ಕೊಹ್ಲಿಯವರ ಅನಪೇಕ್ಷಿತ ದಾಖಲೆ ಸರಿಗಟ್ಟಿದ ಬಾಬರ್ ಅಝಂ
PC | ndtv
ರಾವಲ್ಪಿಂಡಿ: ಸತತವಾಗಿ ಅತಿಹೆಚ್ಚು ಇನಿಂಗ್ಸ್ ಗಳಲ್ಲಿ ಶತಕ ಗಳಿಸಲಾಗದೇ ಔಟ್ ಆದ ಅನಪೇಕ್ಷಿತ ದಾಖಲೆಯ ಪಟ್ಟಿಯಲ್ಲಿ ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್ ಮನ್ ಬಾಬರ್ ಅಝಂ ಅವರು ಭಾರತದ ವಿರಾಟ್ ಕೊಹ್ಲಿಯವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಮಂಗಳವಾರ ನಡೆದ ಶ್ರೀಲಂಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದ 24ನೇ ಓವರ್ ನಲ್ಲಿ ಔಟ್ ಆಗುವ ಮೂಲಕ ಅಝಂ ಸತತ 83 ಇನಿಂಗ್ಸ್ ಗಳಲ್ಲಿ ಶತಕ ಸಾಧಿಸಲಾಗದ ಕುಖ್ಯಾತಿಗೆ ಪಾತ್ರರಾದರು.
ಅಝಂ ಈ ಪಂದ್ಯದಲ್ಲಿ 51 ಎಸೆತಗಳಲ್ಲಿ ಕೇವಲ 29 ರನ್ ಬಾರಿಸಿ ನಿರಾಶೆ ಮೂಡಿಸಿದರು. ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಅವರ ನಿಬ್ಬೆರಗಾಗಿಸುವ ಎಸೆತದಲ್ಲಿ ಅಝಂ ವಿಕೆಟ್ ಒಪ್ಪಿಸಿದರು. ಆಫ್‍ಸ್ಟಂಪ್ ಆಚೆಗೆ ಲ್ಯಾಂಡ್ ಆದ ಚೆಂಡು ಯಾರೂ ನಿರೀಕ್ಷಿದಷ್ಟು ಸ್ಪಿನ್ ಆಗಿ ಬಾಬರ್ ಅವರ ರಕ್ಷಣಾ ಕೋಟೆಯನ್ನು ಭೇದಿಸಿ ಸ್ಟಂಪ್ ಚದುರಿಸಿತು.
ಶ್ರೀಲಂಕಾ ಕೋಚ್ ಸನತ್ ಜಯಸೂರ್ಯ ಕೂಡಾ ಸ್ಪಿನ್ ಮೋಡಿಗೆ ರೋಮಾಂಚನಗೊಂಡಿದ್ದ, ಅವರ ಪ್ರತಿಕ್ರಿಯೆ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಬರ್ 2023ರ ಏಷ್ಯಾಕಪ್‍ನಲ್ಲಿ ನೇಪಾಳ ವಿರುದ್ಧ ಮೂರಂಕಿಯ ಸ್ಕೋರ್ ದಾಖಲಿಸಿದ ಬಳಿಕ 83 ಇನಿಂಗ್ಸ್ ಗಳಲ್ಲಿ ಶತಕ ಸಾಧಿಸುವುದು ಸಾಧ್ಯವಾಗಿಲ್ಲ. ಏಷ್ಯಾದ ಬ್ಯಾಟ್ಸ್ ಮನ್ ಗಳ ಪೈಕಿ 88 ಇನಿಂಗ್ಸ್ ಗಳೊಂದಿಗೆ ಸನತ್ ಜಯಸೂರ್ಯ ಅಗ್ರಸ್ಥಾನದಲ್ಲಿದ್ದಾರೆ.