×
Ad

ಆಸ್ಟ್ರೇಲಿಯ ಅಂಡರ್-19 ವಿರುದ್ಧ ಯೂತ್ ಟೆಸ್ಟ್ ಸರಣಿ; ಕ್ಲೀನ್‌ಸ್ವೀಪ್ ಸಾಧಿಸಿದ ಭಾರತದ ಅಂಡರ್-19 ತಂಡ

Update: 2025-10-08 21:23 IST

Photo Credit : PTI

ಮಕಾಯ್, ಅ.8: ಎರಡನೇ ಯೂತ್ ಟೆಸ್ಟ್ ಪಂದ್ಯದಲ್ಲಿ ಭಾರತದ ಅಂಡರ್-19 ಕ್ರಿಕೆಟ್ ತಂಡವು ಆಸ್ಟ್ರೇಲಿಯದ ಅಂಡರ್-19 ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ 2 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡು ಕ್ಲೀನ್‌ ಸ್ವೀಪ್ ಸಾಧಿಸಿದೆ.

ಚತುರ್ದಿನ ಪಂದ್ಯದ 2ನೇ ದಿನದಾಟವಾದ ಬುಧವಾರ ಗೆಲ್ಲಲು ಕೇವಲ 81 ರನ್ ಗುರಿ ಪಡೆದ ಭಾರತ ತಂಡವು 12.2 ಓವರ್‌ ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು 84 ರನ್ ಗಳಿಸಿತು. ಔಟಾಗದೆ 33 ರನ್(35 ಎಸೆತ, 6 ಬೌಂಡರಿ) ಗಳಿಸಿದ ವೇದಾಂತ ತ್ರಿವೇದಿ ಬೌಂಡರಿ ಗಳಿಸುವ ಮೂಲಕ ಪಂದ್ಯಕ್ಕೆ ಅಂತ್ಯ ಹಾಡಿದರು.

ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಶೂನ್ಯಕ್ಕೆ ಔಟಾದರೆ, ನಾಯಕ ಆಯುಷ್ ಮ್ಹಾತ್ರೆ(13 ರನ್), ವಿಹಾನ್ ಮಲ್ಹೋತ್ರಾ(21 ರನ್)ಹಾಗೂ ರಾಹುಲ್ ಕುಮಾರ್( ಔಟಾಗದೆ 13 ರನ್)ಚೇಸ್ ವೇಳೆ ಎರಡಂಕೆಯ ಸ್ಕೋರ್ ಗಳಿಸಿದರು.

ಮೊದಲ ಇನಿಂಗ್ಸ್‌ನಲ್ಲಿ 36 ರನ್ ಮುನ್ನಡೆ ಪಡೆದಿದ್ದ ಪ್ರವಾಸಿ ತಂಡ ಭಾರತವು ಆತಿಥೇಯ ಆಸ್ಟ್ರೇಲಿಯ ತಂಡವನ್ನು 2ನೇ ಇನಿಂಗ್ಸ್‌ನಲ್ಲಿ 116 ರನ್‌ಗೆ ಆಲೌಟ್ ಮಾಡಿ ಗೆಲ್ಲಲು ಸುಲಭ ಸವಾಲು ಪಡೆಯಿತು. ನಮನ್ ಪುಷ್ಪಕ್(3-19) ಹಾಗೂ ಹೆನಿಲ್ ಪಟೇಲ್(3-23) ತಲಾ ಮೂರು ವಿಕೆಟ್‌ಗಳನ್ನು ಪಡೆದರು. ಆಸ್ಟ್ರೇಲಿಯದ ಅಂಡರ್-19 ತಂಡದ ವಿಕೆಟ್‌ಕೀಪರ್ ಅಲೆಕ್ಸ್ ಲೀ ಯಂಗ್(38 ರನ್, 78 ಎಸೆತ, 4 ಬೌಂಡರಿ)ಸರ್ವಾಧಿಕ ಸ್ಕೋರ್ ಗಳಿಸಿದರು.

ಆಸ್ಟ್ರೇಲಿಯ ಪ್ರವಾಸದಲ್ಲಿ 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳ ಸಹಿತ ಎಲ್ಲ ಐದೂ ಪಂದ್ಯಗಳಲ್ಲಿ ಗೆದ್ದಿರುವ ಭಾರತದ ಅಂಡರ್-19 ಕ್ರಿಕೆಟ್ ತಂಡ ಯಶಸ್ವಿ ಪ್ರದರ್ಶನ ನೀಡಿದೆ.

ಎರಡೂ ಸ್ವರೂಪದ ಪಂದ್ಯಗಳಲ್ಲಿ ವೇದಾಂತ ತ್ರಿವೇದಿ ಗರಿಷ್ಠ ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 173 ರನ್ ಗಳಿಸಿದ್ದ ತ್ರಿವೇದಿ ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 198 ರನ್ ಕಲೆ ಹಾಕಿದ್ದರು. ಟೆಸ್ಟ್‌ನಲ್ಲಿ 133 ರನ್ ಹಾಗೂ ಏಕದಿನ ಪಂದ್ಯದಲ್ಲಿ 124 ರನ್ ಗಳಿಸಿದ್ದ ಸೂರ್ಯವಂಶಿ 2ನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News