Photo Credit: deccanherald
ಆಲೂರು, ಅ.18: ಮನ್ವಂತ್ ಕುಮಾರ್ (86 ರನ್, 124 ಎಸೆತ, 6 ಬೌಂಡರಿ, 5 ಸಿಕ್ಸರ್) ಹಾಗೂ ಕೆ.ವಿ. ಅನೀಶ್ (59 ರನ್, 96 ಎಸೆತ, 8 ಬೌಂಡರಿ) ಅವರ ಅರ್ಧಶತಕಗಳ ಕೊಡುಗೆಯ ಬಲದಿಂದ ಚೇತರಿಸಿಕೊಂಡ ಕರ್ನಾಟಕ ತಂಡವು ರವಿವಾರ ಆರಂಭವಾದ ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಟೂರ್ನಿಯ ‘ಬಿ’ ಗುಂಪಿನ ಎರಡನೇ ಸುತ್ತಿನ ಪಂದ್ಯದಲ್ಲಿ ಗೌರವಾರ್ಹ ಮೊತ್ತ ಗಳಿಸಿದೆ.
ಟಾಸ್ ಜಯಿಸಿದ ಸೌರಾಷ್ಟ್ರ ತಂಡದ ನಾಯಕ ಜಯದೇವ್ ಉನದ್ಕಟ್ ಕರ್ನಾಟಕ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು.
ಕರ್ನಾಟಕದ ಪರ ಚೊಚ್ಚಲ ಪಂದ್ಯವನ್ನಾಡಿದ ರೋಹನ್ ಪಟೇಲ್ (6 ರನ್) ಹಾಗೂ ಮೂರನೇ ಕ್ರಮಾಂಕದ ಆಟಗಾರ ವಿಜಯಕುಮಾರ್ ವೈಶಾಕ್ (1 ರನ್) ಅವರ ವಿಕೆಟ್ಗಳನ್ನು ಉರುಳಿಸಿದ ಸೌರಾಷ್ಟ್ರ ತಂಡ ಉತ್ತಮ ಆರಂಭ ಪಡೆಯಿತು.
ಆಗ ಜೊತೆಯಾದ ಮಯಾಂಕ್ ಅಗರ್ವಾಲ್ (46 ರನ್, 83 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಅನೀಶ್ ತಂಡಕ್ಕೆ ಆಸರೆಯಾದರು. ಮಯಾಂಕ್ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದ ಉನದ್ಕಟ್ ಈ ಜೋಡಿಯನ್ನು ಬೇರ್ಪಡಿಸಿದರು.
ಅನೀಶ್ ಹಾಗೂ ಗೌತಮ್ (4 ರನ್) ಬೆನ್ನುಬೆನ್ನಿಗೆ ಔಟಾದಾಗ ಕರ್ನಾಟಕದ ಸ್ಕೋರ್ 5 ವಿಕೆಟ್ಗಳಿಗೆ 140 ರನ್ ಆಗಿತ್ತು.
ಕರುಣ್ ನಾಯರ್ (46 ರನ್, 57 ಎಸೆತ, 9 ಬೌಂಡರಿ) ಹಾಗೂ ಕೆ. ಶ್ರೀಜಿತ್ (21 ರನ್, 35 ಎಸೆತ, 4 ಬೌಂಡರಿ) ಆರನೇ ವಿಕೆಟ್ಗೆ 43 ರನ್ಗಳ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಆದರೆ, ಶ್ರೀಜಿತ್ ಹಾಗೂ ನಾಯಕ ಶ್ರೇಯಸ್ ಗೋಪಾಲ್ (3 ರನ್) ಪೆವಿಲಿಯನ್ಗೆ ಮರಳಿದರು.
ಪ್ರಸಕ್ತ ರಣಜಿ ಟೂರ್ನಿಯ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕರುಣ್ ನಾಯರ್ ಪಾರ್ಥ ಭುಟ್ಗೆ (3-73) ವಿಕೆಟ್ ಒಪ್ಪಿಸಿ ಅರ್ಧಶತಕದಿಂದ ವಂಚಿತರಾದರು.
ಒಂಭತ್ತನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 87 ರನ್ ಕಲೆಹಾಕಿದ ಮನ್ವಂತ್ ಕುಮಾರ್ ಹಾಗೂ ಅಭಿಲಾಷ್ ಶೆಟ್ಟಿ ಕರ್ನಾಟಕ ತಂಡ ಮತ್ತೆ ಕುಸಿತದ ಹಾದಿ ಹಿಡಿಯದಂತೆ ನೋಡಿಕೊಂಡರು. ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಮನ್ವಂತ್ ಕುಮಾರ್ ತಮ್ಮ ಚೊಚ್ಚಲ ಅರ್ಧಶತಕ ಗಳಿಸಿದ್ದು, ಅಭಿಲಾಷ್ ಅವರೊಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಸೌರಾಷ್ಟ್ರ ತಂಡದ ಬೌಲಿಂಗ್ ವಿಭಾಗದಲ್ಲಿ ಜಯದೇವ್ ಉನದ್ಕಟ್ (3-51) ಹಾಗೂ ಪಾರ್ಥ ಭುಟ್ (3-73) ತಲಾ ಮೂರು ವಿಕೆಟ್ಗಳನ್ನು ಪಡೆದರು. ಚೇತನ್ ಸಕಾರಿಯಾ (2-46) ಎರಡು ವಿಕೆಟ್ ಪಡೆದು ಮಿಂಚಿದರು.
*ಸಂಕ್ಷಿಪ್ತ ಸ್ಕೋರ್
ಕರ್ನಾಟಕದ ಮೊದಲ ಇನಿಂಗ್ಸ್: 86 ಓವರ್ ಗಳಲ್ಲಿ 281/8
(ಮನ್ವಂತ್ ಕುಮಾರ್ ಔಟಾಗದೆ 86, ಕೆ.ವಿ. ಅನೀಶ್ 59, ಕರುಣ್ ನಾಯರ್ 46, ಮಯಾಂಕ್ ಅಗರ್ವಾಲ್ 42, ಜಯದೇವ್ ಉನದ್ಕಟ್ 3-51, ಪಾರ್ಥ ಭುಟ್ 3-73, ಚೇತನ್ ಸಕಾರಿಯಾ 2-48)