ನೀರು ಧಂಡಾ (Photo: Rediff)

ನಗೋಯ: ಜಪಾನ್‌ನ ಐಚಿ-ನಗೋಯದಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ 2026ರ 11ನೇ ದಿನವಾದ ಮಂಗಳವಾರ ಭಾರತೀಯ ಮಹಿಳೆಯರು ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಇದರೊಂದಿಗೆ ಈ ಕೂಟದಲ್ಲಿ ಭಾರತ ಗೆದ್ದಿರುವ ಚಿನ್ನದ ಪದಕಗಳ ಸಂಖ್ಯೆ ಆರಕ್ಕೇರಿದೆ.

ಮೊದಲು ಶೂಟಿಂಗ್ ಟ್ರ್ಯಾಪ್ ವೈಯಕ್ತಿಕ ವಿಭಾಗದಲ್ಲಿ ನೀರು ದಾಂಡಾ ಹೊಳೆಯುವ ಹಳದಿ ಲೋಹಕ್ಕೆ ಮುತ್ತಿಟ್ಟರೆ, ಬಳಿಕ, ಮಹಿಳೆಯರ 4x400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಬಂಗಾರ ಗೆಲ್ಲುವ ಮೂಲಕ ಭಾರತೀಯ ಮಹಿಳೆಯರು ಭಾರತೀಯರು ಮತ್ತೊಮ್ಮೆ ಎದೆಯಿಬ್ಬಿಸುವಂತೆ ಮಾಡಿದರು.

ಮಹಿಳೆಯರ 4x400 ಮೀ ರಿಲೇಯಲ್ಲಿ ಚಿನ್ನ

ಏಶ್ಯನ್ ಗೇಮ್ಸ್‌ನಲ್ಲಿ, ಮಹಿಳೆಯರ 4x400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಮಂಗಳವಾರ ಭಾರತ ಚಿನ್ನದ ಪದಕ ಗೆದ್ದಿದೆ.

ಕಿರಣ್, ಎಂ. ಪೂವಮ್ಮ, ಪ್ರಾಚಿ ಮತ್ತು ವಿದ್ಯಾ ರಾಮರಾಜ್ ಅವರನ್ನೊಳಗೊಂಡ ಭಾರತೀಯ ತಂಡವು 3 ನಿಮಿಷ 29.69 ಸೆಕೆಂಡ್‌ನಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಪಡೆಯಿತು. ಬಹರೈನ್ ತಂಡವು 3:30.21 ಹೊತ್ತುಗಾರಿಕೆಯೊಂದಿಗೆ ಬೆಳ್ಳಿ ಗೆದ್ದರೆ, ಚೀನಾ 3:31.02 ಹೊತ್ತುಗಾರಿಕೆಯೊಂದಿಗೆ ಕಂಚಿನ ಪದಕ ಗಳಿಸಿತು.

ಈ ಗೆಲುವಿನೊಂದಿಗೆ, ಭಾರತವು ಏಶ್ಯನ್ ಗೇಮ್ಸ್ ಇತಿಹಾಸದಲ್ಲಿ ಈ ಸ್ಪರ್ಧೆಯಲ್ಲಿ ತನ್ನ ಏಳನೇ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತು. ಜೊತೆಗೆ, 1982ರ ದಿಲ್ಲಿ ಏಶ್ಯನ್ ಗೇಮ್ಸ್‌ನಿಂದ ಆರಂಭಿಸಿ, ಪ್ರತಿಯೊಂದು ಆವೃತ್ತಿಯಲ್ಲೂ ಈ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ತನ್ನ 44 ವರ್ಷಗಳ ಸರಣಿಯನ್ನು ಮುಂದುವರಿಸಿತು.

ಮಹಿಳೆಯರ 4x400 ಮೀಟರ್ ರಿಲೇಯಲ್ಲಿ ಭಾರತವು ಕೊನೆಯ ಬಾರಿಗೆ ಚಿನ್ನ ಗೆದ್ದಿದ್ದು 2018ರಲ್ಲಿ. ವಿದ್ಯಾ ಅವರಿಗೆ ಇದು ಈ ಬಾರಿಯ ಕೂಟದಲ್ಲಿ ಲಭಿಸಿದ ಮೂರನೇ ಪದಕವಾಗಿದೆ. ಇದಕ್ಕೂ ಮುನ್ನ ಅವರು 400 ಮೀಟರ್ ಹರ್ಡಲ್ಸ್‌ನಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಕಂಚು ಮತ್ತು ಮಿಶ್ರ 4x400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಶೂಟಿಂಗ್ ಟ್ರ್ಯಾಪ್‌ನಲ್ಲಿ ನೀರು ದಾಂಡಾಗೆ ಚಿನ್ನ

ಜಪಾನ್‌ನ ಐಚಿ-ನಗೋಯದಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್‌ನಲ್ಲಿ, ಮಹಿಳೆಯರ ಶೂಟಿಂಗ್ ಟ್ರ್ಯಾಪ್ ವೈಯಕ್ತಿಕ ವಿಭಾಗದಲ್ಲಿ ಭಾರತದ ನೀರು ದಾಂಡಾ ಮಂಗಳವಾರ ಐತಿಹಾಸಿಕ ಚಿನ್ನ ಗೆದ್ದಿದ್ದಾರೆ. ಅವರು ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.

ಏಶ್ಯನ್ ಗೇಮ್ಸ್ ಇತಿಹಾಸದಲ್ಲಿ, ಶೂಟಿಂಗ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಈವರೆಗೆ ಐವರು ಭಾರತೀಯ ಪುರುಷರು ಪದಕ ಗೆದ್ದಿದ್ದಾರೆ. ಈ ಪೈಕಿ, ರಣಧೀರ್ ಸಿಂಗ್ 1978ರಲ್ಲಿ ಚಿನ್ನ ಗೆದ್ದಿದ್ದಾರೆ. ಆದರೆ ಈವರೆಗೆ ಯಾವುದೇ ಭಾರತೀಯ ಮಹಿಳೆ ಈ ಸ್ಪರ್ಧೆಯಲ್ಲಿ ಪದಕ ಪ್ರದಾನ ವೇದಿಕೆಯನ್ನು ಏರಿರಲಿಲ್ಲ.

ಅದೇ ವೇಳೆ, ನೀರು ಒಟ್ಟು 28 ಅಂಕಗಳನ್ನು ಗಳಿಸುವ ಮೂಲಕ ಈ ವರ್ಷದ ಆರಂಭದಲ್ಲಿ ಚೈನೀಸ್ ತೈಪೆಯ ಶೂಟರ್ ಲಿಯು ವಾನ್-ಯು ನಿರ್ಮಿಸಿದ್ದ 24 ಅಂಕಗಳ ದಾಖಲೆಯನ್ನು ಮುರಿದು ಹೊಸ ಏಶ್ಯನ್ ದಾಖಲೆಯನ್ನೂ ಬರೆದರು.

ಮಂಗಳವಾರ, ಚೀನಾದ ಯುನಾಂಗ್ ಸನ್ 26 ಅಂಕಗಳೊಂದಿಗೆ ಬೆಳ್ಳಿ ಗೆದ್ದರೆ, ಕುವೈತ್‌ನ ಹಜಾರ್ ಅಬ್ದುಲ್ ಮಲಿಕ್ 21 ಅಂಕಗಳೊಂದಿಗೆ ಕಂಚಿನ ಪದಕ ಪಡೆದರು.

ಮೊದಲ 10 ಶಾಟ್‌ಗಳ ನಂತರ, ನೀರು ಮತ್ತು ಖತರ್‌ನ ರೇ ಬಾಸಿಲ್ ತಲಾ ಒಂದೊಂದು ಗುರಿ ತಪ್ಪಿಸಿ ಜಂಟಿ ಮೂರನೇ ಸ್ಥಾನದಲ್ಲಿದ್ದರು. ಅಬ್ದುಲ್ ಮಲಿಕ್ ಮತ್ತು ಸನ್ ಪರಿಪೂರ್ಣ 10 ಅಂಕಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದ್ದರು.

ಬಳಿಕ, ಹರ್ಯಾಣದ ಶೂಟರ್ ನೀರು ತನ್ನ ಮುಂದಿನ ಎಲ್ಲಾ ಐದು ಗುರಿಗಳನ್ನು ಹೊಡೆದು, ಅಬ್ದುಲ್ ಮಲಿಕ್ ಮತ್ತು ಸನ್ ಅವರೊಂದಿಗೆ ಅಗ್ರಸ್ಥಾನಕ್ಕೇರಿದರು. ಮುಂದಿನ ಸುತ್ತಿನಲ್ಲೂ ತನ್ನ ಅಮೋಘ ಲಯವನ್ನು ಮುಂದುವರಿಸಿದ ಅವರು, ಎಲ್ಲಾ ಐದು ಗುರಿಗಳನ್ನು ಹೊಡೆದರು. ಕೊನೆಯ 10 ಶಾಟ್‌ಗಳು ಬಾಕಿ ಇರುವಾಗ ಅವರು 2 ಅಂಕಗಳ ಮುನ್ನಡೆ ಸಾಧಿಸಿದರು.

ಕೊನೆಯ 10 ಶಾಟ್‌ಗಳಲ್ಲಿ ಕೇವಲ ಒಂದು ಗುರಿಯನ್ನು ಮಾತ್ರ ತಪ್ಪಿಸಿದ ಭಾರತದ ಶೂಟರ್, ಹಾಲಿ ಏಶ್ಯನ್ ಗೇಮ್ಸ್‌ನಲ್ಲಿ ದೇಶದ ಐದನೇ ಚಿನ್ನದ ಪದಕವನ್ನು ಖಚಿತಪಡಿಸಿದರು.

ಮಹಿಳಾ ಟ್ರ್ಯಾಪ್ ಶೂಟಿಂಗ್ ತಂಡಕ್ಕೆ ಬೆಳ್ಳಿ

ಏಶ್ಯನ್ ಗೇಮ್ಸ್‌ನಲ್ಲಿ ಮಂಗಳವಾರ ಭಾರತದ ಮಹಿಳಾ ಟ್ರ್ಯಾಪ್ ಶೂಟಿಂಗ್ ತಂಡವು ಬೆಳ್ಳಿ ಪದಕವನ್ನು ಗೆದ್ದಿದೆ.

ನೀರು ದಾಂಡ (118 ಅಂಕ), ಆಶಿಮಾ ಅಹ್ಲಾವತ್ (106) ಮತ್ತು ಮನೀಶಾ ಕೀರ್ (104) ಅವರನ್ನೊಳಗೊಂಡ ಭಾರತೀಯ ತ್ರಿವಳಿ ಆಟಗಾರರ ತಂಡವು ಒಟ್ಟು 328 ಅಂಕಗಳನ್ನು ಗಳಿಸಿ ಬೆಳ್ಳಿ ಪದಕ ಪಡೆಯಿತು.

346 ಅಂಕಗಳನ್ನು ಪಡೆದ ಚೀನಾ ಚಿನ್ನ ಗೆದ್ದರೆ, 325 ಅಂಕಗಳನ್ನು ಕಲೆಹಾಕಿದ ಕುವೈತ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.

ಅರ್ಹತಾ ಸುತ್ತಿನಲ್ಲಿ, ನೀರೂ ಅವರು ಖತರ್‌ನ ರೇ ಬಾಸಿಲ್ ಅವರೊಂದಿಗೆ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದರು, ಆದರೆ ಶೂಟ್-ಆಫ್‌ನಲ್ಲಿ ಅವರು ಖತರ್‌ನ ಶೂಟರ್‌ನ್ನು ಸೋಲಿಸಿ ಏಕೈಕ ಅಗ್ರಸ್ಥಾನಿಯಾಗಿ ಹೊರಹೊಮ್ಮಿದರು.

27 ಶೂಟರ್‌ಗಳು ಭಾಗವಹಿಸಿದ್ದ ಅರ್ಹತಾ ಸುತ್ತಿನಲ್ಲಿ ಆಶಿಮಾ 16ನೇ ಸ್ಥಾನ ಪಡೆದರೆ, ಮನೀಶಾ 23ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅಂತಿಮವಾಗಿ, ಈ 27 ಶೂಟರ್‌ಗಳ ಪೈಕಿ, ನೀರು ಸೇರಿದಂತೆ ಎಂಟು ಮಂದಿ ಫೈನಲ್‌ಗೆ ತೇರ್ಗಡೆ ಹೊಂದಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor