ಆಸ್ಟ್ರೇಲಿಯದ ವಿಶ್ವಕಪ್ ವಿಜೇತ ಮಾಜಿ ಕ್ರಿಕೆಟಿಗ ಮಾರ್ಟಿನ್ ಆರೋಗ್ಯ ಸ್ಥಿತಿ ಗಂಭೀರ
ಡೇಮಿಯನ್ ಮಾರ್ಟಿನ್ |Photo Credit : NDTV
ಮೆಲ್ಬರ್ನ್, ಡಿ.31: ಆಸ್ಟ್ರೇಲಿಯದ ಪರ 67 ಟೆಸ್ಟ್ ಪಂದ್ಯಗಳನ್ನು ಆಡಿರುವ ಮಾಜಿ ಕ್ರಿಕೆಟಿಗ ಡೇಮಿಯನ್ ಮಾರ್ಟಿನ್ ಅವರು ಬ್ರಿಸ್ಬೇನ್ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಆಸ್ಟ್ರೇಲಿಯನ್ ಮಾಧ್ಯಮಗಳು ಬುಧವಾರ ವರದಿ ಮಾಡಿವೆ.
54 ವರ್ಷದ ಮಾಜಿ ಬಲಗೈ ಬ್ಯಾಟರ್ ಇತ್ತೀಚೆಗೆ ನಿದ್ರೆಯಲ್ಲಿದ್ದಾಗ ಅಸ್ವಸ್ಥರಾದ ಬಳಿಕ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದು, ಸದ್ಯ ಅವರು ಕೋಮಾದಲ್ಲಿದ್ದಾರೆ. ಮೆದುಳು ಹಾಗೂ ಬೆನ್ನುಹುರಿಯ ಸುತ್ತಲಿನ ಉರಿಯೂತದಿಂದ ಅವರು ಬಳಲುತ್ತಿದ್ದಾರೆ.
ಮಾರ್ಟಿನ್ ಅವರು 1992 ರಿಂದ 2006ರ ನಡುವೆ ಆಸ್ಟ್ರೇಲಿಯದ ಪರ 67 ಟೆಸ್ಟ್ ಹಾಗೂ 208 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 1999 ಮತ್ತು 2003ರ ಏಕದಿನ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದರು. 2003ರ ವಿಶ್ವಕಪ್ ಫೈನಲ್‌ನಲ್ಲಿ ಬೆರಳು ಮುರಿತಕ್ಕೊಳಗಾದರೂ, ಭಾರತದ ವಿರುದ್ಧ ಔಟಾಗದೆ 88 ರನ್ ಗಳಿಸಿ ಗೆಲುವಿಗೆ ನೆರವಾಗಿದ್ದರು. 2006ರ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದ ಭಾಗವಾಗಿದ್ದರು.