×
Ad

5ನೇ, ಕೊನೆಯ ಟಿ20 ಪಂದ್ಯ | ಭಾರತಕ್ಕೆ ಆಸ್ಟ್ರೇಲಿಯ ವಿರುದ್ಧ ಸರಣಿ ಗೆಲ್ಲುವ ತವಕ

Update: 2025-11-07 20:30 IST

Photo Credit : PTI

ಬ್ರಿಸ್ಬೇನ್, ನ.7: ಹೊಬರ್ಟ್ ಹಾಗೂ ಗೋಲ್ಡ್‌ ಕೋಸ್ಟ್‌ ನಲ್ಲಿ ನಡೆದ ಸರಣಿಯ ಹಿಂದಿನೆರಡು ಪಂದ್ಯಗಳಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಕ್ಕೆ ಸೋಲಿನ ಕಹಿ ಉಣಿಸಿತ್ತು. ಸದ್ಯ 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆಯಲ್ಲಿರುವ ಭಾರತ ತಂಡವು ಶನಿವಾರ ನಡೆಯಲಿರುವ ಪಂದ್ಯದಲ್ಲಿ ಬ್ಯಾಟಿಂಗ್ ಅಸ್ಥಿರತೆಯಿಂದ ಹೊರಬಂದು ‘ಹ್ಯಾಟ್ರಿಕ್’ ಜಯ ದಾಖಲಿಸಿ ಸರಣಿ ಗೆಲ್ಲುವ ತವಕದಲ್ಲಿದೆ.

ಭಾರತ ತಂಡವು ಕಳೆದ 17 ವರ್ಷಗಳಿಂದ ಆಸ್ಟ್ರೇಲಿಯ ವಿರುದ್ಧ ಟಿ20 ಸರಣಿಯನ್ನು ಸೋತಿಲ್ಲ. ಸೂರ್ಯಕುಮಾರ್ ಬಳಗವು ಇದೇ ದಾಖಲೆಯನ್ನು ಕಾಯ್ದುಕೊಳ್ಳುವ ಅದಮ್ಯ ವಿಶ್ವಾಸದಲ್ಲಿದೆ. ಶುಭಮನ್ ಗಿಲ್ ಹಾಗೂ ನಾಯಕ ಸುರ್ಯಕುಮಾರ್ ಬ್ಯಾಟಿಂಗ್‌ ನತ್ತ ಎಲ್ಲರ ಗಮನ ಹರಿದಿದೆ. ಮತ್ತೊಂದೆಡೆ ಆಸ್ಟ್ರೇಲಿಯ ತಂಡವು ಭಾರತದ ಸ್ಪಿನ್ ಸವಾಲನ್ನು ದಿಟ್ಟವಾಗಿ ಎದುರಿಸುವತ್ತ ಚಿತ್ತ ಹರಿಸಿದೆ.

ಮುಂದಿನ ವರ್ಷ ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಗಿಂತ ಮೊದಲು ಉಭಯ ತಂಡಗಳು ಕೊನೆಯ ಬಾರಿ ಸೆಣಸಾಡಲಿವೆ.

ಸರಣಿಯ ಆರಂಭದಲ್ಲಿ ಭಾರತೀಯ ಬ್ಯಾಟರ್‌‌ ಗಳನ್ನು ಕಾಡಿದ್ದ ಜೋಶ್ ಹೇಝಲ್‌ ವುಡ್ ಮುಂಬರುವ ಆ್ಯಶಸ್ ಸರಣಿಗೆ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಟಿ20 ಸರಣಿಯ ಕೊನೆಯ 3 ಪಂದ್ಯಗಳಿಂದ ಹೊರಗುಳಿದಿದ್ದಾರೆ. ಹೇಝಲ್‌ವುಡ್ ಅನುಪಸ್ಥಿತಿಯು ಆಸ್ಟ್ರೇಲಿಯ ತಂಡವನ್ನು ಇನ್ನಿಲ್ಲದಂತೆ ಕಾಡುತ್ತಿದೆ.

5ನೇ ಟಿ20 ಪಂದ್ಯವನ್ನು ಜಯಿಸಿದರೆ ಆಸ್ಟ್ರೇಲಿಯವು ಸರಣಿಯನ್ನು ಗೆಲ್ಲುವುದಿಲ್ಲ. ಆದರೆ, ಸರಣಿಯನ್ನು 2-2ರಿಂದ ಡ್ರಾ ಮಾಡಿಕೊಳ್ಳಬಹುದು.

4ನೇ ಪಂದ್ಯ ನಡೆದಿರುವ ಗೋಲ್ಡ್‌ ಕೋಸ್ಟ್‌ ನ ಮಂದಗತಿಯ ಪಿಚ್ ನಲ್ಲಿ ಆಸ್ಟ್ರೇಲಿಯದ ಬ್ಯಾಟರ್‌ ಗಳು ಭಾರತದ ಸ್ಪಿನ್ ಮೋಡಿಗೆ ನಿರುತ್ತರವಾಗಿದ್ದರು. ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಹಾಗೂ ವಾಶಿಂಗ್ಟನ್ ಸುಂದರ್ ಸಂಪೂರ್ಣ ಪ್ರಾಬಲ್ಯ ಮೆರೆದಿದ್ದು, 10 ಓವರ್‌ನೊಳಗೆ 6 ವಿಕೆಟ್‌ ಗಳನ್ನು ಉರುಳಿಸಿದ್ದರು. ಉತ್ತಮ ಆರಂಭ ಪಡೆದ ಹೊರತಾಗಿಯೂ ಆಸೀಸ್ ಬ್ಯಾಟಿಂಗ್ ಕುಸಿತಕ್ಕೆ ಒಳಗಾಯಿತು.

ಆಸ್ಟ್ರೇಲಿಯವು ಬ್ಯಾಟಿಂಗ್‌ ನಲ್ಲಿ ನಾಯಕ ಮಾರ್ಷ್, ಮಾರ್ಕಸ್ ಸ್ಟೋಯಿನಿಸ್ ಹಾಗೂ ಟಿಮ್ ಡೇವಿಡ್‌ ರನ್ನು ಹೆಚ್ಚು ಅವಲಂಭಿಸಿದೆ. ಟ್ರಾವಿಡ್ ಹೆಡ್ ಅನುಪಸ್ಥಿತಿಯಲ್ಲಿ ಆಡಿದ್ದ ಮ್ಯಾಥ್ಯೂ ಶಾರ್ಟ್ ಆರಂಭಿಕ ಆಟಗಾರನಾಗಿ ಯಶಸ್ಸು ಕಂಡಿದ್ದಾರೆ.

2026ರ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತ ಹಾಗೂ ಶ್ರೀಲಂಕಾದ ಸ್ಪಿನ್ ಸ್ನೇಹಿ ಪಿಚ್‌ ಗಳಲ್ಲಿ ಆಡಲಾಗುತ್ತದೆ. ಆಸ್ಟ್ರೇಲಿಯವು ಉತ್ತಮ ಸ್ಪಿನ್ ದಾಳಿಯನ್ನು ಎದುರಿಸಲು ಶಕ್ತವಾಗಿದೆಯೇ ಎಂಬ ಪ್ರಶ್ನೆ ಉದ್ಬವಿಸಿದೆ. ವೇಗದ ಬೌಲಿಂಗ್ ಸ್ನೇಹಿ ಗಾಬಾ ಪಿಚ್ ನಲ್ಲಿ ಇದಕ್ಕೆ ಸರಿಯಾದ ಉತ್ತರ ಸಿಗದು. ಆದರೆ ಆಸ್ಟ್ರೇಲಿಯ ‘ಹ್ಯಾಟ್ರಿಕ್’ ಸೋಲಿನಿಂದ ಪಾರಾಗುವ ವಿಶ್ವಾಸದಲ್ಲಿದೆ.

ಪ್ರಸಕ್ತ ಸರಣಿಯಲ್ಲಿ ನೀರಸ ಆರಂಭ ಪಡೆದಿದ್ದ ಭಾರತವು ಸತತ 2 ಪಂದ್ಯಗಳಲ್ಲಿ ಜಯಶಾಲಿಯಾಗಿದೆ. ಆಸ್ಟ್ರೇಲಿಯ ನೆಲದಲ್ಲಿ ಈ ತನಕ ಟಿ20 ಸರಣಿಯನ್ನು ಸೋಲದೆ ಅಜೇಯ ದಾಖಲೆಯನ್ನು ಕಾಯ್ದುಕೊಂಡಿದೆ.

ಗಾಯದಿಂದ ಚೇತರಿಸಿಕೊಂಡು ವಾಪಸಾಗಿರುವ ಜೋಶ್ ಇಂಗ್ಲಿಸ್ ಪ್ರಸಕ್ತ ಸರಣಿಯ 3 ಇನಿಂಗ್ಸ್‌ ಗಳಲ್ಲಿ ಕೇವಲ 33 ರನ್ ಗಳಿಸಿದ್ದಾರೆ. ಸ್ಪಿನ್ನರ್‌‌ ಗಳೆದುರು ಚೆನ್ನಾಗಿಯೇ ಆಡುವ ಇಂಗ್ಲಿಸ್ 4ನೇ ಟಿ20ಯಲ್ಲಿ 3ನೇ ಕ್ರಮಾಂಕದಲ್ಲಿ ಆಡಿದ್ದರೂ ಅಕ್ಷರ್ ಪಟೇಲ್‌ ಗೆ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು.

ಆರಂಭಿಕ ಆಟಗಾರ ಮ್ಯಾಟ್ ಶಾರ್ಟ್ 4ನೇ ಟಿ20ಯಲ್ಲಿ 19 ಎಸೆತಗಳಲ್ಲಿ 25 ರನ್ ಗಳಿಸಿದ್ದರು. ಸುಮಾರು 2 ವರ್ಷಗಳ ನಂತರ ತನ್ನ ಮೊದಲ ಟಿ20 ಇನಿಂಗ್ಸ್ ಆಡಿದ ಜೋಶ್ ಫಿಲಿಪ್ 5ನೇ ಕ್ರಮಾಂಕದಲ್ಲಿ ಕೇವಲ 10 ರನ್ ಗಳಿಸಿದರು.

ಮತ್ತೊಂದೆಡೆ ಉಪ ನಾಯಕ ಶುಭಮನ್ ಗಿಲ್‌ ಗೆ ಈ ಸರಣಿಯು ಫಲಪ್ರದವಾಗಿಲ್ಲ. ಟಿ20 ಕ್ರಿಕೆಟ್‌ ನಲ್ಲಿ ನಾಯಕತ್ವದ ಹೊರೆ ಇಲ್ಲದಿದ್ದರೂ ಆಸೀಸ್ ವಿರುದ್ಧ ಸರಣಿಯಲ್ಲಿ ಈ ತನಕ ಮಿಂಚಿಲ್ಲ. ಕಳೆದ 7 ಇನಿಂಗ್ಸ್‌ ಗಳಲ್ಲಿ ಅರ್ಧಶತಕವನ್ನೇ ಗಳಿಸಿಲ್ಲ. 4ನೇ ಟಿ20ಯಲ್ಲಿ 39 ಎಸೆತಗಳಲ್ಲಿ 46 ರನ್ ಗಳಿಸಿ ಅರ್ಧಶತಕದ ಸನಿಹ ತಲುಪಿದ್ದರು.

ತಿಲಕ್ ವರ್ಮಾ ಹಿಂದಿನ 3 ಇನಿಂಗ್ಸ್‌ ಗಳಲ್ಲಿ 0, 29 ಹಾಗೂ 5 ರನ್ ಗಳಿಸಲಷ್ಟೇ ಶಕ್ತವಾಗಿದ್ದು, ಇನ್ನೂ ತನ್ನ ಲಯವನ್ನು ಕಂಡುಕೊಂಡಿಲ್ಲ. ಕಳೆದೆರಡು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಬದಲಿಗೆ ಆಡಿರುವ ವಿಕೆಟ್‌ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಮೇಲೆ ಒತ್ತಡವಿದೆ.

ವಿಶ್ವದ ಅಗ್ರ ರ್ಯಾಂಕಿನ ಟಿ20 ಬ್ಯಾಟರ್ ಅಭಿಷೇಕ್ ಶರ್ಮಾ ತಂಡಕ್ಕೆ ಅಗತ್ಯದ ಬಿರುಸಿನ ಆರಂಭ ಒದಗಿಸುತ್ತಿದ್ದಾರೆ. ಭಾರತದ ಕೆಳ ಸರದಿಯ ಬ್ಯಾಟರ್‌‌ ಗಳು ಉಪಯುಕ್ತ ಕೊಡುಗೆ ನೀಡುತ್ತಿದ್ದಾರೆ. 4ನೇ ಪಂದ್ಯದಲ್ಲಿ ಅಕ್ಷರ್ ಪಟೇಲ್ 11 ಎಸೆತಗಳಲ್ಲಿ 21 ರನ್ ಗಳಿಸಿದ್ದರು. 7 ಹಾಗೂ 8ನೇ ಕ್ರಮಾಂಕದಲ್ಲಿ ಆಲ್‌ ರೌಂಡರ್‌‌ ಗಳ ಉಪಸ್ಥಿತಿಯು ಭಾರತ ತಂಡಕ್ಕೆ ಬಲ ನೀಡುತ್ತಿದೆ.

ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್‌ ಸಿಂಗ್ ಒಟ್ಟು 4 ವಿಕೆಟ್‌ ಗಳನ್ನು ಪಡೆದು ತನ್ನ ತಾಕತ್ತನ್ನು ಸಾಬೀತುಪಡಿಸಿದ್ದರು. ಜಸ್‌ಪ್ರಿತ್ ಬುಮ್ರಾ ಜೊತೆ ಹೊಸ ಚೆಂಡಿನಲ್ಲಿ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ಕುಲದೀಪ್‌ ಯಾದವ್ ಅನುಪಸ್ಥಿತಿಯಲ್ಲಿ ತ್ರಿವಳಿ ಸ್ಪಿನ್ನರ್‌‌ ಗಳಾದ ವರುಣ್ ಚಕ್ರವರ್ತಿ, ಅಕ್ಷರ್ ಹಾಗೂ ಸುಂದರ್ ಭಾರತದ ಪ್ರಮುಖ ಅಸ್ತ್ರವಾಗಿದ್ದಾರೆ. ಶಿವಂ ದುಬೆ ಹಾಗೂ ಸುಂದರ್ ಆಲ್‌ ರೌಂಡ್ ಪ್ರದರ್ಶನ ನೀಡುತ್ತಿದ್ದಾರೆ.

ಸರಣಿ ನಿರ್ಣಾಯಕ 5ನೇ ಪಂದ್ಯಕ್ಕೆ ಭಾರತವು ತನ್ನ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ.

►ತಂಡಗಳು

► ಭಾರತ(ಸಂಭಾವ್ಯ): 1. ಅಭಿಷೇಕ್ ಶರ್ಮಾ, 2. ಶುಭಮನ್ ಗಿಲ್, 3. ಸೂರ್ಯಕುಮಾರ ಯಾದವ್(ನಾಯಕ), 4. ತಿಲಕ್ ವರ್ಮಾ, 5. ಅಕ್ಷರ್ ಪಟೇಲ್, 6. ವಾಶಿಂಗ್ಟನ್ ಸುಂದರ್, 7. ಜಿತೇಶ್ ಶರ್ಮಾ, 8. ಶಿವಂ ದುಬೆ, 9. ಅರ್ಷದೀಪ್‌ ಸಿಂಗ್, 10. ವರುಣ್ ಚಕ್ರವರ್ತಿ, 11. ಜಸ್‌ಪ್ರಿತ್ ಬುಮ್ರಾ.

*ಆಸ್ಟ್ರೇಲಿಯ(ಸಂಭಾವ್ಯ): 1. ಮ್ಯಾಥ್ಯೂ ಶಾರ್ಟ್, 2. ಮಿಚೆಲ್ ಮಾರ್ಷ್(ನಾಯಕ), 3. ಜೋಶ್ ಇಂಗ್ಲಿಸ್(ವಿಕೆಟ್‌ ಕೀಪರ್),4. ಟಿಮ್ ಡೇವಿಡ್, 5. ಮಿಚೆಲ್ ಓವಲ್/ಜೋಶ್ ಫಿಲಿಪ್, 6. ಮಾರ್ಕಸ್ ಸ್ಟೋಯಿನಿಸ್, 7. ಗ್ಲೆನ್ ಮ್ಯಾಕ್ಸ್‌ವೆಲ್, 8.ಕ್ಸೇವಿಯರ್ ಬಾರ್ಟ್ಲೆಟ್, 9. ಬೆನ್ ಡ್ವಾರ್ಶುಯಿಸ್, 10. ನಾಥನ್ ಎಲ್ಲಿಸ್, 11. ಆ್ಯಡಮ್ ಝಂಪಾ.

►ಪಿಚ್ ಹಾಗೂ ವಾತಾವರಣ

ಬ್ರಿಸ್ಬೇನ್‌ ನಲ್ಲಿ ಸಾಮಾನ್ಯವಾಗಿ ಪ್ರತೀ ವರ್ಷ ಈ ಸಮಯದಲ್ಲಿ ಗುಡುಗು ಸಹಿತ ಮಳೆಯಾಗುತ್ತದೆ. ಶನಿವಾರ ಸಂಜೆ ಗುಡುಗು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಭಾರೀ ಮಳೆಯಿಂದಾಗಿ ಪಂದ್ಯದಲ್ಲಿ ಓವರ್ ಕಡಿತವಾಗಬಹುದು ಇಲ್ಲವೇ ಪಂದ್ಯವು ರದ್ದಾಗುವ ಸಾಧ್ಯತೆಯೂ ಇದೆ. ಗಾಬಾ ಪಿಚ್ ಸಾಂಪ್ರದಾಯಿಕವಾಗಿ ವೇಗ ಹಾಗೂ ಬೌನ್ಸ್‌ನಿಂದ ಕೂಡಿದ್ದು, ವೇಗಿಗಳಿಗೆ ನೆರವಾಗುತ್ತದೆ. ಈ ಮೈದಾನದಲ್ಲಿ ನಡೆದ ಬಿಬಿಎಲ್ ಪಂದ್ಯಗಳಲ್ಲಿ ರನ್ ಸರಾಗವಾಗಿ ಹರಿದುಬಂದಿದ್ದು, ದೊಡ್ಡ ಮೊತ್ತಗಳು ಪೇರಿಸಲ್ಪಟ್ಟಿದ್ದವು.

► ಪಂದ್ಯ ಆರಂಭದ ಸಮಯ: ಮಧ್ಯಾಹ್ನ 1:45

(ಭಾರತೀಯ ಕಾಲಮಾನ)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News