×
Ad

ಆಸ್ಟ್ರೇಲಿಯ-ಇಂಗ್ಲೆಂಡ್ 4ನೇ ಆ್ಯಶಸ್ ಟೆಸ್ಟ್: ಮೊದಲ ದಿನವೇ 20 ವಿಕೆಟ್‍ಗಳು ಪತನ

Update: 2025-12-26 20:06 IST

Photo Credit : AP \ PTI 

ಮೆಲ್ಬರ್ನ್,ಡಿ.26: ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನೆರೆದ ದಾಖಲೆ ಸಂಖ್ಯೆಯ ಪ್ರೇಕ್ಷಕರ ಎದುರು ಶುಕ್ರವಾರ ಆಸ್ಟ್ರೇಲಿಯ ಮತ್ತು ಪ್ರವಾಸಿ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ ನಾಲ್ಕನೇ ಆ್ಯಶಸ್ ಟೆಸ್ಟ್‌ನ ಮೊದಲ ದಿನ 20 ವಿಕೆಟ್‍ಗಳು ಉರುಳಿದವು.

ಇದು 1902ರ ಆ್ಯಶಸ್ ಸರಣಿಯ ಬಳಿಕ, ಮೆಲ್ಬರ್ನ್ ಮೈದಾನದಲ್ಲಿ ಒಂದು ದಿನದಲ್ಲಿ ಉರುಳಿದ ಗರಿಷ್ಠ ಸಂಖ್ಯೆಯ ವಿಕೆಟ್‍ಗಳಾಗಿವೆ. 1902ರಲ್ಲಿ ದಾಖಲೆಯ 25 ವಿಕೆಟ್‍ಗಳು ಉರುಳಿದ್ದವು.

ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ದಾಖಲೆಯ 93,442 ಪ್ರೇಕ್ಷಕರು ನೆರೆದಿದ್ದರು. ಈ ಮೈದಾನದ ಹಿಂದಿನ ದಾಖಲೆ 93,013 ಆಗಿದೆ. 2015ರ ವಿಶ್ವಕಪ್ ಫೈನಲ್ ವೀಕ್ಷಣೆಗೆ ಅಷ್ಟು ಜನ ಸೇರಿದ್ದರು.

ಮೊದಲ ದಿನದಾಟದ ಕೊನೆಯ ಹೊತ್ತಿಗೆ ಆಸ್ಟ್ರೇಲಿಯವು ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ ನಾಲ್ಕು ರನ್‍ಗಳನ್ನು ಗಳಿಸಿದೆ. ನೈಟ್‍ವಾಚ್‍ಮನ್ ಸ್ಕಾಟ್ ಬೊಲಾಂಡ್ ನಾಲ್ಕು ರನ್ ಗಳಿಸಿ ಕ್ರೀಸ್‍ನಲ್ಲಿದ್ದಾರೆ. ಇನ್ನೋರ್ವ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಇನ್ನಷ್ಟೇ ಖಾತೆಯನ್ನು ತೆರೆಯಬೇಕಾಗಿದೆ. ಆಸ್ಟ್ರೇಲಿಯವು ಒಟ್ಟಾರೆ 46 ರನ್‍ಗಳ ಮುನ್ನಡೆಯನ್ನು ಹೊಂದಿದೆ.

ಸಾಂಪ್ರದಾಯಿಕ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ, ಟಾಸ್ ಗೆದ್ದ ಇಂಗ್ಲೆಂಡ್ ಎದುರಾಳಿ ತಂಡವನ್ನು ಮೊದಲು ಬ್ಯಾಟಿಂಗ್‍ಗೆ ಇಳಿಸಿತು. ಆಸ್ಟ್ರೇಲಿಯವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಜೋಶ್ ಟಂಗ್‍ರ ಉರಿದಾಳಿಗೆ ತತ್ತರಿಸಿ 152 ರನ್‍ಗೆ ಆಲೌಟ್ ಆಯಿತು.

ಜೋಶ್ ಟಂಗ್ 45 ರನ್‍ಗಳನ್ನು ಕೊಟ್ಟು ಐದು ವಿಕೆಟ್‍ಗಳನ್ನು ಉರುಳಿಸಿದರು. ಇದು ಅವರ ಜೀವನಶ್ರೇಷ್ಠ ನಿರ್ವಹಣೆಯಾಗಿದೆ.

ಆಸ್ಟ್ರೇಲಿಯದ ಪರವಾಗಿ 35 ರನ್‍ಗಳನ್ನು ಗಳಿಸಿದ ಮೈಕಲ್ ನೇಸರ್ ತಂಡದ ಗರಿಷ್ಠ ಗಳಿಕೆದಾರರಾದರು. ಉಳಿದಂತೆ ಉಸ್ಮಾನ್ ಖ್ವಾಜಾ 29 ರನ್‍ಗಳ ದೇಣಿಗೆ ನೀಡಿದರು. ಅಲೆಕ್ಸ್ ಕ್ಯಾರಿ 20 ರನ್‍ಗಳನ್ನು ಗಳಿಸಿದರು.

ಇಂಗ್ಲೆಂಡ್ ಪರವಾಗಿ ಗಸ್ ಆ್ಯಟ್ಕಿನ್ಸನ್ 28 ರನ್‍ಗಳನ್ನು ನೀಡಿ 2 ವಿಕೆಟ್‍ಗಳನ್ನು ಉರುಳಿಸಿದರು.

ಬಳಿಕ, ಇಂಗ್ಲೆಂಡ್‍ನ ಪ್ರಥಮ ಇನಿಂಗ್ಸ್‌ನಲ್ಲಿ ಬ್ಯಾಟರ್‌ಗಳು ಇನ್ನಷ್ಟು ಕ್ಷಿಪ್ರ ಕುಸಿತ ಕಂಡರು. ಮಿಚೆಲ್ ಸ್ಟಾರ್ಕ್, ಮೈಕಲ್ ನೇಸರ್ ಮತ್ತು ಸ್ಕಾಟ್ ಬೊಲಾಂಡ್‍ರ ಮಾರಕ ದಾಳಿಗೆ ತತ್ತರಿಸಿದರು.

ಇಂಗ್ಲೆಂಡ್ ಇನಿಂಗ್ಸ್‌ಗೆ ಆಧಾರ ನೀಡಿದ್ದು ಹ್ಯಾರಿ ಬ್ರೂಕ್ ಮಾತ್ರ. ಅವರು 34 ಎಸೆತಗಳಲ್ಲಿ 41 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರ್‌ದಾರರಾದರು. ಗಸ್ ಆ್ಯಟ್ಕಿನ್ಸನ್ 28 ರನ್‍ಗಳನ್ನು ಕೂಡಿಸಿದರೆ, ನಾಯಕ ಬೆನ್ ಸ್ಟೋಕ್ಸ್ 16 ರನ್‍ಗಳ ದೇಣಿಗೆ ನೀಡಿದರು.

ಉಳಿದ ಬ್ಯಾಟರ್‌ಗಳಿಗೆ ಎರಡಂಕಿ ಮೊತ್ತ ತಲುಪಲು ಸಾಧ್ಯವಾಗಲಿಲ್ಲ.

ಅಂತಿಮವಾಗಿ ಅದು 29.5 ಓವರ್‌ಗಳಲ್ಲಿ 110 ರನ್‍ಗಳನ್ನು ಗಳಿಸಿ ಆಲೌಟಾಯಿತು.

ಇಂಗ್ಲೆಂಡ್ ಈಗಾಗಲೇ ಮೊದಲ ಮೂರು ಟೆಸ್ಟ್‌ಗಳನ್ನು ಸೋತು ಸರಣಿಯನ್ನು ಕಳೆದುಕೊಂಡಿದೆ.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯ ಮೊದಲ ಇನಿಂಗ್ಸ್ (45.2 ಓವರ್‍ಗಳಲ್ಲಿ) 152

ಉಸ್ಮಾನ್ ಖ್ವಾಜಾ 29, ಅಲೆಕೆ ಕ್ಯಾರಿ 20, ಮೈಕಲ್ ನೇಸರ್ 35

ಗಸ್ ಆ್ಯಟ್ಕಿನ್ಸನ್ 2-28, ಜೋಶ್ ಟಂಗ್ 5-45

ಇಂಗ್ಲೆಂಡ್ ಮೊದಲ ಇನಿಂಗ್ಸ್ (29.5 ಓವರ್‍ಗಳಲ್ಲಿ) 110

ಹ್ಯಾರಿ ಬ್ರೂಕ್ 41, ಬೆನ್ ಸ್ಟೋಕ್ಸ್ 16, ಗಸ್ ಆ್ಯಟ್ಕಿನ್ಸನ್ 28

ಮಿಚೆಲ್ ಸ್ಟಾರ್ಕ್ 2-23, ಮೈಕಲ್ ನೇಸರ್ 4-45, ಸ್ಕಾಟ್ ಬೊಲಾಂಡ್ 3-30

ಆಸ್ಟ್ರೇಲಿಯ ದ್ವಿತೀಯ ಇನಿಂಗ್ಸ್ (ಒಂದು ಓವರ್‍ನಲ್ಲಿ) 4-0

ಸ್ಕಾಟ್ ಬೊಲಾಂಡ್ 4 (ಔಟಾಗದೆ), ಟ್ರಾವಿಸ್ ಹೆಡ್ (ಔಟಾಗದೆ) 0

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News