×
Ad

ಆಸ್ಟ್ರೇಲಿಯ ಎ ತಂಡಕ್ಕೆ ಸಮಾಧಾನಕರ ಜಯ; ಭಾರತ ‘ಎ’ ಮಹಿಳೆಯರಿಗೆ ಸರಣಿ

ಅಜೇಯ 137 ರನ್ ಬಾರಿಸಿದ ಅಲಿಸಾ ಹೀಲಿ

Update: 2025-08-17 21:26 IST

ಅಲಿಸಾ ಹೀಲಿ | PC : PTI 

ಬ್ರಿಸ್ಬೇನ್, ಆ. 17: ವಿಕೆಟ್‌ ಕೀಪರ್-ಬ್ಯಾಟರ್ ಅಲಿಸಾ ಹೀಲಿ ಅವರ ಅಜೇಯ 137 ರನ್‌ಗಳ ನೆರವಿನಿಂದ ಆತಿಥೇಯ ಆಸ್ಟ್ರೇಲಿಯ ‘ಎ’ ತಂಡವು ಮಹಿಳಾ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಪ್ರವಾಸಿ ಭಾರತ ‘ಎ’ ತಂಡವನ್ನು ರವಿವಾರ ಒಂಭತ್ತು ವಿಕೆಟ್‌ಗಳ ಭರ್ಜರಿ ಅಂತರದಿಂದ ಸೋಲಿಸಿದೆ.

ಇದರೊಂದಿಗೆ ಸರಣಿಯಲ್ಲಿ ಸಮಾಧಾನಕರ ಗೆಲುವೊಂದನ್ನು ದಾಖಲಿಸಿದೆ.

ಸರಣಿಯನ್ನು ಭಾರತ ‘ಎ’ ಮಹಿಳಾ ತಂಡವು 2-1ರ ಅಂತರದಿಂದ ಗೆದ್ದಿದೆ. ಭಾರತ ‘ಎ’ ತಂಡವು ಸರಣಿಯ ಮೊದಲ ಪಂದ್ಯವನ್ನು ಮೂರು ವಿಕೆಟ್‌ಗಳಿಂದ ಗೆದ್ದರೆ, ಶುಕ್ರವಾರ ನಡೆದ ಎರಡನೇ ಪಂದ್ಯವನ್ನು ಎರಡು ವಿಕೆಟ್‌ ಗಳಿಂದ ಗೆದ್ದಿತ್ತು.

ಟಾಸ್ ಗೆದ್ದ ಭಾರತ ಎ ಮಹಿಳಾ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದು ಆರಂಭಿಕ ಬ್ಯಾಟರ್ ಶಫಾಲಿ ವರ್ಮಾರ 52 ಮತ್ತು ವಿಕೆಟ್‌ಕೀಪರ್ ಯಸ್ತಿಕಾ ಭಾಟಿಯ ಅವರ 42 ರನ್‌ಗಳ ನೆರವಿನಿಂದ 47.4 ಓವರ್‌ಗಳಲ್ಲಿ 216 ರನ್‌ಗಳನ್ನು ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್‌ ಗಳನ್ನು ಕಳೆದುಕೊಂಡಿತು.

ಶಫಾಲಿ ವರ್ಮಾಗೆ ನಂದಿನಿ ಕಶ್ಯಪ್ (28) ಉತ್ತಮ ಬೆಂಬಲ ನೀಡಿದರು. ಅವರಿಬ್ಬರು ತಂಡಕ್ಕೆ ಉತ್ತಮ ಆರಂಭ ಒದಗಿಸಿ ಆರಂಭಿಕ ವಿಕೆಟ್‌ಗೆ 86 ರನ್‌ ಗಳ ದೇಣಿಗೆ ನೀಡಿದರು.

ಆದರೆ, ನಾಯಕಿ ಟಹಿಲಿಯಾ ಮೆಗ್ರಾ ದಾಳಿಗೆ ಇಳಿದ ಬಳಿಕ ಪರಿಸ್ಥಿತಿ ಬದಲಾಯಿತು. ಅವರು ಶಫಾಲಿಯ ವಿಕೆಟ್ ಉರುಳಿಸಿದರು ಹಾಗೂ ಅದು ಬ್ಯಾಟಿಂಗ್ ಕುಸಿತಕ್ಕೆ ಕಾರಣವಾಯಿತು. ಕಶ್ಯಪ್ ಮತ್ತು ತೇಜಲ್ ಹಸಬ್ನಿಸ್ (1) ಕ್ಷಿಪ್ರವಾಗಿ ನಿರ್ಗಮಿಸಿದರು.

ಆಗ ಒಂದು ಹಂತದಲ್ಲಿ ಭಾರತ ಎ ತಂಡವು 89 ರನ್‌ಗಳನ್ನು ಗಳಿಸುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಬಳಿಕ ಭಾರತ ಎ ತಂಡಕ್ಕೆ ದೊಡ್ಡ ಮೊತ್ತವನ್ನು ಪೇರಿಸಲು ಸಾಧ್ಯವಾಗಲಿಲ್ಲ.

ಆಸ್ಟ್ರೇಲಿಯ ಎ ತಂಡದ ನಾಯಕಿ ಟಹಿಲಿಯಾ ಮೆಗ್ರಾ ತಂಡದ ಪರವಾಗಿ ಶ್ರೇಷ್ಠ ನಿರ್ವಹಣೆ ನೀಡಿದರು. ಅವರು 8 ಓವರ್‌ಗಳಲ್ಲಿ ಕೇವಲ 40 ರನ್‌ಗಳನ್ನು ನೀಡಿ 3 ವಿಕೆಟ್‌ಗಳನ್ನು ಉರುಳಿಸಿದರು.

ಗೆಲುವಿಗೆ 217 ರನ್‌ಗಳನ್ನು ಗಳಿಸುವ ಸುಲಭ ಗುರಿಯನ್ನು ಬೆಂಬತ್ತಿದ ಆಸ್ಟ್ರೇಲಿಯ ಎ ಮಹಿಳೆಯರು ನಿರರ್ಗಳ ಪ್ರದರ್ಶನವೊಂದನ್ನು ನೀಡಿದರು. ಆರಂಭಿಕ ಬ್ಯಾಟರ್ ಹೀಲಿ 85 ಎಸೆತಗಳಲ್ಲಿ 137 ರನ್‌ಗಳನ್ನು ಸಿಡಿಸಿ ಅಜೇಯವಾಗಿ ಉಳಿದರು. ಭಾರತೀಯ ಬೌಲರ್‌ಗಳನ್ನು ದಂಡಿಸಿದ ಅವರು ಮೈದಾನದ ಎಲ್ಲಾ ಮೂಲೆಗಳಿಗೂ ಚೆಂಡನ್ನು ರವಾನಿಸಿದರು.

ಆಸ್ಟ್ರೇಲಿಯ ರಾಷ್ಟ್ರೀಯ ತಂಡದ ನಾಯಕಿ ಹೀಲಿ ಪಾದ ಮತ್ತು ಮಂಡಿ ಗಾಯಕ್ಕೆ ಚಿಕಿತ್ಸೆ ಪಡೆದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ. ಅವರು 23 ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳನ್ನು ಸಿಡಿಸಿದರು.

ಆದರೆ, ವೈಯಕ್ತಿಕ ಮೊತ್ತ 7 ಮತ್ತು 49ರಲ್ಲಿದ್ದಾಗ ಅವರಿಗೆ ಎರಡು ಬಾರಿ ಜೀವದಾನ ಲಭಿಸಿತ್ತು. ಅದನ್ನು ಪರಿಪೂರ್ಣವಾಗಿ ಬಳಸಿಕೊಂಡ ಅವರು ಕೇವಲ 27.5 ಓವರ್‌ ಗಳಲ್ಲಿ ಆಸ್ಟ್ರೇಲಿಯ ಎ ತಂಡವನ್ನು ಗೆಲುವಿಗೆ ತೀರಕ್ಕೆ ಒಯ್ದರು.

ಅವರಿಗೆ ಟಹ್ಲಿಯಾ ವಿಲ್ಸನ್ ಸಮರ್ಥ ಜೊತೆ ನೀಡಿದರು. ಶಾಂತಚಿತ್ತತೆಯಿಂದ ಸುಲಲಿತವಾಗಿ ಆಡಿದ ಟಹ್ಲಿಯಾ 51 ಎಸೆತಗಳಲ್ಲಿ 59 ರನ್‌ಗಳನ್ನು ಮಾಡಿದರು. ಅವರಿಬ್ಬರು ಆರಂಭಿಕ ವಿಕೆಟ್‌ಗೆ 137 ರನ್‌ಗಳ ದೇಣಿಗೆ ನೀಡಿದರು. ವಿಲ್ಸನ್ ಅಂತಿಮವಾಗಿ ರಾಧಾ ಯಾದವ್ ಎಸೆತಕ್ಕೆ ಬಲಿಯಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News