×
Ad

ಆಯುಷ್ ಬದೋನಿ ದ್ವಿಶತಕ | ದುಲೀಪ್ ಟ್ರೋಫಿಯಲ್ಲಿ ಉತ್ತರ ವಲಯ ಸೆಮಿ ಫೈನಲ್‌ ಗೆ

Update: 2025-08-31 20:52 IST

ಆಯುಷ್ ಬದೋನಿ | PC : PTI  

ಬೆಂಗಳೂರು, ಆ.31: ಪೂರ್ವ ವಲಯದ ವಿರುದ್ಧ ರವಿವಾರ ಕೊನೆಗೊಂಡಿರುವ ದುಲೀಪ್ ಟ್ರೋಫಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದ್ದು, ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಉತ್ತರ ವಲಯ ತಂಡವು ಸೆಮಿ ಫೈನಲ್‌ ಗೆ ತೇರ್ಗಡೆಯಾಗಿದೆ. ಉತ್ತರ ವಲಯದ ಆಯುಷ್ ಬದೋನಿ ದ್ವಿಶತಕ(ಔಟಾಗದೆ 204, 223 ಎಸೆತ, 13 ಬೌಂಡರಿ, 3 ಸಿಕ್ಸರ್)ಸಿಡಿಸಿ ಮಿಂಚಿದ್ದಾರೆ.

ಉತ್ತರ ವಲಯ ತಂಡ ಬೆಂಗಳೂರಿನ ಬಿಸಿಸಿಐ ಮೈದಾನದಲ್ಲಿ ಸೆ.4ರಿಂದ ಆರಂಭವಾಗಲಿರುವ ಮೊದಲ ಸೆಮಿ ಫೈನಲ್‌ ನಲ್ಲಿ ದಕ್ಷಿಣ ವಲಯದ ಸವಾಲನ್ನು ಎದುರಿಸಲಿದೆ.

ಉಭಯ ತಂಡಗಳು ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸಲು ಒಪ್ಪಿಕೊಳ್ಳುವ ಮೊದಲು ಉತ್ತರ ವಲಯ ತಂಡವು ತನ್ನ 2ನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ ಗಳ ನಷ್ಟಕ್ಕೆ 658 ರನ್ ಗಳಿಸಿ 833 ರನ್‌ಗಳ ಬೃಹತ್ ಮುನ್ನಡೆ ಪಡೆದಿದೆ.

ನಾಲ್ಕನೇ ದಿನದಾಟವಾದ ರವಿವಾರ 2 ವಿಕೆಟ್‌ಗಳ ನಷ್ಟಕ್ಕೆ 388 ರನ್‌ನಿಂದ ತನ್ನ ಬ್ಯಾಟಿಂಗ್ ಮುಂದುವರಿಸಿದ ಉತ್ತರ ವಲಯ ತಂಡವು ಬ್ಯಾಟಿಂಗ್‌ ನಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿತು. 56 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಬದೋನಿ 123 ಎಸೆತಗಳಲ್ಲಿ ಶತಕವನ್ನು ಪೂರೈಸಿದರು.

168 ರನ್‌ನಿಂದ ಬ್ಯಾಟಿಂಗ್ ಆರಂಭಿಸಿದ ನಾಯಕ ಅಂಕಿತ್ ಕುಮಾರ್ 321 ಎಸೆತಗಳಲ್ಲಿ 198 ರನ್ ಗಳಿಸಿ ಮುಖ್ತರ್ ಹುಸೇನ್‌ಗೆ ವಿಕೆಟ್ ಒಪ್ಪಿಸಿ ದ್ವಿಶತಕದಿಂದ ವಂಚಿತರಾದರು. ಅಂಕಿತ್ ಹಾಗೂ ಬದೋನಿ ಮೂರನೇ ವಿಕೆಟ್‌ಗೆ 150 ರನ್ ಜೊತೆಯಾಟ ನಡೆಸಿದರು.

ಅಂಕಿತ್ ಔಟಾದ ನಂತರ ನಿಶಾಂತ್ ಸಿಂಧು(68 ರನ್, 91 ಎಸೆತ, 2 ಬೌಂಡರಿ, 5 ಸಿಕ್ಸರ್)ಅವರೊಂದಿಗೆ 157 ರನ್ ಜೊತೆಯಾಟ ನಡೆಸಿದ ಬದೋನಿ ಉತ್ತರ ವಲಯದ ಸ್ಕೋರನ್ನು 600 ರನ್ ಗಡಿ ದಾಟಿಸಿದರು.

ಬದೋನಿ 222 ಎಸೆತಗಳಲ್ಲಿ ಬೌಂಡರಿ ಬಾರಿಸುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತನ್ನ 2ನೇ ದ್ವಿಶತಕ ದಾಖಲಿಸಿದರು. ಕೊನೆಯ ಅವಧಿಯಲ್ಲಿ ಬದೋನಿ 55 ಎಸೆತಗಳಲ್ಲಿ 54 ರನ್ ಗಳಿಸಿದರು. ಕನ್ಹೆಯಾ ವಧ್ವಾನ್ ಔಟಾಗದೆ 23 ರನ್ ಗಳಿಸಿದರು.

ಮೊದಲ ಇನಿಂಗ್ಸ್‌ ನಲ್ಲಿ ಪೂರ್ವ ವಲಯದ ವಿರುದ್ಧ ಹ್ಯಾಟ್ರಿಕ್ ಸಹಿತ ಐದು ವಿಕೆಟ್ ಗೊಂಚಲು ಪಡೆದಿದ್ದ ಉತ್ತರ ವಲಯದ ಬೌಲರ್ ಆಕಿಬ್ ನಬಿ(5-28) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

*ಶಮಿ, ಮುಕೇಶ್‌ ಗೆ ಗಾಯದ ಸಮಸ್ಯೆ

ಉತ್ತರ ವಲಯದ 2ನೇ ಇನಿಂಗ್ಸ್ ವೇಳೆ 11 ಓವರ್ ಬೌಲಿಂಗ್ ಮಾಡಿದ್ದ ಪೂರ್ವ ವಲಯದ ಬೌಲರ್ ಮುಹಮ್ಮದ್ ಶಮಿ ಆನಂತರ ಮೈದಾನದಿಂದ ಹೊರಗುಳಿದರು. 3ನೇ ದಿನದಾಟದ ಕೊನೆಯ ಅವಧಿಯಲ್ಲೂ ಶಮಿ ಬೌಲಿಂಗ್ ಮಾಡಿರಲಿಲ್ಲ.

ಮೊದಲ ಇನಿಂಗ್ಸ್‌ ನಲ್ಲಿ ತೊಡೆಸಂಧಿನ ನೋವಿಗೆ ಒಳಗಾದ ನಂತರ ಪೂರ್ವ ವಲಯದ ಇನ್ನೋರ್ವ ಬೌಲರ್ ಮುಕೇಶ್ ಕುಮಾರ್ 2ನೇ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲಿಲ್ಲ.

*ಕೇಂದ್ರ-ಈಶಾನ್ಯ ವಲಯದ ಪಂದ್ಯವೂ ಡ್ರಾ

ಕೇಂದ್ರ ವಲಯ ಹಾಗೂ ಈಶಾನ್ಯ ವಲಯದ ನಡುವೆ ನಡೆದ ದುಲೀಪ್ ಟ್ರೋಫಿ ಟೂರ್ನಿಯ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯ ಕೂಡ ಡ್ರಾನಲ್ಲಿ ಕೊನೆಗೊಂಡಿದೆ. ಮೊದಲ ಇನಿಂಗ್ಸ್ ಮುನ್ನಡೆಯ ಮೇರೆಗೆ ಕೇಂದ್ರ ವಲಯ ಸೆಮಿ ಫೈನಲ್‌ಗೆ ಪ್ರವೇಶಿಸಿದೆ.

ಸೆ.4ರಿಂದ ಬೆಂಗಳೂರಿನಲ್ಲೆ ನಡೆಯಲಿರುವ 2ನೇ ಸೆಮಿ ಫೈನಲ್‌ ನಲ್ಲಿ ಕೇಂದ್ರ ವಲಯ ತಂಡವು ಪಶ್ಚಿಮ ವಲಯ ತಂಡವನ್ನು ಎದುರಿಸಲಿದೆ.

4ನೇ ಹಾಗೂ ಅಂತಿಮ ದಿನದಾಟವಾದ ರವಿವಾರ ಕ್ವಾರ್ಟರ್ ಫೈನಲ್ ಪಂದ್ಯವನ್ನು ಗೆಲ್ಲಲು 679 ರನ್ ಗುರಿ ಬೆನ್ನಟ್ಟಿದ ಈಶಾನ್ಯ ವಲಯ ತಂಡವು ಪಂದ್ಯ ಡ್ರಾನಲ್ಲಿ ಅಂತ್ಯವಾಗುವ ಮೊದಲು 58 ಓವರ್‌ ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ ಬರೋಬ್ಬರಿ 200 ರನ್ ಗಳಿಸಿತು.

ನಾಯಕ ಜೊನಾಥನ್(60 ರನ್, 97 ಎಸೆತ)ಹಾಗೂ ವಿಕೆಟ್‌ಕೀಪರ್ ಆ್ಯಂಡರ್ಸನ್(64 ರನ್, 96 ಎಸೆತ)ಅರ್ಧಶತಕದ ಕೊಡುಗೆ ನೀಡಿದರು.

ಕೇಂದ್ರ ವಲಯದ ಪರ ಶುಭಂ ಶರ್ಮಾ(2-10), ಆದಿತ್ಯ ಥಾಕರೆ(2-21) ಹಾಗೂ ಹರ್ಷ ದುಬೆ(2-53) ತಲಾ ಎರಡು ವಿಕೆಟ್‌ಗಳನ್ನು ಉರುಳಿಸಿದರು.

ಶನಿವಾರ 3ನೇ ದಿನದಾಟದಂತ್ಯಕ್ಕೆ 7 ವಿಕೆಟ್‌ಗಳ ನಷ್ಟಕ್ಕೆ 331 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದ ಕೇಂದ್ರ ವಲಯವು ಈಶಾನ್ಯ ವಲಯದ ಗೆಲುವಿಗೆ ಕಠಿಣ ಗುರಿ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News