ವೆಸ್ಟ್‌ಇಂಡೀಸ್ ವಿರುದ್ಧ ಟಿ20 ಸರಣಿ | ಆಸ್ಟ್ರೇಲಿಯ ಕ್ರಿಕೆಟ್ ತಂಡ ಪ್ರಕಟ, ಮಾರ್ಷ್ ಗೆ ನಾಯಕತ್ವ
PC : PTI
ಮೆಲ್ಬರ್ನ್: ವೆಸ್ಟ್‌ಇಂಡೀಸ್ ವಿರುದ್ಧ ಜಮೈಕಾ ಹಾಗೂ ಸೈಂಟ್ ಕಿಟ್ಸ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ 5 ಪಂದ್ಯಗಳ ಟಿ20 ಅಂತರ್‌ರಾಷ್ಟ್ರೀಯ ಸರಣಿಗಾಗಿ 16 ಸದಸ್ಯರನ್ನು ಒಳಗೊಂಡ ಆಸ್ಟ್ರೇಲಿಯ ಕ್ರಿಕೆಟ್ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ.
ಐಪಿಎಲ್‌ನಲ್ಲಿ ಲಕ್ನೊ ಸೂಪರ್ ಜಯಂಟ್ಸ್ ಪರ ಗಮನಾರ್ಹ ಪ್ರದರ್ಶನ ನೀಡಿರುವ ಮಿಚೆಲ್ ಮಾರ್ಷ್ ಅವರು ಕೆರಿಬಿಯನ್ ನಾಡಿನಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಆರ್‌ಸಿಬಿ ತಂಡವು ಐಪಿಎಲ್ ಪ್ರಶಸ್ತಿ ಗೆಲ್ಲಲು ಪ್ರಮುಖ ಪಾತ್ರವಹಿಸಿರುವ ಜೋಶ್ ಹೇಝಲ್‌ವುಡ್ ಈ ಸರಣಿಯ ಮೂಲಕ ವಾಪಸಾಗುತ್ತಿದ್ದಾರೆ. ಹೇಝಲ್‌ವುಡ್ ಪಾಕಿಸ್ತಾನದ ವಿರುದ್ಧದ ಹಿಂದಿನ ಟಿ20 ಸರಣಿಯಲ್ಲಿ ಆಡಿರಲಿಲ್ಲ.
ಗಾಯದಿಂದ ಚೇತರಿಸಿಕೊಂಡಿರುವ ಕ್ಯಾಮರೂನ್ ಗ್ರೀನ್ ಹಾಗೂ ಕೂಪರ್ ಕೊನೊಲಿ ಕೂಡ ತಂಡಕ್ಕೆ ಮರಳಿದ್ದಾರೆ.
ಮಿಚೆಲ್ ಓವನ್ ಹಾಗೂ ಮ್ಯಾಟ್ ಕುಹ್ನ್ನೆಮನ್ ಇದೇ ಮೊದಲ ಬಾರಿ ಆಸ್ಟ್ರೇಲಿಯದ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕ್ಸೇವಿಯರ್ ಬಾರ್ಟ್ಲೆಟ್, ಜೇಕ್ ಫ್ರೆಸರ್-ಮೆಕ್‌ಗುರ್ಕ್ ಹಾಗೂ ಮಾರ್ಕಸ್ ಸ್ಟೋಯಿನಿಸ್ ಆಯ್ಕೆಯಿಂದ ಹೊರಗುಳಿದಿದ್ದಾರೆ.
*ವೆಸ್ಟ್‌ಇಂಡೀಸ್ ವಿರುದ್ಧ ಟಿ20 ಸರಣಿಗೆ ಆಸ್ಟ್ರೇಲಿಯ ತಂಡ
ಮಿಚೆಲ್ ಮಾರ್ಷ್(ನಾಯಕ),ಸೀನ್ ಅಬಾಟ್, ಕೂಪರ್ ಕಾನೊಲಿ, ಟಿಮ್ ಡೇವಿಡ್, ಬೆನ್ ಡ್ವರ್ಶುಯಿಸ್, ನಾಥನ್ ಎಲ್ಲಿಸ್, ಕ್ಯಾಮರೂನ್ ಗ್ರೀನ್, ಆರೊನ್ ಹಾರ್ಡಿ, ಜೋಶ್ ಹೇಝಲ್‌ವುಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮ್ಯಾಟ್ ಕುಹ್ನೆಮನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಓವನ್, ಮ್ಯಾಥ್ಯೂ ಶಾರ್ಟ್ ಹಾಗೂ ಆಡಮ್ ಝಂಪಾ.