ವೇಟ್‌ಲಿಫ್ಟಿಂಗ್: ಜ್ಞಾನೇಶ್ವರಿ ಯಾದವ್‌ಗೆ ಬೆಳ್ಳಿ

Update: 2026-07-27 21:34 IST

 ಜ್ಞಾನೇಶ್ವರಿ ಯಾದವ್ | Photo Credit : ddindia.co.in

ಗ್ಲಾಸ್ಗೊ, ಜು.27: ಭಾರತದ ಜ್ಞಾನೇಶ್ವರಿ ಯಾದವ್ ಗ್ಲಾಸ್ಗೊದಲ್ಲಿ ಸೋಮವಾರ ನಡೆದ 2026ರ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ 53 ಕೆಜಿ ವೇಟ್‌ಲಿಫ್ಟಿಂಗ್ ಫೈನಲ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಈ ಮೂಲಕ ಭಾರತದ ಒಟ್ಟು ಪದಕಗಳ ಸಂಖ್ಯೆ ಐದಕ್ಕೇರಿದೆ.

ಭಾರತವು ಪ್ರಸಕ್ತ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ನಾಲ್ಕನೇ ಪದಕ ಜಯಿಸಿದೆ. ಈ ಮೊದಲು ಮೀರಾಬಾಯಿ ಚಾನು(ಮಹಿಳೆಯರ 48 ಕೆಜಿ-ಚಿನ್ನ), ರಿಶಿಕಾಂತ ಸಿಂಗ್(ಪುರುಷರ 60 ಕೆಜಿ-ಬೆಳ್ಳಿ) ಹಾಗೂ ಎಂ.ರಾಜ(ಪುರುಷರ 65 ಕೆಜಿ-ಬೆಳ್ಳಿ)ತಮ್ಮ ತೂಕ ವಿಭಾಗಗಳಲ್ಲಿ ಪದಕಗಳನ್ನು ಗೆದ್ದುಕೊಂಡರು.

ಇದೇ ಮೊದಲ ಬಾರಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ಜ್ಞಾನೇಶ್ವರಿ ಒಟ್ಟು 199 ಕೆಜಿ ತೂಕ ಎತ್ತಿ ಹಿಡಿದು ಎರಡನೇ ಸ್ಥಾನ ಪಡೆದರು. ನೈಜೀರಿಯದ ಒನೋಮ್ ಒಮೊಲೊಲಾ 206 ಕೆಜಿ ಎತ್ತಿ ಹಿಡಿದು ಚಿನ್ನದ ಪದಕ ಜಯಿಸಿದರು. ಕೆನಡಾದ ಗ್ರೊಲಕ್ಸ್ ಮೂರನೇ ಸ್ಥಾನ ಪಡೆದರು.

ಜ್ಞಾನೇಶ್ವರಿ ಅವರು ಸ್ನ್ಯಾಚ್ ಹಾಗೂ ಕ್ಲೀನ್ ಆ್ಯಂಡ್ ಜೆರ್ಕ್ ವಿಭಾಗಗಳಲ್ಲಿ ಒಂದೂ ಪ್ರಯತ್ನದಲ್ಲಿ ವಿಫಲವಾಗದೆ ಪರಿಪೂರ್ಣ ಪ್ರದರ್ಶನ ನೀಡಿದರು.

22ರ ಹರೆಯದ ಜ್ಞಾನೇಶ್ವರಿ ಅವರು ಸ್ನ್ಯಾಚ್‌ನಲ್ಲಿ 88 ಕೆಜಿ ಹಾಗೂ ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 111 ಕೆಜಿ ಎತ್ತಿ ಹಿಡಿದು ಶ್ರೇಷ್ಠ ನಿರ್ವಹಣೆ ತೋರಿದರು.

ಭಾರತ ಪ್ರಸಕ್ತ ಗೇಮ್ಸ್‌ನಲ್ಲಿ ಈ ತನಕ ಗೆದ್ದಿರುವ ಎಲ್ಲ ಪದಕಗಳು ವೇಟ್‌ಲಿಫ್ಟಿಂಗ್ ಹಾಗೂ ಪ್ಯಾರಾ-ಪವರ್‌ಲಿಫ್ಟಿಂಗ್‌ನಲ್ಲಿ ಬಂದಿದೆ.

ಜ್ಞಾನೇಶ್ವರಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಒಟ್ಟು ಪದಕಗಳ ಸಂಖ್ಯೆ ಐದಕ್ಕೇರಿದೆ. ಭಾರತವು ಪದಕ ಪಟ್ಟಿಯಲ್ಲಿ ಎಂಟನೇ ಸ್ಥಾನ ಕಾಯ್ದುಕೊಂಡಿದೆ.

ಮಹಿಳೆಯರ 58 ಕೆಜಿ ವಿಭಾಗದಲ್ಲಿ ಫೈನಲ್‌ಗೆ ತಲುಪಿರುವ ಬಿಂದ್ಯಾರಾಣಿ ದೇವಿ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News