ಡ್ಯುರಾಂಡ್ ಕಪ್‌ ಗೆ ಮುಂಬೈ ಎಫ್‌ಸಿ ತಂಡದಲ್ಲಿ ಟೈಗರ್ ಶ್ರಾಫ್; ವೃತ್ತಿಪರ ಫುಟ್‌ಬಾಲ್‌ ಗೆ ಪಾದಾರ್ಪಣೆ ಸಾಧ್ಯತೆ

Update: 2026-07-28 19:45 IST

ನಟ ಟೈಗರ್ ಶ್ರಾಫ್ | Photo Credit : X 

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರು ಫುಟ್‌ಬಾಲ್ ಮೇಲಿನ ತಮ್ಮ ದೀರ್ಘಕಾಲದ ಆಸಕ್ತಿಯನ್ನು ವೃತ್ತಿಪರ ಮಟ್ಟಕ್ಕೆ ಕೊಂಡೊಯ್ಯುವತ್ತ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಮುಂಬರುವ ಡ್ಯುರಾಂಡ್ ಕಪ್‌ ಗಾಗಿ ಮುಂಬೈ ಎಫ್‌ಸಿ ತಂಡದಲ್ಲಿ ಅವರ ಹೆಸರನ್ನು ನೋಂದಾಯಿಸಲಾಗಿದ್ದು, ಪ್ರತಿಷ್ಠಿತ ಟೂರ್ನಿಯಲ್ಲಿ ಅವರು ವೃತ್ತಿಪರ ಫುಟ್‌ಬಾಲ್‌ ಗೆ ಚೊಚ್ಚಲ ಪ್ರವೇಶ ಮಾಡುವ ಸಾಧ್ಯತೆ ಇದೆ.

ಈ ಕುರಿತು ಮುಂಬೈ ಎಫ್‌ಸಿಯ ಸಹ-ಮಾಲೀಕ ಜೊಹೆಬ್ ಅಮ್ರಾನಿ ಮಾಹಿತಿ ನೀಡಿದ್ದು, ಟೈಗರ್ ಶ್ರಾಫ್ ಸದ್ಯ ತಂಡದೊಂದಿಗೆ ನಿಯಮಿತವಾಗಿ ತರಬೇತಿ ಪಡೆಯುತ್ತಿದ್ದಾರೆ. ಶಿಲ್ಲಾಂಗ್‌ ನಲ್ಲಿ ನಡೆಯಲಿರುವ ಗುಂಪು ಹಂತದ ಪಂದ್ಯಗಳಲ್ಲಿ ಒಂದಕ್ಕೆ ಅವರು ತಂಡದೊಂದಿಗೆ ಪ್ರಯಾಣಿಸುವ ಸಾಧ್ಯತೆಯೂ ಇದೆ ಎಂದು ತಿಳಿಸಿದ್ದಾರೆ.

‘ಟೈಗರ್ ತಂಡದಲ್ಲಿ ಅಧಿಕೃತವಾಗಿ ನೋಂದಾಯಿಸಿಕೊಂಡಿದ್ದಾರೆ. ಎಲ್ಲ ವ್ಯವಸ್ಥೆಗಳನ್ನೂ ಪೂರ್ಣಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಟೈಗರ್ ಅವರಂತಹ ಜನಪ್ರಿಯ ವ್ಯಕ್ತಿ ಟೈಯರ್–2 ಹಾಗೂ ಟೈಯರ್–3 ನಗರಗಳಿಗೆ ಬಂದಾಗ ಹೆಚ್ಚಿನ ಭದ್ರತಾ ವ್ಯವಸ್ಥೆ ಅಗತ್ಯವಾಗುತ್ತದೆ. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ’ ಎಂದು ಅಮ್ರಾನಿ ಸ್ಪೋರ್ಟ್‌ಸ್ಟಾರ್ ಗೆ ತಿಳಿಸಿದ್ದಾರೆ.

‘ಸಾಮಾಜಿಕ ಮಾಧ್ಯಮದ ಪ್ರಭಾವವನ್ನು ಕೂಡ ಗಮನದಲ್ಲಿಟ್ಟುಕೊಂಡಿದ್ದೇವೆ. ಯಾವುದೇ ಬೆಳವಣಿಗೆ ಕ್ಷಣಾರ್ಧದಲ್ಲಿ ವ್ಯಾಪಿಸಬಹುದಾದ ಕಾರಣ ಎಲ್ಲ ಅಂಶಗಳನ್ನು ಪರಿಗಣಿಸಿ ಅವರ ವೇಳಾಪಟ್ಟಿಯನ್ನು ರೂಪಿಸಿದ್ದೇವೆ. ಎಲ್ಲವೂ ಯೋಜನೆಯಂತೆ ನಡೆದರೆ ಅವರು ಖಂಡಿತವಾಗಿಯೂ ಒಂದು ಪಂದ್ಯಕ್ಕಾಗಿ ತಂಡದೊಂದಿಗೆ ಪ್ರಯಾಣಿಸಲಿದ್ದಾರೆ. ಸದ್ಯ ಅವರು ತಂಡದೊಂದಿಗೆ ತರಬೇತಿ ಮುಂದುವರಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

2024ರಿಂದಲೇ ಮುಂಬೈ ಎಫ್‌ಸಿಯೊಂದಿಗೆ ನಂಟು

2024ರಲ್ಲಿ ಮುಂಬೈ ಎಫ್‌ಸಿ ಸ್ಥಾಪನೆಯಾದಾಗಿನಿಂದಲೇ ಟೈಗರ್ ಶ್ರಾಫ್ ಕ್ಲಬ್‌ನೊಂದಿಗೆ ನಂಟು ಹೊಂದಿದ್ದಾರೆ. ಅಲ್ಲದೆ, ಮುಂಬೈ ಜಿಲ್ಲಾ ಲೀಗ್‌ನಲ್ಲಿ ತಂಡವನ್ನು ನಿಯಮಿತವಾಗಿ ಪ್ರತಿನಿಧಿಸುತ್ತಿದ್ದಾರೆ.

2023ರಲ್ಲಿ ನಡೆದ ಪ್ರಭಾವಿಗಳ ಫುಟ್‌ಬಾಲ್ ಲೀಗ್‌ನಲ್ಲಿ ಟೈಗರ್ ಶ್ರಾಫ್ ಅವರ ಆಟದ ಸಾಮರ್ಥ್ಯ ಮೊದಲ ಬಾರಿಗೆ ಗಮನ ಸೆಳೆದಿತ್ತು ಎಂದು ಅಮ್ರಾನಿ ತಿಳಿಸಿದ್ದಾರೆ. ಆ ಟೂರ್ನಿಯಲ್ಲಿ ನಟ ರಣಬೀರ್ ಕಪೂರ್ ಹಾಗೂ ಭಾರತದ ಮಾಜಿ ಕ್ರಿಕೆಟ್ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಭಾಗವಹಿಸಿದ್ದರು. ಬಳಿಕ ಟೈಗರ್ ಅವರ ಫುಟ್‌ಬಾಲ್ ಪ್ರತಿಭೆಯನ್ನು ಗುರುತಿಸಿ ಅವರನ್ನು ಮುಂಬೈ ಎಫ್‌ಸಿಯೊಂದಿಗೆ ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳಲಾಯಿತು.

ಡ್ಯುರಾಂಡ್ ಕಪ್‌ನಲ್ಲಿ ಟೈಗರ್ ಶ್ರಾಫ್ ಅವರಿಗೆ ಅವಕಾಶ ದೊರೆತರೆ, ಅದು ಅವರ ವೃತ್ತಿಪರ ಫುಟ್‌ಬಾಲ್ ಬದುಕಿನ ಮೊದಲ ಅಧಿಕೃತ ಪಂದ್ಯವಾಗಲಿದ್ದು, ಬಾಲಿವುಡ್ ನಟನಿಂದ ವೃತ್ತಿಪರ ಫುಟ್‌ಬಾಲ್ ಆಟಗಾರನಾಗುವ ಹೊಸ ಅಧ್ಯಾಯಕ್ಕೆ ಚಾಲನೆ ಸಿಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News