ಹಿಮಾಂಶು ದಿಲ್ಲೋನ್  , ರುದ್ರಾಂಕ್ಷ್ ಪಾಟೀಲ್ |  Photo Credit : PTI 

ನಗೋಯ: ಶೂಟರ್‌ಗಳಾದ ಹಿಮಾಂಶು ದಿಲ್ಲೋನ್ ಹಾಗೂ ರುದ್ರಾಂಕ್ಷ್ ಪಾಟೀಲ್ ವೈಯಕ್ತಿಕ ವಿಭಾಗದಲ್ಲಿ ಗಳಿಸಿದ ಪದಕಗಳು ಹಾಗೂ ಸುಚಿಕಾ ತರಿಯಾಲ್ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್‌ನಲ್ಲಿ ಗೆದ್ದಿರುವ ಐತಿಹಾಸಿಕ ಕಂಚಿನ ಪದಕದಿಂದಾಗಿ 2026ರ ಏಶ್ಯನ್ ಗೇಮ್ಸ್‌ನಲ್ಲಿ ಸೋಮವಾರ ಭಾರತ ತಂಡ ನಾಲ್ಕು ಪದಕಗಳನ್ನು ಗೆದ್ದಿದೆ.

ಎರಡು ದಿನಗಳ ಸ್ಪರ್ಧೆಯ ನಂತರ ಭಾರತವು ನಾಲ್ಕು ಬೆಳ್ಳಿ ಹಾಗೂ ಎರಡು ಕಂಚು ಸಹಿತ ಒಟ್ಟು ಆರು ಪದಕಗಳನ್ನು ಜಯಿಸಿದೆ. ಚಿನ್ನದ ಪದಕಕ್ಕಾಗಿ ತನ್ನ ಬೇಟೆ ಮುಂದುವರಿಸಿದೆ.

ಶೂಟಿಂಗ್‌ನಲ್ಲಿ ಇನ್ನೂ ಮೂರು ಪದಕ

ಶೂಟಿಂಗ್ ರೇಂಜ್ ಮತ್ತೊಮ್ಮೆ ಭಾರತದ ಅತಿದೊಡ್ಡ ಪದಕಗಳ ಮೂಲವಾಗಿದೆ ಎಂದು ಸಾಬೀತುಪಡಿಸಿದೆ.

ಪುರುಷರ 10 ಮೀ. ಏರ್ ರೈಫಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಯುವ ಶೂಟಿಂಗ್ ತಾರೆ ಹಿಮಾಂಶು ದಿಲ್ಲೋನ್ ಬೆಳ್ಳಿ ಹಾಗೂ ಮಾಜಿ ವಿಶ್ವ ಚಾಂಪಿಯನ್ ರುದ್ರಾಂಕ್ಷ್ ಪಾಟೀಲ್ ಕಂಚಿನ ಪದಕ ಜಯಿಸಿದ್ದಾರೆ. ಇದಕ್ಕೂ ಮೊದಲು ಹಿಮಾಂಶು, ರುದ್ರಾಂಕ್ಷ್ ಅವರು ಟೀಮ್ ಸ್ಪರ್ಧೆಯಲ್ಲಿ 18ರ ಹರೆಯದ ಪಾರ್ಥ ಮಾನೆ ಅವರೊಂದಿಗೆ ಭಾರತ ತಂಡ ಬೆಳ್ಳಿ ಪದಕ ಗೆಲ್ಲುವಲ್ಲಿ ನೆರವಾಗಿದ್ದರು. ಈ ಮೂವರು 1898.4 ಅಂಕಗಳನ್ನು ಗಳಿಸಿದರೆ, ಚೀನಾ 1899.0 ಅಂಕದೊಂದಿಗೆ ನೂತನ ವಿಶ್ವ ದಾಖಲೆಯೊಂದಿಗೆ ಮೊದಲ ಸ್ಥಾನ ಪಡೆದಿದೆ.

ವೈಯಕ್ತಿಕ ಸ್ಪರ್ಧೆಯಲ್ಲಿ 252.4 ಅಂಕ ಗಳಿಸಿದ ಹಿಮಾಂಶು ಚೀನಾದ ಲಿಹಾವೊ ಶೆಂಗ್(254.2)ನಂತರ ಎರಡನೇ ಸ್ಥಾನ ಪಡೆದರು. ರುದ್ರಾಂಕ್ಷ್(230.9)ಮೂರನೇ ಸ್ಥಾನ ಪಡೆದರು.

ಭಾರತವು ಇದೀಗ ಶೂಟಿಂಗ್ ಸ್ಪರ್ಧೆಯಲ್ಲಿ ಒಟ್ಟು ಐದು ಪದಕಗಳನ್ನು ಬಾಚಿಕೊಂಡಿದೆ. ಭಾರತ ತಂಡವು ರವಿವಾರ ಎರಡು ಬೆಳ್ಳಿ ಪದಕಗಳನ್ನು ಜಯಿಸಿತ್ತು. ಇಳವೆನಿಲ್ ವಲರಿವನ್, ಸೋನಮ್ ಹಾಗೂ ವಿದರ್ಶ್ ವಿನೋದ್ 10 ಮೀ.ಏರ್ ರೈಫಲ್‌ನ ಮಹಿಳೆಯರ ಟೀಮ್ ಸ್ಪರ್ಧೆಯಲ್ಲಿ ಬೆಳ್ಳಿ ಜಯಿಸಿದರೆ, ಇಳವೆನಲ್ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ನಗೆ ಬೀರಿದ್ದರು.

*ಇತಿಹಾಸ ನಿರ್ಮಿಸಿದ ಸುಚಿಕಾ: ಮಹಿಳೆಯರ ಸಾಂಪ್ರದಾಯಿಕ 60ಕೆಜಿ ಎಂಎಂಎ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ ಸುಚಿಕಾ ಭಾರತಕ್ಕೆ ಆರನೇ ಪದಕ ಜಮೆ ಮಾಡಿದರು. ಭಾರತವು ಇದೇ ಮೊದಲ ಬಾರಿ ಏಶ್ಯನ್ ಗೇಮ್ಸ್‌ನಲ್ಲಿ ಮಾರ್ಷಲ್ ಆರ್ಟ್ಸ್‌ನಲ್ಲಿ ಪದಕ ಜಯಿಸಿದೆ.

36ರ ವಯಸ್ಸಿನ ಸುಚಿಕಾ ಮಹಿಳೆಯರ ಸಾಂಪ್ರದಾಯಿಕ 60ಕೆಜಿ ವಿಭಾಗದ ಸೆಮಿ ಫೈನಲ್‌ನಲ್ಲಿ ಸಿಂಗಾಪುರದ ಹು ಹೂನ್ ಟೆವೊರನ್ನು ಎದುರಿಸಿದರು. ಈ ಇಬ್ಬರ ನಡುವಿನ ಸ್ಪರ್ಧೆಯು ಡ್ರಾನಲ್ಲಿ ಕೊನೆಗೊಂಡಿತು. ಎಂಎಂಎ ನಿಯಮದ ಪ್ರಕಾರ, ಸ್ಪರ್ಧೆಯು ಸಮಬಲಗೊಂಡರೆ ಲೈಟರ್‌ವೇಟರ್ ಮುಂದಿನ ಸುತ್ತಿಗೇರುತ್ತಾರೆ. ಸುಚಿಕಾ ತನ್ನ ಎದುರಾಳಿಗಿಂತ 700 ಗ್ರಾಂ ಹೆಚ್ಚು ತೂಕವಿದ್ದರು. ಹೀಗಾಗಿ ಫೈನಲ್‌ಗೆ ತಲುಪುವ ಅವಕಾಶದಿಂದ ವಂಚಿತರಾದರು. ಫೈನಲ್ ವಂಚಿತರಾದ ನಂತರ ಸುಚಿಕಾ ಕಣ್ಣೀರಿಟ್ಟರು.

ಹರ್ಯಾಣದ ರೋಹ್ಟಕ್ ಜಿಲ್ಲೆಯ ಕಿಯೊಯ್ ಗ್ರಾಮದ ಸುಚಿಕಾ ಅವರ ಸಾಧನೆಯು ಗಮನಾರ್ಹವಾಗಿದೆ. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜುಡೋದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸುಚಿಕಾ 2022ರ ಏಶ್ಯನ್ ಗೇಮ್ಸ್‌ನಲ್ಲಿ ಕುರಶ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

‘‘ಇದು ನನ್ನ ಪಾಲಿಗೆ ಜೀವನಕ್ಕಿಂತಲೂ ಮಿಗಿಲಾದದ್ದು. ಜಪಾನ್‌ಗೆ ಬಂದು ನನ್ನ ದೇಶಕ್ಕಾಗಿ ಪದಕ ಗೆದ್ದಿರುವುದು ನಾನು ಎಂದಿಗೂ ಮರೆಯುವುದಿಲ್ಲ. ನಾನೀಗ ಸಂತೋಷದಿಂದಲೇ ಮೃತ್ಯುವನ್ನು ಅಪ್ಪಿಕೊಳ್ಳಬಲ್ಲೆ’ ಎಂದು ಸುಚಿಕಾ ಪಿಟಿಐಗೆ ತಿಳಿಸಿದರು.

ಟೀಮ್ ಸ್ಪೋರ್ಟ್ಸ್‌ಗಳಲ್ಲಿ ಅಮೋಘ ಪ್ರದರ್ಶನ

ಭಾರತ ತಂಡವು ಪುರುಷರ ಕಬಡ್ಡಿಯಲ್ಲಿ ಜಪಾನ್ ತಂಡವನ್ನು 49-24 ಅಂತರದಿಂದ ಮಣಿಸಿದರೆ, ಮಹಿಳೆಯರ ಹಾಕಿ ತಂಡವು ಇಂಡೋನೇಶ್ಯ ತಂಡವನ್ನು 17-1 ಅಂತರದಿಂದ ಸೋಲಿಸಿದೆ. ಭಾರತದ ಪುರುಷರ ಹಾಗೂ ಮಹಿಳೆಯರ ಟೇಬಲ್ ಟೆನಿಸ್ ತಂಡಗಳು ಪಾಕಿಸ್ತಾನ ತಂಡವನ್ನು 3-0 ಅಂತರದಿಂದ ಸೋಲಿಸಿವೆೆ. ಥಾಯ್ಲೆಂಡ್‌ನ ಬುನ್‌ಜೊಂಗ್ ಸಿನ್‌ಸಿರಿ ಅವರನ್ನು 5-0 ಅಂತರದಿಂದ ಮಣಿಸಿರುವ ಬಾಕ್ಸರ್ ಸುಮಿತ್ ಕೂಡ ಪ್ರಿ-ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಈಜಿನಲ್ಲಿ ಮುಂದುವರಿದ ನಿರಾಶಾದಾಯಕ ಪ್ರದರ್ಶನ

ಈಜು ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜನ್ ಪುರುಷರ 50 ಮೀ. ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದರೂ 10ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅರ್ಹತಾ ಸುತ್ತಿನಲ್ಲಿ ನಟರಾಜ್ 10ನೇ ಸ್ಥಾನ ಹಾಗೂ ರಿಷಭ್ ದಾಸ್ 11ನೇ ಸ್ಥಾನ ಪಡೆದಿದ್ದರು.

ಆಕಾಶ್ ಮಣಿ ಹಾಗೂ ಹೀರ್ ಗಿತೇಶ್ ಶಾ ಪುರುಷರ 50 ಮೀ. ಫ್ರೀಸ್ಟೈಲ್ ಹೀಟ್‌ಯಿಂದ ಅರ್ಹತೆ ಪಡೆಯುವಲ್ಲಿ ವಿಫಲರಾದರು.

ಸಾಫ್ಟ್ ಟೆನಿಸ್‌ನಲ್ಲೂ ನಿರಾಶದಾಯಕ ಪ್ರದರ್ಶನ ಕಂಡುಬಂತು. ದಕ್ಷಿಣ ಕೊರಿಯಾ ಹಾಗೂ ಫಿಲಿಪ್ಪೀನ್ಸ್ ವಿರುದ್ಧ ಸೋಲುವ ಮೊದಲು ಆದ್ಯ ತಿವಾರಿ ಹಾಗೂ ಜಯ್ ಮೀನಾ ಅವರು ಕಾಂಬೋಡಿಯ ಹಾಗೂ ಮಂಗೋಲಿಯ ವಿರುದ್ಧ 5-0 ಅಂತರದಿಂದ ಗೆಲುವು ದಾಖಲಿಸಿದ್ದರು.

ವುಶು ಸ್ಪರ್ಧೆಯಲ್ಲಿ ಸಕಾರಾತ್ಮಕ ಫಲಿತಾಂಶ ಬಂದಿದ್ದು, ರೋಶಿಬಿನಾ ದೇವಿ ಹಾಗೂ ಆರ್ಯನ್ ಅವರು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor