2025ರ ಸಾಲಿನಲ್ಲಿ ‘ಖೇಲ್ ರತ್ನʼಗಳಿಲ್ಲ!
24 ಕ್ರೀಡಾಳುಗಳಿಗೆ ಅರ್ಜುನ ಪ್ರಶಸ್ತಿ
Photo Credit : X
ಹೊಸದಿಲ್ಲಿ, ಡಿ. 25: ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ‘ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ’ವನ್ನು ಈ ಬಾರಿ ನೀಡದಿರಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ಸಮಿತಿಯ ಮೂಲಗಳು ತಿಳಿಸಿವೆ. ಈ ಪ್ರತಿಷ್ಠಿತ ಪ್ರಶಸ್ತಿಗೆ ಯಾವುದೇ ಕ್ರೀಡಾಪಟು ಅರ್ಹನಾಗಿಲ್ಲ ಎಂಬುದಾಗಿ ಪರಿಗಣಿಸಿರುವುದು ಪ್ರಶಸ್ತಿಯ 34 ವರ್ಷಗಳ ಇತಿಹಾಸದಲ್ಲಿ ಇದು ಕೇವಲ ಮೂರನೇ ಬಾರಿಯಾಗಿದೆ. ಈ ಹಿಂದೆ, 2008 ಮತ್ತು 2014ರಲ್ಲಿ ಪ್ರಶಸ್ತಿಯನ್ನು ನೀಡಲಾಗಿರಲಿಲ್ಲ.
ಬುಧವಾರ ಹೊಸದಿಲ್ಲಿಯಲ್ಲಿ ಸಭೆ ಸೇರಿದ ಆಯ್ಕೆ ಸಮಿತಿಯು 24 ಕ್ರೀಡಾಳುಗಳನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.
ಅದೇ ವೇಳೆ, ಆಯ್ಕೆ ಸಮಿತಿಯ ಸಭೆ ಮುಗಿಯುವ ಮುನ್ನವೇ ಪ್ರಶಸ್ತಿ ವಿಜೇತರ ಹೆಸರುಗಳನ್ನು ಸೋರಿಕೆ ಮಾಡಲಾಗಿದೆ ಎಂಬ ವಿವಾದವೂ ಎದ್ದಿದೆ.
ಟೋಕಿಯೊ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ಗಳಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಪುರುಷರ ಹಾಕಿ ತಂಡದ ಉಪನಾಯಕ ಹಾರ್ದಿಕ್ ಸಿಂಗ್ ಹಾಗೂ ಮಹಿಳಾ ಕ್ರಿಕೆಟ್ ವಿಶ್ವಕಪ್ ವಿಜೇತ ನಾಯಕಿಯರಾದ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮತಿ ಮಂಧಾನಗೆ ಖೇಲ್ ರತ್ನ ನೀಡುವ ಬಗ್ಗೆ ಚರ್ಚೆಯಾಗಿತ್ತು ಎನ್ನಲಾಗಿದೆ.
ವಿಶ್ವ ಚಾಂಪಿಯನ್ ಹಾಗೂ ಏಶ್ಯದ ಅಗ್ರ ರ್ಯಾಂಕಿಂಗ್‌ನ ಕಾಂಪೌಂಡ್ ಬಿಲ್ಲುಗಾರ್ತಿ ಜ್ಯೋತಿ ಸುರೇಖಾ ವೆನ್ನಮ್ ಕಳೆದ ಮೂರು ವರ್ಷಗಳಲ್ಲಿ ಖೇಲ್ ರತ್ನ ಅರ್ಜಿದಾರರ ಪೈಕಿ ಗರಿಷ್ಠ ಅಂಕಗಳನ್ನು ಗಳಿಸಿದ್ದರು ಎನ್ನಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ನಾಮನಿರ್ದೇಶನಗಳನ್ನು ಮಾಡದಿರುವ ಹಿನ್ನೆಲೆಯಲ್ಲಿ, ಕ್ರಿಕೆಟಿಗರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗಿಲ್ಲ.
► ಅರ್ಜುನ ಪ್ರಶಸ್ತಿ ವಿಜೇತರು
ಹದಿಹರಯದ ಚೆಸ್ ತಾರೆ ದಿವ್ಯಾ ದೇಶ್‌ಮುಖ್ ಮತ್ತು ಡೆಕತ್ಲಾನ್ ಕ್ರೀಡಾಪಟು ತೇಜಸ್ವಿನ್ ಶಂಕರ್ ಸೇರಿದಂತೆ 24 ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಪ್ರಶಸ್ತಿ ವಿಜೇತರು: ತೇಜಸ್ವಿನ್ ಶಂಕರ್ (ಅತ್ಲೆಟಿಕ್ಸ್), ಪ್ರಿಯಾಂಕಾ (ಅತ್ಲೆಟಿಕ್ಸ್), ನರೇಂದ್ರ (ಬಾಕ್ಸಿಂಗ್), ವಿದಿತ್ ಗುಜರಾತಿ (ಚೆಸ್), ದಿವ್ಯಾ ದೇಶ್‌ಮುಖ್ (ಚೆಸ್), ಧನುಷ್ ಶ್ರೀಕಾಂತ್ (ಕಿವುಡರ ಶೂಟಿಂಗ್), ಪ್ರಣತಿ ನಾಯಕ್ (ಜಿಮ್ನಾಸ್ಟಿಕ್ಸ್), ರಾಜ್ ಕುಮಾರ್ ಪಾಲ್ (ಹಾಕಿ), ಸುರ್ಜೀತ್ (ಕಬಡ್ಡಿ), ನಿರ್ಮಲಾ ಭಾತಿ (ಖೋ ಖೋ), ರುದ್ರಾಂಶ್ ಖಂಡೆಲ್ವಾಲ್ (ಪ್ಯಾರಾ-ಶೂಟಿಂಗ್), ಏಕ್ತಾ ಭಯಾನ್ (ಪ್ಯಾರಾ ಅತ್ಲೆಟಿಕ್ಸ್), ಪದ್ಮನಾಭ ಸಿಂಗ್ (ಪೋಲೊ), ಅರವಿಂದ ಸಿಂಗ್ (ರೋವಿಂಗ್), ಅಖಿಲ್ ಶೇವರಾನ್ (ಶೂಟಿಂಗ್), ಮೆಹುಲ್ ಘೋಷ್ (ಶೂಟಿಂಗ್), ಸುತೀರ್ಥ ಮುಖರ್ಜಿ (ಟೇಬಲ್ ಟೆನಿಸ್), ಸೋನಮ್ ಮಲಿಕ್ (ಕುಸ್ತಿ), ಆರತಿ (ಯೋಗ), ತ್ರೀಸಾ ಜೋಲಿ (ಬ್ಯಾಡ್ಮಿಂಟನ್), ಗಾಯತ್ರಿ ಗೋಪಿಚಂದ್ (ಬ್ಯಾಡ್ಮಿಂಟನ್), ಲಾಲ್‌ರೆಮ್ಸಿಯಾಮಿ ಹಮರ್ ರೆಟೆ (ಹಾಕಿ), ಮುಹಮ್ಮದ್ ಅಫ್ಸಲ್ (ಅತ್ಲೆಟಿಕ್ಸ್), ಪೂಜಾ (ಕಬಡ್ಡಿ).
►ಯೋಗಕ್ಕೆ ಅರ್ಜುನ ಪ್ರಶಸ್ತಿ
ಕ್ರೀಡಾ ಪ್ರಶಸ್ತಿಗಳ ಇತಿಹಾಸದಲ್ಲಿ ಮೊದಲ ಬಾರಿಗೆ, ಆಯ್ಕೆ ಸಮಿತಿಯು ಯೋಗಾಸನ ಪಟು ಆರತಿ ಪಾಲ್ ರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಪ್ರಶಸ್ತಿಗೆ ಅರ್ಹ ಕ್ರೀಡೆಗಳ ಪಟ್ಟಿಗೆ ಯೋಗಾಸನ ಸೇರ್ಪಡೆಗೆ ಕ್ರೀಡಾ ಸಚಿವಾಲಯವು ಐದು ವರ್ಷಗಳ ಹಿಂದೆಯೇ ಅನುಮೋದನೆ ನೀಡಿತ್ತು.
ಹಾಲಿ ರಾಷ್ಟ್ರೀಯ ಮತ್ತು ಏಶ್ಯನ್ ಚಾಂಪಿಯನ್ ಆರತಿ, 2026 ಏಶ್ಯನ್ ಗೇಮ್ಸ್‌ಗೆ ಪ್ರದರ್ಶನ ಸ್ಪರ್ಧೆಯಾಗಿ ಸೇರ್ಪಡೆಗೊಂಡಿರುವ ಯೋಗಾಸನದಲ್ಲಿ ಆರತಿ ಸ್ಪರ್ಧಿಸಲಿದ್ದಾರೆ.