ಕಾಮನ್‌ವೆಲ್ತ್ ಗೇಮ್ಸ್ | ಫೈನಲ್ ತಲುಪಲು ಗುರಿಂದರ್‌ವೀರ್ ಸಿಂಗ್ ವಿಫಲ

Update: 2026-07-27 20:35 IST

ಗುರಿಂದರ್‌ವೀರ್ ಸಿಂಗ್  | Photo Credit : X \ @sportsapna1

ಗ್ಲಾಸ್ಗೊ, ಜು.27: ಭಾರತದ ಗುರಿಂದರ್‌ವೀರ್ ಸಿಂಗ್ ಸೋಮವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ 100 ಮೀ. ಓಟದ ಸ್ಪರ್ಧೆಯಲ್ಲಿ ಸೆಮಿ ಫೈನಲ್‌ಗೆ ತಲುಪುವಲ್ಲಿ ವಿಫಲರಾಗಿದ್ದಾರೆ. ಈ ಮೂಲಕ ಗೇಮ್ಸ್‌ನಿಂದ ಬೇಗನೆ ನಿರ್ಗಮಿಸಿದರು.

25ರ ಹರೆಯದ ಗುರಿಂದರ್‌ವೀರ್ ಹೀಟ್-4ರಲ್ಲಿ 10.39 ಸೆಕೆಂಡ್‌ನಲ್ಲಿಗುರಿ ತಲುಪಿ ಎರಡನೇ ಸ್ಥಾನ ಪಡೆದರು. ಜಮೈಕಾದ ರೋಶನ್ ವಾಟ್ಸನ್ (10.13 ಸೆಕೆಂಡ್)ಮೊದಲ ಸ್ಥಾನ ಪಡೆದರು.

ಆದರೆ ಗುರಿಂದರ್‌ಸಿಂಗ್ ಗುರಿ ತಲುಪಿದ ಸಮಯವು ಸೆಮಿ ಫೈನಲ್‌ಗೆ ತಲುಪಲು ಸಾಕಾಗಲಿಲ್ಲ. ಗುರಿಂದರ್ ಒಟ್ಟು 28ನೇ ಸ್ಥಾನ ಪಡೆದರು. 11 ಹೀಟ್ಸ್‌ನ ಅಗ್ರ-17 ಆಟಗಾರರು ಸೆಮಿ ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ.

ಗುರಿಂದರ್ ಸಿಂಗ್ ತನ್ನ ರಾಷ್ಟ್ರೀಯ ದಾಖಲೆ(10.09 ಸೆಕೆಂಡ್)ಗಿಂತಲೂ ನೀರಸ ಪ್ರದರ್ಶನ ನೀಡಿದರು. ಮೇನಲ್ಲಿ ರಾಂಚಿಯಲ್ಲಿ ನಡೆದಿದ್ದ ಫೆಡರೇಶನ್ ಕಪ್‌ನಲ್ಲಿ 10.09 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದರು.

ಆರೋಗ್ಯ ಸಂಬಂಧಿತ ಕಾರಣದಿಂದಾಗಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ 2022ರ ಆವೃತ್ತಿಯ ಗೇಮ್ಸ್‌ನಿಂದ ಹೊರಗುಳಿದಿದ್ದ ಗುರಿಂದರ್‌ವೀರ್ ಅವರು ಇದೇ ಮೊದಲ ಬಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಾಣಿಸಿಕೊಂಡರು.

ಹೀಟ್-4ರ ಐದನೇ ಲೇನ್‌ನಲ್ಲಿ ಸ್ಪರ್ಧಿಸಿರುವ ಪಂಜಾಬ್ ಓಟಗಾರ ಗುರಿಂದರ್ ಸಿಂಗ್ ಭರವಸೆಯ ಆರಂಭ ಪಡೆದರು. ಆರಂಭಿಕ ಹಂತದಲ್ಲಿ ಜಮೈಕಾದ ರೋಶನ್ ವಾಟ್ಸನ್‌ಗೆ ತೀವ್ರಸ್ಪರ್ಧೆಯೊಡ್ಡಿದರು. ಆದರೆ ಕೊನೆಯ 30-35 ಮೀಟರ್‌ಗಳಲ್ಲಿ ವಾಟ್ಸನ್ ಅವರು ಸಿಂಗ್‌ರನ್ನು ಹಿಂದಿಕ್ಕಿದರು. 10.13 ಸೆಕೆಂಡ್‌ನಲ್ಲಿ ಗುರಿ ತಲುಪಿ ಹೀಟ್ಸ್ ಗೆದ್ದರು.

ನಾಲ್ಕನೇ ಹೀಟ್‌ನಲ್ಲಿ ಗುರಿಂದರ್ 2ನೇ ಸ್ಥಾನ ಪಡೆದಿದ್ದರೂ ಸೆಮಿ ಫೈನಲ್‌ನಲ್ಲಿ ಸ್ಥಾನ ಪಡೆಯಲು ಇದು ಸಾಕಾಗಲಿಲ್ಲ. ಒಟ್ಟಾರೆ 9ನೇ ಸ್ಥಾನ ಪಡೆದ ವಾಟ್ಸನ್ ಸೆಮಿ ಫೈನಲ್‌ಗೆ ತಲುಪಿದರು.

ಘಾನಾದ ಬೆಂಜಮಿನ್ ಅಝಮತಿ ಹಾಗೂ ಅಬ್ದುಲ್ ರಶೀದ್ ಅವರು ಕ್ರಮವಾಗಿ 10.00 ಸೆಕೆಂಡ್ ಹಾಗೂ 10.01 ಸೆಕೆಂಡ್‌ನಲ್ಲಿ ಗುರಿ ತಲುಪಿ ವೇಗವಾಗಿ ಅರ್ಹತೆ ಪಡೆದ ಅತ್ಲೀಟ್‌ಗಳಾಗಿ ಹೊರಹೊಮ್ಮಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News