×
Ad

ದಕ್ಷಿಣ ಆಫ್ರಿಕಾ ವಿರುದ್ಧ ಮಿಂಚಿದ ಡೇವಿಡ್, ಹೇಝಲ್ವುಡ್ : ಸತತ 9ನೇ ಟಿ-20 ಪಂದ್ಯ ಗೆದ್ದ ಆಸ್ಟ್ರೇಲಿಯ

Update: 2025-08-10 21:08 IST

PC - AFP

ಡಾರ್ವಿನ್, ಆ.10: ಟಿಮ್ ಡೇವಿಡ್(83 ರನ್, 52 ಎಸೆತ, 4 ಬೌಂಡರಿ, 8 ಸಿಕ್ಸರ್)ಭರ್ಜರಿ ಬ್ಯಾಟಿಂಗ್, ಬೆನ್ ಡ್ವಾರ್ಶುಯಿಸ್(3-26) ಹಾಗೂ ಜೋಶ್ ಹೇಝಲ್ವುಡ್(3-27) ಕರಾರುವಾಕ್ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯ ಕ್ರಿಕೆಟ್ ತಂಡವು ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮೊದಲ ಟಿ-20 ಅಂತರ್ರಾಷ್ಟ್ರೀಯ ಪಂದ್ಯವನ್ನು 17 ರನ್ ಅಂತರದಿಂದ ಗೆದ್ದುಕೊಂಡಿದೆ. ಇದರೊಂದಿಗೆ 3 ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಮೊದಲ 8 ಓವರ್‌ನೊಳಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಬ್ಯಾಟಿಂಗ್ ವೈಫಲ್ಯ ಕಂಡಿದ್ದರೂ ಆಸ್ಟ್ರೇಲಿಯ ತಂಡವು ಉತ್ತಮ ಬೌಲಿಂಗ್ ಬೆಂಬಲದಿಂದ ಸತತ 9ನೇ ಟಿ-20 ಪಂದ್ಯವನ್ನು ಜಯಿಸಿದೆ. ಮಿಚೆಲ್ ಮಾರ್ಷ್ ಅವರು ಟಿ-20 ನಾಯಕನಾಗಿ 25 ಪಂದ್ಯಗಳಲ್ಲಿ 22ರಲ್ಲಿ ಜಯ ಸಾಧಿಸಿದ್ದಾರೆ.

ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ ತಂಡವು ಆರಂಭಿಕ ಕುಸಿತ ಕಂಡಿದ್ದರೂ ಡೇವಿಡ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 178 ರನ್‌ ಗಳಿಸಿ ಆಲೌಟಾಯಿತು.

ಗೆಲ್ಲಲು 179 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು ಆರಂಭಿಕ ಬ್ಯಾಟರ್ ರಯಾನ್ ರಿಕೆಲ್ಟನ್(71 ರನ್, 55 ಎಸೆತ,7 ಬೌಂಡರಿ, 1 ಸಿಕ್ಸರ್)ಅರ್ಧಶತಕದ ಕೊಡುಗೆಯ ಹೊರತಾಗಿಯೂ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 161 ರನ್‌ಗಳಿಸಿ ಸೋಲೊಪ್ಪಿಕೊಂಡಿದೆ.

ಆಫ್ರಿಕಾದ ಪರ ರಿಕೆಲ್ಟನ್ ಸರ್ವಾಧಿಕ ಸ್ಕೋರ್ ಗಳಿಸಿದರು. ಟ್ರಿಸ್ಟನ್ ಸ್ಟಬ್ಸ್(37 ರನ್, 27 ಎಸೆತ, 5 ಬೌಂಡರಿ)ಅವರೊಂದಿಗೆ 4ನೇ ವಿಕೆಟ್‌ಗೆ 52 ಎಸೆತಗಳಲ್ಲಿ 72 ರನ್ ಗಳಿಸಿ ಒಂದಷ್ಟು ಹೋರಾಟ ನೀಡಿದರು. ರಿಕೆಲ್ಟನ್ ಅವರು ರಬಾಡ ಅವರೊಂದಿಗೆ 8ನೇ ವಿಕೆಟ್‌ಗೆ 35 ರನ್ ಸೇರಿಸಿದರೂ ತಂಡಕ್ಕೆ ಗೆಲುವು ಒಲಿಯಲಿಲ್ಲ. ಉಳಿದ ಆಟಗಾರರರು ಹೇಝಲ್ವುಡ್(2-27)ಹಾಗೂ ಡ್ವಾರ್ಶುಯಿಸ್(3-26)ದಾಳಿಗೆ ತತ್ತರಿಸಿದರು.

ಸ್ಪಿನ್ನರ್ ಆಡಮ್ ಝಂಪಾ(2-33) ಎರಡು ವಿಕೆಟ್ ಪಡೆದು ಗೆಲುವಿಗೆ ತನ್ನದೆ ಆದ ಕೊಡುಗೆ ನೀಡಿದರು. ಟಿಮ್ ಡೇವಿಡ್ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.

ಇತಿಹಾಸ ನಿರ್ಮಿಸಿದ ದಕ್ಷಿಣ ಆಫ್ರಿಕಾದ ವೇಗಿ ಕ್ವೆನಾ ಮಫಾಕಾ

ಟಾಸ್ ಜಯಿಸಿದ ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಮೊದಲು ಬೌಲಿಂಗ್ ಮಾಡುವ ದಿಟ್ಟ ನಿರ್ಧಾರ ತೆಗೆದುಕೊಂಡಿತು. 19ರ ಹರೆಯದ ಎಡಗೈ ವೇಗಿ ಕ್ವೆನಾ ಮಫಾಕಾ(4-20)ಅತ್ಯುತ್ತಮ ದಾಳಿ ನಡೆಸಿ ಆಸ್ಟ್ರೇಲಿಯ ತಂಡದ ವಿರುದ್ಧ ಟಿ-20 ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮಾಡಿದ ಕಿರಿಯ ಬೌಲರ್ ಎನಿಸಿಕೊಂಡು ಇತಿಹಾಸ ನಿರ್ಮಿಸಿದರು.

ಕಾಗಿಸೊ ರಬಾಡ (2-29)ಅವರು ಟ್ರಾವಿಸ್ ಹೆಡ್(2 ರನ್) ಹಾಗೂ ಮಿಚೆಲ್ ಮಾರ್ಷ್(13 ರನ್)ವಿಕೆಟನ್ನು ಕಬಳಿಸಿ ಆಸ್ಟ್ರೇಲಿಯಕ್ಕೆ ಆರಂಭಿಕ ಆಘಾತ ನೀಡಿದರು. ಜೋಶ್ ಇಂಗ್ಲಿಷ್(0) ಖಾತೆ ತೆರೆಯುವ ಮೊದಲೇ ಜಾರ್ಜ್ ಲಿಂಡೆಗೆ ವಿಕೆಟ್ ಒಪ್ಪಿಸಿದರು. ಮಫಾಕಾ ಅವರು ಮೈಕಲ್ ಒವೆನ್(2 ರನ್), ಡ್ವಾರ್ಶುಯಿಸ್(17 ರನ್), ಆಡಮ್ ಝಂಪಾ(1 ರನ್) ಹಾಗೂ ಡೇವಿಡ್ ವಿಕೆಟ್‌ಗಳನ್ನು ಪಡೆದರು.

ಆಸ್ಟ್ರೇಲಿಯ ತಂಡವು 7 ಓವರ್‌ಗಳಲ್ಲಿ ಕೇವಲ 75 ರನ್ ಗಳಿಸಿ 6ನೇ ವಿಕೆಟ್ ಕಳೆದುಕೊಂಡಿತು. ಆಗ ಕ್ರೀಸಿಗಿಳಿದ ಟಿಮ್ ಡೇವಿಡ್ ಏಕಾಂಗಿ ಹೋರಾಟ ನೀಡಿದರು. ತಾನೆದುರಿಸಿದ 2ನೇ ಎಸೆತದಲ್ಲಿ ರಬಾಡ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸಿದ ಡೇವಿಡ್ ಒಂದೆಡೆ ವಿಕೆಟ್ ಬೀಳುತ್ತಿದ್ದರೂ ದೃತಿಗೆಡಲಿಲ್ಲ.

ಗ್ರೀನ್(35 ರನ್, 13 ಎಸೆತ) ಜೊತೆ 4ನೇ ವಿಕೆಟ್‌ಗೆ 40 ರನ್, ಡ್ವಾರ್ಶುಯಿಸ್ ಅವರೊಂದಿಗೆ 7ನೇ ವಿಕೆಟ್‌ಗೆ 59 ರನ್ ಹಾಗೂ ಎಲ್ಲಿಸ್ ಜೊತೆ 8ನೇ ವಿಕೆಟ್‌ಗೆ 30 ರನ್ ಸೇರಿಸಿದ ಡೇವಿಡ್ 52 ಎಸೆತಗಳಲ್ಲಿ 83 ರನ್ ಕಲೆ ಹಾಕಿ ಆಸ್ಟ್ರೇಲಿಯ ತಂಡವು ಸ್ಪರ್ಧಾತ್ಮಕ ಸ್ಕೋರ್(178)ಗಳಿಸುವಲ್ಲಿ ನೆರವಾದರು.

56 ರನ್ ಗಳಿಸಿದ್ದಾಗ ಡೇವಿಸ್ ಕ್ಯಾಚ್ ಕೈಚೆಲ್ಲಿದ್ದ ದಕ್ಷಿಣ ಆಫ್ರಿಕಾ ಒಟ್ಟು 4 ಕ್ಯಾಚ್ ಕೈಬಿಟ್ಟಿತ್ತು. ಆದರೆ 26 ಟಿ-20 ಪಂದ್ಯಗಳಲ್ಲಿ ಇದೇ ಮೊದಲ ಬಾರಿ ಆಸ್ಟ್ರೇಲಿಯವನ್ನು ಆಲೌಟ್ ಮಾಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News