×
Ad

ಏಶ್ಯನ್ ಚಾಂಪಿಯನ್ಸ್ ಟ್ರೋಫಿ: ಭಾರತದ ಹಾಕಿ ತಂಡ ಪ್ರಕಟ

Update: 2024-08-28 21:44 IST

PC : NDTV 

ಹೊಸದಿಲ್ಲಿ: ಮುಂಬರುವ ಏಶ್ಯನ್ ಚಾಂಪಿಯನ್ಸ್ ಟ್ರೋಫಿಗೆ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ 18 ಸದಸ್ಯರ ಭಾರತೀಯ ಪುರುಷರ ಹಾಕಿ ತಂಡವನ್ನು ಹಾಕಿ ಇಂಡಿಯಾ ಬುಧವಾರ ಪ್ರಕಟಿಸಿದೆ. ಪ್ಯಾರಿಸ್ ಒಲಿಂಪಿಕ್ಸ್ ನಂತರ ನಿವೃತ್ತಿಯಾಗಿರುವ ಹಾಕಿ ದಂತಕತೆ ಪಿ.ಆರ್. ಶ್ರೀಜೇಶ್‌ರಿಂದ ತೆರವಾಗಿರುವ ಮುಖ್ಯ ಗೋಲ್‌ಕೀಪರ್ ಸ್ಥಾನಕ್ಕೆ ಕೃಷ್ಣ ಬಹದ್ದೂರ್ ಪಾಠಕ್‌ರನ್ನು ನೇಮಿಸಲಾಗಿದೆ.

ಏಶ್ಯನ್ ಚಾಂಪಿಯನ್ಸ್ ಟ್ರೋಫಿಯು ಚೀನಾದಲ್ಲಿ ಸೆಪ್ಟಂಬರ್ 8ರಿಂದ 17ರ ತನಕ ನಡೆಯಲಿದೆ.

ಶ್ರೀಜೇಶ್ ನಿವೃತ್ತಿಯ ನಂತರ ಪಾಠಕ್‌ಗೆ ಅವಕಾಶದ ಬಾಗಿಲು ತೆರೆದುಕೊಂಡಿದೆ. ಟೋಕಿಯೊ ಹಾಗೂ ಪ್ಯಾರಿಸ್ ಒಲಿಂಪಿಕ್ಸ್‌ಗಳಲ್ಲಿ ಪಾಠಕ್ ಅವರು ಭಾರತದ ಹೆಚ್ಚುವರಿ ಗೋಲ್‌ಕೀಪರ್ ಆಗಿದ್ದರು. ಮುಂಬೈ ಕನ್ನಡಿಗ ಸೂರಜ್ ಕರ್ಕೇರ ಅವರು ಮೀಸಲು ಗೋಲ್‌ಕೀಪರ್ ಆಗಿದ್ದರು.

ಹಾರ್ದಿಕ್ ಸಿಂಗ್ ಬದಲಿಗೆ ಅನುಭವಿ ಮಿಡ್‌ಫೀಲ್ಡರ್ ವಿವೇಕ್ ಸಾಗರ್ ಪ್ರಸಾದ್ ಅವರು ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ. ಹಾರ್ದಿಕ್ ಸಿಂಗ್, ಮನ್‌ದೀಪ್ ಸಿಂಗ್, ಲಲಿತಾ ಉಪಾಧ್ಯಾಯ, ಶಂಶೇರ್ ಸಿಂಗ್ ಹಾಗೂ ಗುರ್ಜಂತ್ ಸಿಂಗ್‌ಗೆ ವಿಶ್ರಾಂತಿ ನೀಡಲಾಗಿದೆ.

ಪಂದ್ಯಾವಳಿಯು ಡ್ರ್ಯಾಗ್-ಫ್ಲಿಕರ್ ಜುಗ್ರಾಜ್ ಸಿಂಗ್‌ಗೆ ಉತ್ತಮ ಅವಕಾಶ ಕಲ್ಪಿಸಲಿದೆ. ಜುಗ್ರಾನ್ ಹೆಚ್ಚುವರಿ ಆಟಗಾರನಾಗಿ ಪ್ಯಾರಿಸ್ ಗೇಮ್ಸ್‌ಗೆ ತೆರಳಿದ್ದರು. ಪ್ಯಾರಿಸ್ ಗೇಮ್ಸ್‌ನಲ್ಲಿ ಅಗ್ರ ಗೋಲ್‌ಸ್ಕೋರರ್ ಆಗಿದ್ದ ನಾಯಕ ಹರ್ಮನ್‌ಪ್ರೀತ್ ಅವರು ಭಾರತದ ಪ್ರಮುಖ ಪೆನಾಲ್ಟಿ ಕಾರ್ನರ್ ಸ್ಪೆಷಲಿಸ್ಟ್ ಆಗಿದ್ದಾರೆ.

ಡಿಫೆಂಡರ್‌ಗಳಾದ ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಹರ್ಮನ್‌ಪ್ರೀತ್, ಜುಗ್ರಾಜ್, ಸಂಜಯ್ ಹಾಗೂ ಸುಮಿತ್ ತಂಡದ ಬೆನ್ನುಲುಬಾಗಿದ್ದಾರೆ.ಮಿಡ್‌ಫೀಲ್ಡ್‌ನಲ್ಲಿ ರಾಜ್‌ಕುಮಾರ್ ಪಾಲ್, ನೀಲಕಂಠ ಶರ್ಮಾ, ಮನ್‌ಪ್ರೀತ್ ಸಿಂಗ್ ಹಾಗೂ ಮುಹಮ್ಮದ್ ರಾಹೀಲ್ ಇದ್ದಾರೆ. ಫಾರ್ವರ್ಡ್ ಲೈನ್‌ನಲ್ಲಿ ಅಭಿಷೇಕ್, ಸುಖಜೀತ್ ಸಿಂಗ್, ಜೂನಿಯರ್ ಇಂಡಿಯಾದ ನಾಯಕ ಉತ್ತಮ್ ಸಿಂಗ್, ಗುರ್ಜೋತ್ ಸಿಂಗ್ ಇದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ತಂಡದಲ್ಲಿದ್ದ 10 ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅನುಭವಿ ಹಾಗೂ ಯುವಕರನ್ನು ಒಳಗೊಂಡಿರುವ ಭಾರತದ ಹಾಕಿ ತಂಡವು ಏಶ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊರಿಯಾ, ಮಲೇಶ್ಯ, ಪಾಕಿಸ್ತಾನ, ಜಪಾನ್ ಹಾಗೂ ಆತಿಥೇಯ ಚೀನಾ ವಿರುದ್ಧ ಸೆಣಸಾಡಲಿದೆ.

ಸೆಪ್ಟಂಬರ್ 8ರಂದು ಚೀನಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿರುವ ಭಾರತೀಯ ಹಾಕಿ ತಂಡವು ಸೆ.9ರಂದು ಜಪಾನ್ ತಂಡವನ್ನು ಎದುರಿಸಲಿದೆ. ಒಂದು ದಿನ ವಿರಾಮ ಪಡೆದ ನಂತರ ಸೆ.11ರಂದು ಮಲೇಶ್ಯ ಹಾಗೂ ಸೆ.12ರಂದು ಕೊರಿಯಾ ತಂಡವನ್ನು ಎದುರಿಸಲಿದೆ.

ಸೆ.14ರಂದು ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮುಖಾಮುಖಿಯಾಗಲಿದೆ.

ಸೆಮಿ ಫೈನಲ್‌ಗಳು ಹಾಗೂ ಫೈನಲ್ ಪಂದ್ಯವು ಕ್ರಮವಾಗಿ ಸೆ.16 ಹಾಗೂ 17ರಂದು ನಡೆಯಲಿದೆ.

ಭಾರತದ ಹಾಕಿ ತಂಡ:

ಗೋಲ್‌ಕೀಪರ್‌ಗಳು: ಕೃಷ್ಣ ಬಹದ್ದೂರ್ ಪಾಠಕ್, ಸೂರಜ್ ಕರ್ಕೇರ

ಡಿಫೆಂಡರ್‌ಗಳು: ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಹರ್ಮನ್‌ಪ್ರೀತ್ ಸಿಂಗ್(ನಾಯಕ), ಜುಗ್ರಾಜ್ ಸಿಂಗ್, ಸಂಜಯ್, ಸುಮಿತ್.

ಮಿಡ್ ಫೀಲ್ಡರ್‌ಗಳು: ರಾಜ್‌ಕುಮಾರ್ ಪಾಲ್, ನೀಲಕಂಠ ಶರ್ಮಾ, ವಿವೇಕ್ ಸಾಗರ್ ಪ್ರಸಾದ್(ಉಪ ನಾಯಕ), ಮನ್‌ಪ್ರೀತ್ ಸಿಂಗ್, ಮುಹಮ್ಮದ್ ರಾಹೀಲ್ ಮೌಸೀನ್.

ಫಾರ್ವರ್ಡ್‌ಗಳು: ಅಭಿಷೇಕ್, ಸುಖಜೀತ್ ಸಿಂಗ್, ಅರೈಜೀತ್ ಸಿಂಗ್, ಉತ್ತಮ್ ಸಿಂಗ್, ಗುರ್ಜೋತ್ ಸಿಂಗ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News