×
Ad

ಆಸ್ಟ್ರೇಲಿಯದ ವಿರುದ್ಧದ ಟೆಸ್ಟ್ ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟ

Update: 2025-06-11 20:39 IST

PC : PTI 

ಜಮೈಕಾ: ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡವು ಮುಂಬರುವ ಆಸ್ಟ್ರೇಲಿಯ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ 16 ಸದಸ್ಯರನ್ನು ಒಳಗೊಂಡ ತಂಡವನ್ನು ಆಯ್ಕೆ ಮಾಡಿದೆ. ಶೈ ಹೋಪ್‌ಗೆ ಕರೆ ನೀಡಿದೆ.

ಸೀಮಿತ ಓವರ್ ಕ್ರಿಕೆಟ್ ಪಂದ್ಯಗಳಲ್ಲಿ ವಿಂಡೀಸ್ ತಂಡವನ್ನು ನಾಯಕನಾಗಿ ಮುನ್ನಡೆಸಿರುವ ಹೋಪ್ ಏಕದಿನ ಹಾಗೂ ಟಿ-20 ಕ್ರಿಕೆಟ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ನಂತರ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬ್ರಿಡ್ಜ್‌ಟೌನ್‌ನಲ್ಲಿ ಜೂನ್ 25ರಂದು ಹೋಪ್ ಅವರು ಟೆಸ್ಟ್ ಕ್ರಿಕೆಟಿಗೆ ವಾಪಸಾಗುವ ಸಾಧ್ಯತೆ ಇದೆ. 2021ರ ನಂತರ ಮೊದಲ ಬಾರಿ ಟೆಸ್ಟ್ ಕ್ರಿಕೆಟ್‌ನಲ್ಲಿ ಹೋಪ್ ಆಡಲಿದ್ದಾರೆ.

ದೇಶೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆದಾರರ ಗಮನ ಸೆಳೆದಿರುವ ಹೊಸ ಮುಖ ಗಯಾನದ ಕೆವ್‌ಲೋನ್ ಆ್ಯಂಡರ್ಸನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

‘‘ನಮ್ಮ ದೇಶಿಯ ಕ್ರಿಕೆಟ್ ಸ್ಪರ್ಧಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಆಟಗಾರ ಆ್ಯಂಡರ್ಸನ್ ಸೇರ್ಪಡೆಯು ಅಗ್ರ ಸರದಿಯಲ್ಲಿ ತಂಡಕ್ಕೆ ಶಕ್ತಿ ನೀಡಲಿದೆ. ಬಿಳಿ ಚೆಂಡಿನ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಹೋಪ್‌ರನ್ನು ತಂಡಕ್ಕೆ ಮತ್ತೊಮ್ಮೆ ಸ್ವಾಗತಿಸಲು ಉತ್ಸುಕರಾಗಿದ್ದೇವೆ’’ಎಂದು ವೆಸ್ಟ್‌ಇಂಡೀಸ್ ಕೋಚ್ ಡರೆನ್ ಸಮ್ಮಿ ಹೇಳಿದ್ದಾರೆ.

ಹೋಪ್ ಅವರು ಟೆಸ್ಟ್ ವೃತ್ತಿಜೀವನದಲ್ಲಿ 38 ಪಂದ್ಯಗಳಲ್ಲಿ 2 ಶತಕ ಹಾಗೂ 5 ಅರ್ಧಶತಕಗಳ ಸಹಿತ ಒಟ್ಟು 1,726 ರನ್ ಗಳಿಸಿದ್ದಾರೆ.

ತಂಡದಲ್ಲಿ ಅನುಭವಿ ವೇಗದ ಬೌಲರ್ ಕೇಮರ್ ರೋಚ್‌ರನ್ನು ಕೈಬಿಡಲಾಗಿದೆ. ರೋಚ್ ಒಟ್ಟು 284 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ.

ಕಳೆದ ವರ್ಷ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯದ ವಿರುದ್ದ ವೆಸ್ಟ್‌ಇಂಡೀಸ್ ತಂಡ ಗೆಲುವು ಪಡೆಯಲು ಮಹತ್ವದ ಪಾತ್ರವಹಿಸಿದ್ದ ಶಮರ್ ಜೋಸೆಫ್ ತಂಡದಲ್ಲಿ ತನ್ನ ಸ್ಥಾನ ಉಳಿಸಿಕೊಂಡಿದ್ದಾರೆ.

2025-27ರ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿರುವ 3 ಪಂದ್ಯಗಳ ಟೆಸ್ಟ್ ಸರಣಿಯು ಬ್ರಿಡ್ಜ್‌ಟೌನ್, ಕಿಂಗ್‌ಸ್ಟನ್ ನಲ್ಲಿ ನಡೆಯಲಿದೆ.

ಆಸ್ಟ್ರೇಲಿಯದ ವಿರುದ್ಧ ಟೆಸ್ಟ್ ಸರಣಿಗೆ ವೆಸ್ಟ್‌ಇಂಡೀಸ್ ತಂಡ

ರೋಸ್ಟನ್ ಚೇಸ್(ನಾಯಕ), ಜೋಮೆಲ್ ವಾರಿಕನ್, ಕೆವ್ಲಾನ್ ಆ್ಯಂಡರ್ಸನ್, ಕ್ರೆಗ್ ಬ್ರಾಥ್‌ವೇಟ್, ಜಾನ್ ಕ್ಯಾಂಪ್‌ಬೆಲ್, ಕೀಸಿ ಕಾರ್ಟಿ, ಜಸ್ಟಿನ್ ಗ್ರೀವ್ಸ್, ಶೈ ಹೋಪ್, ಟೆವಿನ್ ಇಮ್ಲಾಚ್, ಅಲ್ಜಾರಿ ಜೋಸೆಫ್, ಶಮರ್ ಜೋಸೆಫ್, ಬ್ರಾಂಡನ್ ಕಿಂಗ್, ಜೋಹಾನ್ ಲೇನ್, ಮಿಕೈಲ್ ಲೂಯಿಸ್, ಆ್ಯಂಡರ್ಸನ್ ಫಿಲಿಪ್, ಜೇಡನ್ ಸೀಲ್ಸ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News