×
Ad

ಎರಡನೇ ಆ್ಯಶಸ್ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಕ್ಕೆ ಜಯ, ಸರಣಿ ಮುನ್ನಡೆ

ಮಿಚೆಲ್ ಸ್ಟಾರ್ಕ್ ‘ಪಂದ್ಯಶ್ರೇಷ್ಠ’

Update: 2025-12-08 00:15 IST

Photo : PTI

ಬ್ರಿಸ್ಬೇನ್, ಡಿ.7: ಹಗಲು-ರಾತ್ರಿ ನಡೆದ ಎರಡನೇ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ಕ್ರಿಕೆಟ್ ತಂಡವು ಇಂಗ್ಲೆಂಡ್ ತಂಡದ ವಿರುದ್ಧ ಎಂಟು ವಿಕೆಟ್ಗಳ ಅಂತರದಿಂದ ಸುಲಭ ಜಯ ದಾಖಲಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಆತಿಥೇಯರು 65 ರನ್ ಗುರಿಯನ್ನು ಕೇವಲ 10 ಓವರ್ಗಳಲ್ಲಿ ತಲುಪಿದ್ದು, ನಾಯಕ ಸ್ಟೀವನ್ ಸ್ಮಿತ್(ಔಟಾಗದೆ 23, 9 ಎಸೆತ) ಅವರು ಅಟ್ಕಿನ್ಸನ್ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸಿ ಗೆಲುವಿನ ಮುದ್ರೆಯೊತ್ತಿದರು. ಇಂಗ್ಲೆಂಡ್ ತಂಡವು ಆಸ್ಟ್ರೇಲಿಯದಲ್ಲಿ ಆಡಿರುವ ಹಿಂದಿನ 17 ಟೆಸ್ಟ್ ಪಂದ್ಯಗಳ ಪೈಕಿ 15ನೇ ಸೋಲು ಕಂಡಿತು. ಮತ್ತೊಂದೆಡೆ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ಶ್ರೇಷ್ಠ ಪ್ರದರ್ಶನ ಮುಂದುವರಿಸಿದೆ.

ಟೆಸ್ಟ್ ಕ್ರಿಕೆಟ್ ನ ಸುಮಾರು 150 ವರ್ಷಗಳಲ್ಲಿ ಕೇವಲ ಒಂದು ತಂಡ ಮಾತ್ರ ಸರಣಿಯಲ್ಲಿ 0-2 ಅಂತರದಿಂದ ಹಿನ್ನಡೆ ಕಂಡ ಬಳಿಕ ಸರಣಿ ಗೆದ್ದಿದೆ. 1936-37ರಲ್ಲಿ ಸ್ವದೇಶದಲ್ಲಿ ನಡೆದಿದ್ದ ಆ್ಯಶಸ್ ಸರಣಿಯಲ್ಲಿ ಡಾನ್ ಬ್ರಾಡ್ಮನ್ ನೇತೃತ್ವದ ಆಸ್ಟ್ರೇಲಿಯ ತಂಡವು ಈ ಸಾಧನೆ ಮಾಡಿತ್ತು.

ಇಂಗ್ಲೆಂಡ್ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲೂ ನೀರಸ ಪ್ರದರ್ಶನ ನೀಡಿದೆ. ಆದರೆ ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ಗೆ ಹೋಲಿಸಿದರೆ ಸ್ವಲ್ಪ ಸುಧಾರಣೆ ಕಂಡಿದೆ. ಪರ್ತ್ನಲ್ಲಿ ಇಂಗ್ಲೆಂಡ್ ತಂಡವು ಎರಡೇ ದಿನದಲ್ಲಿ ಸೋತಿತ್ತು.

ಇಂಗ್ಲೆಂಡ್ ನ ಬ್ಯಾಟಿಂಗ್ ಸರದಿಯು ಸೀಮಿತ ಯಶಸ್ಸು ಗಳಿಸಿದ್ದು, ಜೋ ರೂಟ್ ಹಾಗೂ ಝ್ಯಾಕ್ ಕ್ರಾಲಿ ಮೊದಲ ಇನಿಂಗ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಬೆನ್ ಸ್ಟೋಕ್ಸ್ ಹಾಗೂ ವಿಲ್ ಜಾಕ್ಸ್ ಎರಡನೇ ಇನಿಂಗ್ಸ್ ನಲ್ಲಿ ಒಂದಷ್ಟು ಪ್ರತಿರೋಧ ಒಡ್ಡಿದರು. ಗಾಬಾದ ಬೌನ್ಸಿ ಪಿಚ್ನಲ್ಲಿ ಇಂಗ್ಲೆಂಡ್ ನ ಬ್ಯಾಟಿಂಗ್ ತಂತ್ರಗಾರಿಕೆಯ ಕೊರತೆ ಎದ್ದು ಕಂಡಿದೆ.

ಇಂಗ್ಲೆಂಡ್ ತಂಡದ ಬೌಲಿಂಗ್ ರಣನೀತಿಯು ಪರಿಣಾಮಕಾರಿಯಾಗಿರಲಿಲ್ಲ. ಹೊಸ ಪಿಂಕ್ ಬಾಲ್ ಅನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಆಸ್ಟ್ರೇಲಿಯ ತಂಡವು ಪ್ರಮುಖ ಆಟಗಾರರಾದ ಪ್ಯಾಟ್ ಕಮಿನ್ಸ್ ಹಾಗೂ ಜೋಶ್ ಹೇಝಲ್ವುಡ್ ಅನುಪಸ್ಥಿತಿಯಲ್ಲೂ ಯಶಸ್ವಿ ಬೌಲಿಂಗ್ ಪ್ರದರ್ಶನ ನೀಡಿತು.

ಇಂಗ್ಲೆಂಡ್ ನ ಫೀಲ್ಡಿಂಗ್ ಕೂಡ ಕಳಪೆಯಾಗಿದ್ದು, ಮೊದಲ ಇನಿಂಗ್ಸ್ನಲ್ಲಿ ಐದು ಕ್ಯಾಚ್ಗಳನ್ನು ಕೈಚೆಲ್ಲಿತ್ತು. ಆಸ್ಟ್ರೇಲಿಯ ತಂಡವು ಪಂದ್ಯದುದ್ದಕ್ಕೂ ಪರಿಪೂರ್ಣ ಫೀಲ್ಡಿಂಗ್ ಮಾಡಿತು. ಮೊದಲ ಇನಿಂಗ್ಸ್ನಲ್ಲಿ ಸ್ಟೋಕ್ಸ್ (19 ರನ್)ಅವರು ಜೋಶ್ ಇಂಗ್ಲಿಸ್ಗೆ ರನೌಟಾಗಿದ್ದು, ನಿರ್ಣಾಯಕ ಕ್ಷಣವಾಗಿ ಮಾರ್ಪಟ್ಟಿತು.

ಆಸ್ಟ್ರೇಲಿಯ ತಂಡವು ಇದೀಗ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸುಸ್ಥಿತಿಯಲ್ಲಿದ್ದು, ಆ್ಯಶಸ್ ಕಪ್ ಅನ್ನು ತನ್ನಲ್ಲೇ ಉಳಿಸಿಕೊಳ್ಳುವ ಫೇವರಿಟ್ ತಂಡವಾಗಿ ಹೊರಹೊಮ್ಮಿದೆ. ಇನ್ನುಳಿದ ಮೂರು ಪಂದ್ಯಗಳು ಅಡಿಲೇಡ್, ಮೆಲ್ಬರ್ನ್ ಹಾಗೂ ಸಿಡ್ನಿಯಲ್ಲಿ ನಡೆಯಲಿದೆ.

ಆಸ್ಟ್ರೇಲಿಯ ತಂಡವು ಶನಿವಾರ ತನ್ನ ಮೊದಲ ಇನಿಂಗ್ಸ್ನಲ್ಲಿ 511 ರನ್ ಗಳಿಸಿ 177 ರನ್ ಮುನ್ನಡೆ ಪಡೆದಾಗಲೇ ಇಂಗ್ಲೆಂಡ್ ಭಾರೀ ಸಂಕಷ್ಟಕ್ಕೆ ಸಿಲುಕಿತು. ಶನಿವಾರ ಮೂರನೇ ದಿನದಾಟದಂತ್ಯಕ್ಕೆ ತನ್ನ ಎರಡನೇ ಇನಿಂಗ್ಸ್ನಲ್ಲಿ 134 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್ಗಳನ್ನು ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು.

ಇಂಗ್ಲೆಂಡ್ 241 ರನ್:

ನಾಲ್ಕನೇ ದಿನದಾಟವಾದ ರವಿವಾರ 6 ವಿಕೆಟ್ಗಳ ನಷ್ಟಕ್ಕೆ 134 ರನ್ನಿಂದ ತನ್ನ ಎರಡನೇ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ತಂಡವು 75.2 ಓವರ್ಗಳಲ್ಲಿ 241 ರನ್ ಗಳಿಸಿ ಆಲೌಟಾಯಿತು. ನಾಯಕ ಬೆನ್ ಸ್ಟೋಕ್ಸ್(50 ರನ್, 152 ಎಸೆತ)ಎರಡನೇ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದರು.

ತಲಾ 4 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಸ್ಟೋಕ್ಸ್ ಹಾಗೂ ಜಾಕ್ಸ್ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಆಸ್ಟ್ರೇಲಿಯದ ವೇಗದ ದಾಳಿಯನ್ನು ದಿಟ್ಟವಾಗಿ ಎದುರಿಸಿ ಅಲ್ಪ ಮುನ್ನಡೆ ಪಡೆಯುವ ದಿಕ್ಕಿನಲ್ಲಿ ಸಾಗಿದರು.

ಇಂಗ್ಲೆಂಡ್ ತಂಡವು ತನ್ನ ಎಂದಿನ ಆಕ್ರಮಣಕಾರಿ ಶೈಲಿಯಲ್ಲಿ ಬ್ಯಾಟಿಂಗ್ ಮಾಡದೆ ನಿಧಾನಗತಿಯ ಬ್ಯಾಟಿಂಗ್ ಮಾಡಿತು. ಸ್ಟೋಕ್ಸ್ ಹಾಗೂ ಜಾಕಸ್ ಬೆಳಗ್ಗಿನ ಅವಧಿಯಲ್ಲಿ ಎಚ್ಚರಿಕೆಯಿಂದ ಆಡಿದರು. ಹೊಡೆತಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿದರು. ಒಂಟಿ ರನ್ ಮೂಲಕ ಇನಿಂಗ್ಸ್ ಬೆಳೆಸಿದರು.

ಸ್ಟೋಕ್ಸ್ ಹಾಗೂ ಜಾಕ್ಸ್ ಮೊದಲ ಒಂದು ಗಂಟೆಯಲ್ಲಿ 28 ರನ್ ಗಳಿಸಿದರು. 43 ರನ್ ಹಿನ್ನಡೆಯಿಂದ ಹೊರ ಬರಲು 96 ನಿಮಿಷಗಳನ್ನು ತೆಗೆದುಕೊಂಡರು. ಈ ಜೋಡಿ 59 ರನ್ ಗಳಿಸಲು ಎರಡು ಗಂಟೆ ತೆಗೆದುಕೊಂಡಿತು.

ಆಸ್ಟ್ರೇಲಿಯದ ಬೌಲರ್ ಗಳು ಪಿಚ್ ವಿರೂಪಗೊಂಡಿದ್ದರೂ ರವಿವಾರ ಹಗಲು ಹೊತ್ತಿನಲ್ಲಿ ಹೆಚ್ಚು ಯಶಸ್ಸು ಕಾಣಲಿಲ್ಲ. ಜಾಕ್ಸ್ ಅವರು 92 ಎಸೆತಗಳಲ್ಲಿ 41 ರನ್ ಗಳಿಸಿ ಮೈಕಲ್ ನೆಸೆರ್ಗೆ ವಿಕೆಟ್ ಒಪ್ಪಿಸುವ ಮೂಲಕ ಏಳನೇ ವಿಕೆಟ್ಗೆ 96 ರನ್ ಜೊತೆಯಾಟಕ್ಕೆ ತೆರೆ ಬಿತ್ತು. ಸ್ಟೋಕ್ಸ್ ಕೂಡ ನೆಸೆರ್ಗೆ ವಿಕೆಟ್ ಒಪ್ಪಿಸಿದಾಗ ಇಂಗ್ಲೆಂಡ್ ತಂಡವು 227 ರನ್ಗೆ 8ನೇ ವಿಕೆಟ್ ಕಳೆದುಕೊಂಡಿತು. ಇಂಗ್ಲೆಂಡ್ 17 ರನ್ಗೆ ಕೊನೆಯ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು 241 ರನ್ಗೆ ಆಲೌಟಾಯಿತು.

ಇಂಗ್ಲೆಂಡ್ ನ ಇನ್ನುಳಿದ ಬ್ಯಾಟರ್ಗಳಾದ-ಅಟ್ಕಿನ್ಸನ್(3 ರನ್) ಹಾಗೂ ಕಾರ್ಸ್(7 ರನ್) ಬೇಗನೆ ಔಟಾದರು. ಹಿರಿಯ ಸ್ಪಿನ್ನರ್ ನಾಥನ್ ಲಿಯೊನ್ ಬದಲಿಗೆ ಆಡಿದ 35ರ ಹರೆಯದ ನೆಸೆರ್ ಐದು ವಿಕೆಟ್ ಗೊಂಚಲು(5-42)ಪಡೆದು ಜೀವನಶ್ರೇಷ್ಠ ಪ್ರದರ್ಶನ ನೀಡಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡರು. ಮೈದಾನದಲ್ಲಿ 210 ಕ್ಯಾಚ್ಗಳನ್ನು ಪಡೆದ ಸ್ಟೀವ್ ಸ್ಮಿತ್ ಅವರು ರಾಹುಲ್ ದ್ರಾವಿಡ್ ಅವರ ಸಾರ್ವಕಾಲಿಕ ಶ್ರೇಷ್ಠ ದಾಖಲೆ ಸರಿಗಟ್ಟಿದರು.

ಗೆಲ್ಲಲು 65 ರನ್ ಬೆನ್ನಟ್ಟಲಾರಂಭಿಸಿದ ಆಸ್ಟ್ರೇಲಿಯ ತಂಡವು ಟ್ರಾವಿಸ್ ಹೆಡ್(22 ರನ್, 22 ಎಸೆತ) ಹಾಗೂ ಮಾರ್ನಸ್ ಲ್ಯಾಬುಶೇನ್(3 ರನ್) ವಿಕೆಟನ್ನು ಕಳೆದುಕೊಂಡಿದ್ದರೂ ಸ್ಮಿತ್(23 ರನ್) ಹಾಗೂ ವೆದರಾಲ್ಡ್ (ಔಟಾಗದೆ 17, 23 ಎಸೆತ) ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.

ಒಟ್ಟು 8 ವಿಕೆಟ್ಗಳನ್ನು ಕಬಳಿಸಿದ್ದಲ್ಲದೆ, 77 ರನ್ ಗಳಿಸಿರುವ ಮಿಚೆಲ್ ಸ್ಟಾರ್ಕ್ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News