ಯು ಝಿದಿ | Screengrab : X 

ನಗೋಯ: ಚೀನಾದ 13ರ ಹರೆಯದ ಸ್ವಿಮ್ಮರ್ ಯು ಝಿದಿ ಏಶ್ಯನ್ ಗೇಮ್ಸ್‌ನಲ್ಲಿ ಸೋಮವಾರ ತನ್ನ ಎರಡನೇ ಚಿನ್ನದ ಪದಕ ಜಯಿಸಿದರು.

ಯು 200 ಮೀಟರ್ ವೈಯಕ್ತಿಕ ಮಿಡ್ಲೆಯಲ್ಲಿ 2 ನಿಮಿಷ, 6.10 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಕೆನಡಾದ ಸ್ವಿಮ್ಮರ್ ಮೆಕ್‌ಇಂಟೋಶ್ ನಿರ್ಮಿಸಿದ್ದ ವಿಶ್ವ ದಾಖಲೆ(2:05.70)ಯನ್ನು ಮುರಿಯುವುದರಿಂದ ಸ್ವಲ್ಪದರಲ್ಲೆ ವಂಚಿತರಾದರು.

ಯು ರವಿವಾರ ನಡೆದ 200 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದರು.

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮ್ಯಾಕಿಂಟೋಶ್ ಮೂರು ಚಿನ್ನದ ಪದಕಗಳನ್ನು ಜಯಿಸಿದ್ದರು.

ವರ್ಷದ ಹಿಂದೆ ಸಿಂಗಾಪುರದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 12ನೇ ವಯಸ್ಸಿನಲ್ಲಿ ಯು ತಾನು ಸ್ಪರ್ಧಿಸಿದ್ದ ಮೂರು ಇವೆಂಟ್‌ಗಳಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ರಿಲೇಯಲ್ಲಿ ಕಂಚಿನ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದರು.

ಚೀನಾದಲ್ಲಿ ನಡೆದ ಸ್ವಿಮ್ಮಿಂಗ್ ಕೂಟದಲ್ಲಿ ಅಮೆರಿಕದ ರೆಗಾನ್ ಸ್ಮಿತ್‌ರನ್ನು ಮಣಿಸಿದ ಯು ವಿಶ್ವದ ಗಮನ ಸೆಳೆದಿದ್ದರು. ಸ್ಮಿತ್ 2024ರ ಒಲಿಂಪಿಕ್ಸ್‌ನಲ್ಲಿ 200 ಮೀ.ಫ್ಲೈ ಸ್ಪರ್ಧೆಯಲ್ಲಿ ಬೆಳ್ಳಿ ಜಯಿಸಿದ್ದರು.

ರವಿವಾರ ಏಳರಲ್ಲಿ ಆರು ಚಿನ್ನದ ಪದಕ ಜಯಿಸಿದ್ದ ಚೀನಾ ತಂಡವು ಸೋಮವಾರ ಏಳರಲ್ಲಿ ಐದು ಚಿನ್ನದ ಪದಕ ಜಯಿಸಿ ಈಜಿನಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದೆ. ಮೂರು ವರ್ಷಗಳ ಹಿಂದೆ ಹ್ಯಾಂಗ್‌ಝೌ ಏಶ್ಯನ್ ಗೇಮ್ಸ್‌ನಲ್ಲಿ ಚೀನಾವು ಸ್ವಿಮ್ಮಿಂಗ್‌ವೊಂದರಲ್ಲಿ 28 ಚಿನ್ನದ ಪದಕಗಳನ್ನು ಜಯಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor