×
Ad

ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯಿಂದ ನಿರ್ಗಮಿಸಿದ ಬಜರಂಗ್ ಪುನಿಯಾ, ರವಿ ದಹಿಯಾ

Update: 2024-03-10 21:55 IST

ಬಜರಂಗ್ ಪುನಿಯಾ | Photo: PTI

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ ಗೇಮ್ಸ್‌ನಲ್ಲಿ ಪದಕ ವಿಜೇತರಾದ ಬಜರಂಗ್ ಪುನಿಯಾ ಹಾಗೂ ರವಿ ದಹಿಯಾ ಮುಂಬರುವ ಅಂತರ್‌ರಾಷ್ಟ್ರೀಯ ಟೂರ್ನಮೆಂಟ್‌ಗಳಿಗಾಗಿ ಹರ್ಯಾಣದ ಸೋನೆಪತ್‌ನಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ತಮ್ಮ ಕುಸ್ತಿ ವಿಭಾಗಗಳಲ್ಲಿ ಸೋಲನುಭವಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ರೇಸ್‌ನಿಂದ ನಿರ್ಗಮಿಸಿದ್ದಾರೆ.

ಡಬ್ಲ್ಯುಎಫ್‌ಐನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೊಡ್ಡ ಧ್ವನಿಎತ್ತಿರುವ ಪುನಿಯಾ ಪುರುಷರ ಫ್ರೀಸ್ಟೈಲ್ 65 ಕೆಜಿ ಸೆಮಿ ಫೈನಲ್ ಪಂದ್ಯದಲ್ಲಿ ರೋಹಿತ್ ಕುಮಾರ್ ವಿರುದ್ಧ 1-9 ಅಂತರದಿಂದ ಸೋತಿದ್ದಾರೆ. ರವೀಂದರ್ ವಿರುದ್ಧ ಕಡಿಮೆ ಅಂತರದಿಂದ ಸೋತಿದ್ದರೂ ಪ್ರಮುಖ ಟೂರ್ನಿಯಲ್ಲಿ ಪುನಿಯಾಗೆ ಅವಕಾಶ ಸಿಗುವುದು ಅನುಮಾನವಾಗಿದೆ.

ಎಲಿಮಿನೇಶನ್ ನಂತರ ಪುನಿಯಾ ಅವರು ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್)ಕೇಂದ್ರದಿಂದ ತಕ್ಷಣವೇ ಹೊರ ನಡೆದರು. ಐಒಎ ಅಡ್-ಹಾಕ್ ಸಮಿತಿ ಆಯೋಜಿಸಿದ್ದ ಟ್ರಯಲ್ಸ್‌ನಲ್ಲಿ ತಯಾರಿನಡೆಸಲು ಪುನಿಯಾ ರಶ್ಯದಲ್ಲಿ ತರಬೇತಿ ಪಡೆದಿದ್ದರು.

ಅಮಾನತುಗೊಂಡಿರುವ ಕುಸ್ತಿ ಫೆಡರೇಶನ್ ಆಫ್ ಇಂಡಿಯಾಗೆ(ಡಬ್ಲ್ಯುಎಫ್‌ಐ)ಟ್ರಯಲ್ಸ್ ನಡೆಸಲು ಅಧಿಕಾರವಿಲ್ಲ ಎಂದು ವಾದಿಸಿ ದಿಲ್ಲಿ ಹೈಕೋರ್ಟ್‌ನಲ್ಲಿ ದಾಖಲಿಸಿದ್ದ ಕೇಸ್‌ನಲ್ಲಿ ಪುನಿಯಾ ಜಯ ಸಾಧಿಸಿದ್ದರು. ಆದರೆ ಅವರು ಆಯ್ಕೆ ಪ್ರಕ್ರಿಯೆಯಲ್ಲಿ ನಿರಾಸೆ ಎದುರಿಸುವಂತಾಯಿತು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ರವಿ ದಹಿಯಾ ಪುರುಷರ 57 ಕೆಜಿ ವಿಭಾಗದಲ್ಲಿ ಉದಯೋನ್ಮುಖ ಸ್ಟಾರ್ ಅಮನ್ ಸೆಹ್ರಾವತ್ ವಿರುದ್ಧ 13-14 ಅಂತರದಿಂದ ಸೋಲನುಭವಿಸಿದ್ದಾರೆ.

ದಹಿಯಾ ಅಂಡರ್-20 ಏಶ್ಯನ್ ಚಾಂಪಿಯನ್ ಉದಿತ್ ವಿರುದ್ಧ ಮುಂದಿನ ಪಂದ್ಯದಲ್ಲೂ ಸೋಲನುಭವಿಸಿದರು. ಹೀಗಾಗಿ ಟ್ರಯಲ್ಸ್‌ನಿಂದ ನಿರ್ಗಮಿಸಿದರು.

ಈ ಟ್ರಯಲ್ಸ್‌ನಲ್ಲಿ ಜಯಶಾಲಿಯಾಗುವ ಕುಸ್ತಿಪಟುಗಳು ಏಶ್ಯನ್ ಹಾಗೂ ವರ್ಲ್ಡ್ ಒಲಿಂಪಿಕ್ಸ್ ಕ್ವಾಲಿಫೈಯರ್ಸ್‌ನಲ್ಲಿ ಸ್ಫರ್ಧಿಸಲಿದ್ದಾರೆ.

ಭಾರತವು ಇದೀಗ ಪ್ಯಾರಿಸ್ ಗೇಮ್ಸ್‌ಗೆ ಕೇವಲ ಒಂದು ಕೋಟಾ ಸ್ಥಾನವನ್ನು ಗಳಿಸಿದೆ. ಮಹಿಳೆಯರ 53 ಕೆಜಿ ವಿಭಾಗದಲ್ಲಿ ಅಂತಿಮ್ ಪಾಂಘಾಲ್ ಈ ಸಾಧನೆ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News