×
Ad

Australian Open: ದ್ವಿತೀಯ ಸುತ್ತಿಗೆ ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್

Update: 2026-01-20 21:48 IST

ಜನ್ನಿಕ್ ಸಿನ್ನರ್ | Photo Credit : AP \ PTI  

ಮೆಲ್ಬರ್ನ್, ಜ.20: ಫ್ರಾನ್ಸ್ ಆಟಗಾರ ಹ್ಯೂಗೊ ಗಾಸ್ಟನ್ ಮೊದಲೆರಡು ಸೆಟ್‌ಗಳನ್ನು 2–6, 1–6 ಅಂತರದಿಂದ ಸೋತ ನಂತರ ಗಾಯಗೊಂಡು ನಿವೃತ್ತಿಯಾದ ಕಾರಣ, ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಮಂಗಳವಾರ ದ್ವಿತೀಯ ಸುತ್ತಿಗೆ ತಲುಪಿದ್ದಾರೆ.

ಎಟಿಪಿ ಫೈನಲ್ಸ್ ಟೂರ್ನಿಯಲ್ಲಿ ಕಾರ್ಲೊಸ್ ಅಲ್ಕರಾಝ್‌ರನ್ನು ಮಣಿಸಿದ ನಂತರ ಸಿನ್ನರ್ ಆಡಿರುವ ಮೊದಲ ಅಧಿಕೃತ ಪಂದ್ಯ ಇದಾಗಿದೆ. ಇಟಲಿಯ ವಿಶ್ವ ನಂ.1 ಆಟಗಾರ ಸಿನ್ನರ್ ಅವರು ಆಸ್ಟ್ರೇಲಿಯನ್ ಓಪನ್‌ನಲ್ಲಿ ಕಳೆದೆರಡು ವರ್ಷಗಳಿಂದ ಭರ್ಜರಿ ಫಾರ್ಮ್‌ನಲ್ಲಿದ್ದಾರೆ.

ಎರಡನೇ ಸೆಟ್ ಸೋತ ನಂತರ ಗಾಸ್ಟನ್ ಅವರು ನೋವಿನಿಂದ ಪಂದ್ಯವನ್ನು ಮುಂದುವರಿಸಲಾಗದೆ ಕಣ್ಣೀರಿಟ್ಟರು.

ಆಸ್ಟ್ರೇಲಿಯನ್ ಓಪನ್‌ನಲ್ಲಿ ಸತತ ಮೂರನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸಿನ್ನರ್, ಮುಂದಿನ ಸುತ್ತಿನಲ್ಲಿ ಜೇಮ್ಸ್ ಡಕ್‌ವರ್ತ್ ಅಥವಾ ಡಿನೊ ಪ್ರೈಝ್ಮಿಕ್ ಅವರನ್ನು ಎದುರಿಸಲಿದ್ದಾರೆ.

*ಅಮೆರಿಕದ ನಂ.1 ಆಟಗಾರ ಶೆಲ್ಟನ್‌ಗೆ ಜಯ: ಎಂಟನೇ ಶ್ರೇಯಾಂಕದ ಬೆನ್ ಶೆಲ್ಟನ್ ಫ್ರಾನ್ಸ್ ಆಟಗಾರ ಯುಗೊ ಹಂಬರ್ಟ್‌ರನ್ನು 6–3, 7–6(2), 7–6(5) ಸೆಟ್‌ಗಳ ಅಂತರದಿಂದ ಮಣಿಸಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಮಂಗಳವಾರ ದ್ವಿತೀಯ ಸುತ್ತು ತಲುಪಿದ್ದಾರೆ.

ಕಳೆದ ವರ್ಷ ಸೆಮಿಫೈನಲ್‌ನಲ್ಲಿ ಸಿನ್ನರ್‌ಗೆ ಸೋತಿದ್ದ ಅಮೆರಿಕದ ನಂ.1 ಆಟಗಾರ ಶೆಲ್ಟನ್ ಅವರು ಮೊದಲ ಸೆಟ್ಟನ್ನು 6–3 ಅಂತರದಿಂದ ಗೆದ್ದುಕೊಂಡರು. ಆದರೆ ಹಂಬರ್ಟ್ ಉಳಿದ ಎರಡು ಸೆಟ್‌ಗಳಲ್ಲಿ ಮರು ಹೋರಾಟ ನೀಡಿ ಪಂದ್ಯವನ್ನು ಟೈಬ್ರೇಕರ್‌ಗೆ ಕೊಂಡೊಯ್ದರು.

*ಸ್ಥಳೀಯ ಆಟಗಾರ ಡೆನ್ ಸ್ವೀನಿಗೆ ಸೋತ ಗೇಲ್ ಮೊನ್ಫಿಲ್ಸ್:

ಫ್ರಾನ್ಸ್‌ನ ಹಿರಿಯ ಆಟಗಾರ ಗೇಲ್ ಮೊನ್ಫಿಲ್ಸ್ ತಮ್ಮ 20ನೇ ಹಾಗೂ ಕೊನೆಯ ಆಸ್ಟ್ರೇಲಿಯನ್ ಓಪನ್ ಟೂರ್ನಿಯಿಂದ ನೋವು ಹಾಗೂ ವಿಷಾದದೊಂದಿಗೆ ನಿರ್ಗಮಿಸಿದ್ದಾರೆ.

ಮೊದಲ ಸುತ್ತಿನ ಪಂದ್ಯದಲ್ಲಿ ಗಾಯದ ಸಮಸ್ಯೆಗೆ ಒಳಗಾದ 39 ವರ್ಷದ ಮೊನ್ಫಿಲ್ಸ್ ಸ್ಥಳೀಯ ಕ್ವಾಲಿಫೈಯರ್ ಡೆನ್ ಸ್ವೀನಿ ವಿರುದ್ಧ 7–6(3), 5–7, 4–6, 5–7 ಅಂತರದಿಂದ ಸೋತಿದ್ದಾರೆ.

‘‘ನನ್ನ ಪ್ರಯಾಣವು 2003ರಲ್ಲಿ ನಿಮ್ಮೊಂದಿಗೆ ಆರಂಭವಾಯಿತು. ಈಗ ನಾವು 2026ರಲ್ಲಿ ಇದ್ದೇವೆ. ಇಂದು ಕೊನೆಯ ಬಾರಿ ಆಡಿದ್ದೇನೆ. ಈ ಅದ್ಭುತ ಪ್ರಯಾಣಕ್ಕೆ ತುಂಬಾ ಧನ್ಯವಾದಗಳು’’ ಎಂದು ತಮ್ಮನ್ನು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಮೊನ್ಫಿಲ್ಸ್ ತಿಳಿಸಿದರು.

Australian Open: ಮೊದಲ ಸುತ್ತಿನಲ್ಲಿ ಎಡವಿದ ಪೂಣಚ್ಚ–ಇಸಾರೊ ಜೋಡಿ(w)

ಮೆಲ್ಬರ್ನ್, ಜ.20: ಮೊದಲ ಸುತ್ತಿನ ಪುರುಷರ ಡಬಲ್ಸ್ ಪಂದ್ಯದಲ್ಲಿ ಪೆಡ್ರೊ ಮಾರ್ಟಿನೆಝ್ ಹಾಗೂ ಜೌಮ್ ಮುನಾರ್ ವಿರುದ್ಧ ವೀರೋಚಿತ ಸೋಲುಂಡಿರುವ ಭಾರತದ ನಿಕಿ ಪೂಣಚ್ಚ ಹಾಗೂ ಥಾಯ್ಲೆಂಡ್‌ನ ಪ್ರುಚ್ಯ ಇಸಾರೊ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಮಂಗಳವಾರ ಒಂದು ಗಂಟೆ 51 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಇಂಡೋ–ಥಾಯ್ಲೆಂಡ್ ಜೋಡಿ ವೈಲ್ಡ್‌ಕಾರ್ಡ್ ಪಡೆದಿರುವ ಸ್ಪೇನ್ ಜೋಡಿಯ ಎದುರು 6–7(3), 5–7 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

ಎರಡೂ ಜೋಡಿಗಳು ತೀವ್ರ ಹೋರಾಟ ನೀಡಿದ್ದವು. ಆದರೆ ಪೂಣಚ್ಚ ಹಾಗೂ ಇಸಾರೊ ಮೂರು ಬ್ರೇಕ್‌ಚಾನ್ಸ್‌ಗಳ ಪೈಕಿ ಕೇವಲ ಒಂದನ್ನು ಸದುಪಯೋಗಪಡಿಸಿಕೊಂಡರು. ಪಂದ್ಯದಲ್ಲಿ ಎರಡು ಬಾರಿ ಸರ್ವ್ ಕೈಬಿಟ್ಟರು.

ಡಬಲ್ಸ್ ಪಂದ್ಯದಲ್ಲಿ ಭಾರತದ ಸವಾಲು ಇನ್ನೂ ಅಂತ್ಯವಾಗಿಲ್ಲ. ಯೂಕಿ ಭಾಂಬ್ರಿ ಅವರು ಸ್ವೀಡನ್‌ನ ಆಂಡ್ರೆ ಗೊರಾನ್ಸನ್ ಅವರೊಂದಿಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಅಮೆರಿಕದ ಆಟಗಾರರಾದ ಜೇಮ್ಸ್ ಡಕ್‌ವರ್ತ್ ಹಾಗೂ ಕ್ರೂಝ್ ಹೆವಿಟ್ ಅವರನ್ನು ಎದುರಿಸುವ ಮೂಲಕ ಭಾಂಬ್ರಿ ಜೋಡಿ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಒಲಿಂಪಿಕ್ಸ್ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ನಿವೃತ್ತಿ(w/f)

ಹೊಸದಿಲ್ಲಿ, ಜ.20: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಹಾಗೂ ಮಾಜಿ ವಿಶ್ವ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ಅವರು ಸ್ಪರ್ಧಾತ್ಮಕ ಆಟಗಳಿಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಸುಮಾರು ಎರಡು ದಶಕಗಳ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.

‘‘ನಾನು ಎರಡು ವರ್ಷಗಳಿಂದ ಬ್ಯಾಡ್ಮಿಂಟನ್ ಆಡುತ್ತಿಲ್ಲ. ನನ್ನ ದೇಹವು ಆಟಕ್ಕೆ ಸ್ಪಂದಿಸುತ್ತಿಲ್ಲ. ನಾನು ನನ್ನದೇ ಉದ್ದೇಶಗಳಿಂದ ಆಟವಾಡಲು ಆರಂಭಿಸಿದೆ ಹಾಗೂ ನನ್ನದೇ ಉದ್ದೇಶಗಳಿಂದ ಬ್ಯಾಡ್ಮಿಂಟನ್ ಅಂಗಳದಿಂದ ಹಿಂದೆ ಸರಿದಿದ್ದೇನೆ’’ ಎಂದು ಸೈನಾ ನೆಹ್ವಾಲ್ ಅವರು ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.

ದೀರ್ಘಕಾಲದಿಂದ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದ ನೆಹ್ವಾಲ್, ಕಳೆದ ಎರಡು ವರ್ಷಗಳಿಂದ ಬ್ಯಾಡ್ಮಿಂಟನ್ ಅಂಗಳದಿಂದ ದೂರ ಉಳಿದಿದ್ದರು. ಕೊನೆಯ ಬಾರಿ 2023ರ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಡಿದ್ದರು.

ಸೈನಾ ಅವರು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದು, ಇದು ಅವರ ವೃತ್ತಿಬದುಕಿನ ಮೇಲೆ ಗಾಢ ಪರಿಣಾಮ ಬೀರಿತು. ಗಾಯದಿಂದ ಮರಳಿದ ನಂತರ 2017ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಹಾಗೂ 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಆಡಲು ಸಾಧ್ಯವಾಗದಿರುವುದರಿಂದ ನಿವೃತ್ತಿ ನಿರ್ಧಾರಕ್ಕೆ ಬಂದಿದ್ದಾರೆ.

*ಸೈನಾ ಸಾಧನೆಗಳು

ಬಿಡಬ್ಲ್ಯುಎಫ್‌ನ ಎಲ್ಲ ಪ್ರಮುಖ ಟೂರ್ನಿಗಳಲ್ಲಿ ಪದಕ ಗೆದ್ದ ಏಕೈಕ ಭಾರತೀಯ ಆಟಗಾರ್ತಿ

ಬ್ಯಾಡ್ಮಿಂಟನ್‌ನಲ್ಲಿ ಒಲಿಂಪಿಕ್ಸ್ ಪದಕ ಗೆದ್ದ ಭಾರತದ ಮೊದಲ ಆಟಗಾರ್ತಿ

ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ಗೆ ತಲುಪಿದ ಭಾರತದ ಮೊದಲ ಆಟಗಾರ್ತಿ

ವಿಶ್ವ ಜೂನಿಯರ್ ಚಾಂಪಿಯನ್ ಪಟ್ಟಕ್ಕೇರಿದ ಮೊದಲ ಭಾರತೀಯ ಆಟಗಾರ್ತಿ

2006ರಲ್ಲಿ 4 ಸ್ಟಾರ್ ಪ್ರಶಸ್ತಿ ಗೆದ್ದ ಏಶ್ಯದ ಕಿರಿಯ ಆಟಗಾರ್ತಿ

ಬಿಡಬ್ಲ್ಯುಎಫ್ ಸೂಪರ್ ಸಿರೀಸ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಮೊದಲ ಭಾರತೀಯ ಆಟಗಾರ್ತಿ

2010 ಹಾಗೂ 2018ರ ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಚಿನ್ನದ ಪದಕ

2018ರ ಏಶ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಸಿಂಗಲ್ಸ್ ಕಂಚಿನ ಪದಕ

ಬಿಡಬ್ಲ್ಯುಎಫ್ ವರ್ಲ್ಡ್ ಚಾಂಪಿಯನ್‌ಶಿಪ್: 2015ರಲ್ಲಿ ಬೆಳ್ಳಿ, 2017ರಲ್ಲಿ ಕಂಚು

ಬಿಡಬ್ಲ್ಯುಎಫ್ ವರ್ಲ್ಡ್ ಜೂನಿಯರ್ ಚಾಂಪಿಯನ್‌ಶಿಪ್: 2006ರಲ್ಲಿ ಬೆಳ್ಳಿ, 2008ರಲ್ಲಿ ಚಿನ್ನ

*ಪ್ರಮುಖ ಪ್ರಶಸ್ತಿಗಳು

2008: ಬಿಡಬ್ಲ್ಯುಎಫ್ ವರ್ಷದ ಅತ್ಯಂತ ಭರವಸೆಯ ಆಟಗಾರ್ತಿ

2009: ಅರ್ಜುನ ಪ್ರಶಸ್ತಿ, ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ

2010: ಪದ್ಮ ಶ್ರೀ

2016: ಪದ್ಮ ಭೂಷಣ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News