಿದರು. ಎಮ್.ಡಿ. ನಿದೀಶ್ 34 ರನ್ ಗಳಿಸಿ ಔಟಾಗದೆ ಉಳಿದರು.

ಕರ್ನಾಟಕದ ಪರವಾಗಿ ಎಡಗೈ ಮಧ್ಯಮ ವೇಗಿ ಅಭಿಲಾಶ್ ಶೆಟ್ಟಿ ಮೂರು ವಿಕೆಟ್‍ ಗಳನ್ನು ಪಡೆದರೆ, ಶ್ರೇಯಸ್ ಗೋಪಾಲ್ ಎರಡು ವಿಕೆಟ್‍ ಗಳನ್ನು ಉರುಳಿಸಿದರು.

ಗೆಲುವಿಗೆ 285 ರನ್‍ಗಳ ಗುರಿಯನ್ನು ಪಡೆದ ಕರ್ನಾಟಕ 48.2 ಓವರ್‍ ಗಳಲ್ಲಿ ಕೇವಲ ಎರಡು ವಿಕೆಟ್‍ ಗಳನ್ನು ಕಳೆದುಕೊಂಡು ವಿಜಯದ ಗುರಿ ತಲುಪಿತು.

ನಾಯಕ ಮಯಾಂಕ್ ಅಗರ್ವಾಲ್ (1)ರನ್ನು ಕರ್ನಾಟಕವು ಬೇಗನೇ ಕಳೆದುಕೊಂಡರೂ, ಪಡಿಕ್ಕಲ್ ಮತ್ತು ನಾಯರ್ ಎರಡನೇ ವಿಕೆಟ್‍ಗೆ 223 ರನ್‍ ಗಳನ್ನು ಸೇರಿಸಿದರು.

ಪಡಿಕ್ಕಲ್ 137 ಎಸೆತಗಳಲ್ಲಿ 124 ರನ್ ಗಳಿಸಿದರೆ, ನಾಯರ್ 130 ಎಸೆತಗಳಲ್ಲಿ 130 ರನ್ ಗಳಿಸಿ ಔಟಾಗದೆ ಉಳಿದರು. ರವಿಚಂದ್ರನ್ ಸ್ಮರಣ್ 25 ರನ್ ಗಳಿಸಿ ಔಟಾಗದೆ ಉಳಿದರು.

ಸಂಕ್ಷಿಪ್ತ ಸ್ಕೋರ್

ಕೇರಳ (50 ಓವರ್‍ ಗಳಲ್ಲಿ) 284-7

ಬಾಬಾ ಅಪರಾಜಿತ 71, ಅಖಿಲ್ ಸ್ಕಾರಿಯ 27, ವಿಷ್ಣು ವಿನೋದ್ 35, ಮುಹಮ್ಮದ್ ಅಝರುದ್ದೀನ್ (ಔಟಾಗದೆ) 84. ಎಮ್.ಡಿ. ನಿದೀಶ್ (ಔಟಾಗದೆ) 34

ಅಭಿಲಾಶ್ ಶೆಟ್ಟಿ 3-59, ಶ್ರೇಯಸ್ ಗೋಪಾಲ್ 2-61

ಕರ್ನಾಟಕ (48.2 ಓವರ್‍ ಗಳಲ್ಲಿ) 285-2

ದೇವದತ್ತ ಪಡಿಕ್ಕಲ್ 124, ಕರುಣ್ ನಾಯರ್ (ಔಟಾಗದೆ) 130, ರವಿಚಂದ್ರನ್ ಸ್ಮರಣ್ (ಔಟಾಗದೆ) 25

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News