ಫ್ರಾನ್ಸ್ ಫುಟ್ಬಾಲ್ ತಂಡದ ನೂತನ ಕೋಚ್ ಆಗಿ ಝೈನುದ್ದೀನ್ ಝೈದಾನ್ ನೇಮಕ
ಝೈನುದ್ದೀನ್ ಝೈದಾನ್ | Photo Credit : NDTV
ಪ್ಯಾರಿಸ್, ಜು.28: ಇತ್ತೀಚೆಗೆ ಫಿಫಾ ವಿಶ್ವಕಪ್ ಟೂರ್ನಿಯ ನಂತರ ನಿವೃತ್ತಿಯಾಗಿರುವ ಡಿಡಿಯರ್ ಡೆಸ್ಚಾಂಪ್ಸ್ ಅವರಿಂದ ತೆರವಾದ ಫ್ರಾನ್ಸ್ ಫುಟ್ಬಾಲ್ ತಂಡದ ಮುಖ್ಯ ಕೋಚ್ ಹುದ್ದೆಗೆ ಝೈನುದ್ದೀನ್ ಝೈದಾನ್‌ರನ್ನು ನೇಮಕ ಮಾಡಲಾಗಿದೆ.
ಫ್ರೆಂಚ್ ಫುಟ್ಬಾಲ್ ಫೆಡರೇಶನ್(ಎಫ್‌ಎಫ್‌ಎಫ್)ಫ್ರಾನ್ಸ್ ಫುಟ್ಬಾಲ್ ದಂತಕತೆ ಝೈದಾನ್ ನೇಮಕವನ್ನು ಮಂಗಳವಾರ ದೃಢಪಡಿಸಿದೆ.
ರಿಯಲ್ ಮ್ಯಾಡ್ರಿಡ್‌ನ ಮಾಜಿ ಕೋಚ್ ಝೈದಾನ್ ಅವರೊಂದಿಗೆ ನಾಲ್ಕು ವರ್ಷಗಳ ಅವಧಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಪ್ಯಾರಿಸ್‌ನಲ್ಲಿರುವ ಫೆಡರೇಶನ್‌ನ ಪ್ರಧಾನ ಕಚೇರಿಗೆ ಝೈದಾನ್ ಆಗಮನವನ್ನು ಎಫ್‌ಎಫ್‌ಎಫ್ ಅಧ್ಯಕ್ಷ ಫಿಲಿಪ್ ಡಿಯಲ್ಲೋ ಘೋಷಿಸಿದರು. ಈ ನೇಮಕವು ಫ್ರೆಂಚ್ ಫುಟ್ಬಾಲ್‌ಗೆ ಒಂದು ಹೆಗ್ಗುರುತಿನ ಕ್ಷಣ ಎಂದು ಬಣ್ಣಿಸಿದರು.
‘‘ಇದೊಂದು ಅಸಾಧಾರಣ ಕ್ಷಣ. ಝೈದಾನ್ ಫ್ರೆಂಚ್ ಫುಟ್ಬಾಲ್‌ನ ದಂತಕತೆಗಳ ಪೈಕಿ ಒಬ್ಬರು’’ ಎಂದು ಡಿಯಲ್ಲೋ ಹೇಳಿದ್ದಾರೆ.
2021ರಲ್ಲಿ ರಿಯಲ್ ಮ್ಯಾಡ್ರಿಡ್ ತೊರೆದ ನಂತರ 54ರ ವಯಸ್ಸಿನ ಝೈದಾನ್ ಯಾವುದೇ ತಂಡಕ್ಕೆ ತರಬೇತಿ ನೀಡಿರಲಿಲ್ಲ. ಒಂದ ಅವಕಾಶದ ನಿರೀಕ್ಷೆಯಲ್ಲಿ ಕ್ಲಬ್ ಫುಟ್ಬಾಲ್‌ನಿಂದ ದೂರ ಉಳಿದಿದ್ದೇನೆ ಎಂದು ಅವರು ಒಪ್ಪಿಕೊಂಡಿದ್ದಾರೆ.
‘‘ಕೋಚ್ ಆಗಿ ನೇಮಕಗೊಂಡಿದ್ದಕ್ಕೆ ತುಂಬಾ ಸಂತೋಷವಾಗಿದೆ. ಫ್ರಾನ್ಸ್ ತಂಡವು ಕನಸು ಕಾಣುವಂತೆ ಮಾಡುತ್ತದೆ. ನಮ್ಮಲ್ಲಿ ಅಸಾಧಾರಣ ಆಟಗಾರರಿದ್ದಾರೆ. ಅಸಾಧಾರಣ ತಂಡವಿದೆ. ನಾನು ಈ ಅವಕಾಶಕ್ಕಾಗಿ ಐದು ವರ್ಷಗಳ ಕಾಲ ಕಾಯುತ್ತಿದ್ದೆ. ಹೀಗಾಗಿ ನಾನು ಸ್ವಲ್ಪ ಭಾವುಕನಾಗಿದ್ದೇನೆ. ನನ್ನ ಕೋಚಿಂಗ್ ವೃತ್ತಿಜೀವನದ ಅತ್ಯಂತ ಸಂತೋಷದಾಯಕ ದಿನ ಇದಾಗಿದೆ’’ ಎಂದು ಝೈದಾನ್ ಹೇಳಿದ್ದಾರೆ.
ಝೈದಾನ್ ಸೆಪ್ಟಂಬರ್ 25ರಂದು ತುರ್ಕಿಯಾದಲ್ಲಿ ಯುಇಎಫ್‌ಎ ನೇಶನ್ಸ್ ಲೀಗ್‌ನಲ್ಲಿ ಮೊದಲ ಬಾರಿ ಫ್ರಾನ್ಸ್ ಕೋಚ್‌ಆಗಿ ಕಾರ್ಯನಿರ್ವಹಿಸಲಿದ್ದಾರೆ. 14 ವರ್ಷಗಳ ಕಾಲ ಫ್ರಾನ್ಸ್ ಕೋಚ್ ಆಗಿದ್ದ ಡೆಸ್ಚಾಂಪ್ಸ್ ಅವರಿಂದ ತೆರವಾದ ಸ್ಥಾನ ತುಂಬಲಿದ್ದಾರೆ.
ಡೆಸ್ಚಾಂಪ್ಸ್ ಅವರು ಆಟಗಾರ ಹಾಗೂ ಕೋಚ್ ಆಗಿ ಫಿಫಾ ವಿಶ್ವಕಪ್ ಗೆದ್ದಿರುವ ಕೇವಲ ಮೂವರು ಅಟಗಾರರ ಪೈಕಿ ಒಬ್ಬರಾಗಿದ್ದಾರೆ. ಈ ಬಾರಿಯ ವಿಶ್ವಕಪ್‌ನಲ್ಲಿ ಫ್ರಾನ್ಸ್ ತಂಡವು 4ನೇ ಸ್ಥಾನ ಪಡೆದಿತ್ತು.
ಝೈದಾನ್ 1998ರಲ್ಲಿ ವಿಶ್ವಕಪ್ ಟ್ರೋಫಿ ಹಾಗೂ 2000ರಲ್ಲಿ ಯುರೋ ಕಪ್ ಗೆದ್ದಿರುವ ಫ್ರಾನ್ಸ್ ತಂಡದ ಸದಸ್ಯರಾಗಿದ್ದರು. 1998ರಲ್ಲಿ ಬ್ಯಾಲನ್ ಡಿ’ಒರ್ ಪ್ರಶಸ್ತಿಗೆ ಭಾಜನರಾಗಿದ್ದರು.