Photo Credit : PTI 

ನಗೋಯ: ಎಲ್ಲ ಮೂರು ಸಿಂಗಲ್ಸ್ ಪಂದ್ಯಗಳನ್ನು ಜಯಿಸಿ ಬಾಂಗ್ಲಾದೇಶ ತಂಡವನ್ನು 3-0 ಅಂತರದಿಂದ ಮಣಿಸಿರುವ ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡವು ಏಶ್ಯನ್ ಗೇಮ್ಸ್‌ನಲ್ಲಿ ತನ್ನ ಅಭಿಯಾನ ಆರಂಭಿಸಿದೆ.

ಲಕ್ಷ್ಯ, ಆಯುಷ್, ಶ್ರೀಕಾಂತ್‌ರಿಂದ ಕ್ಲೀನ್‌ಸ್ವೀಪ್:

ಮೊದಲ ಪಂದ್ಯದಲ್ಲಿ ಲಕ್ಷ್ಯ ಸೇನ್ ಅವರು ಆಯ್ಮಾನ್ ಜಮಾನ್‌ರನ್ನು 21-4, 21-12 ಗೇಮ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಆ ನಂತರ ಆಯುಷ್ ಶೆಟ್ಟಿ ಮತ್ತೊಂದು ಅಮೋಘ ಪ್ರದರ್ಶನ ನೀಡಿ ಎದುರಾಳಿ ಗೌರವ್ ಸಿಂಘಾರನ್ನು 21-4, 21-13 ಅಂತರದಿಂದ ಮಣಿಸಿ ಭಾರತದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.

ಪಂದ್ಯ ವಶಪಡಿಸಿಕೊಳ್ಳಲು ಭಾರತಕ್ಕೆ ಇನ್ನೊಂದು ಗೆಲುವಿನ ಅಗತ್ಯವಿತ್ತು. ಅನುಭವಿ ಶಟ್ಲರ್ ಕಿಡಂಬಿ ಶ್ರೀಕಾಂತ್ ಅವರು ಅಲ್ ಅಮಿನ್ ಜುಮಾರ್‌ರನ್ನು 21-15, 21-9 ಗೇಮ್‌ಗಳ ಅಂತರದಿಂದ ಮಣಿಸುವುದರೊಂದಿಗೆ ಭಾರತ 3-0 ಅಂತರದಿಂದ ಕ್ಲೀನ್‌ಸ್ವೀಪ್‌ಗೈಯಲು ನೆರವಾದರು. ಮೂರು ಸಿಂಗಲ್ಸ್ ಪಂದ್ಯವನ್ನು ಗೆದ್ದ ಕಾರಣ ಡಬಲ್ಸ್ ಪಂದ್ಯ ಆಡುವ ಅಗತ್ಯಬೀಳಲಿಲ್ಲ.

ಈ ಹಿಂದಿನ ಏಶ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ತಂಡವು ಬೆಳ್ಳಿ ಪದಕ ಜಯಿಸಿತ್ತು. ಇದೀಗ ಕ್ವಾರ್ಟರ್ ಫೈನಲ್‌ನತ್ತ ತನ್ನ ಗಮನ ಹರಿಸಿರುವ ಭಾರತವು ಜಪಾನ್ ತಂಡವನ್ನು ಎದುರಿಸಲಿದೆ.

ಭಾರತದ ಮಹಿಳಾ ತಂಡ ಕ್ವಾರ್ಟರ್ ಫೈನಲ್‌ಗೆ

ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಕಝಕ್‌ಸ್ತಾನ ತಂಡವನ್ನು 3-0 ಅಂತರದಿಂದ ಮಣಿಸಿರುವ ಭಾರತದ ಮಹಿಳೆಯರ ಬ್ಯಾಡ್ಮಿಂಟನ್ ತಂಡವು ಮುಂದಿನ ಸುತ್ತಿಗೇರಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ.

ಪಿ.ವಿ.ಸಿಂಧು, ಉನ್ನತಿ ಹೂಡಾ ಹಾಗೂ ತನ್ವಿ ಶರ್ಮಾ ನೇರ ಗೇಮ್‌ಗಳ ಅಂತರದಿಂದ ತಮ್ಮ ಸಿಂಗಲ್ಸ್ ಪಂದ್ಯಗಳನ್ನು ಜಯಿಸಿದರು. ಜಪಾನ್ ವಿರುದ್ಧ ಗೆದ್ದರೆ ಭಾರತಕ್ಕೆ ಪದಕ ಖಾತ್ರಿಯಾಗಲಿದೆ. ಭಾರತವು 2014ರ ಏಶ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿತ್ತು. 2023ರ ಏಶ್ಯನ್ ಗೇಮ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ನಿರ್ಗಮಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor