ಪ್ಯಾಡ್ ನತ್ತ ಧಾವಿಸಿದ ಚೆಂಡು ಹಿಡಿದ ಬ್ಯಾಟರ್ ; ಔಟ್ ನೀಡಲು ನಿರಾಕರಿಸಿದ ಅಂಪೈರ್
ಲಂಡನ್: ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (ಡಬ್ಲ್ಯುಟಿಸಿ) ಫೈನಲ್ ನ ಎರಡನೇ ದಿನವಾದ ಗುರುವಾರ ವಿವಾದಾಸ್ಪದ ಘಟನೆಯೊಂದು ಸಂಭವಿಸಿತು. ಭೋಜನ ವಿರಾಮದ ಮುನ್ನ ಮೂರು ಎಸೆತಗಳು ಬಾಕಿಯಿರುವಾಗ ಘಟನೆ ನಡೆಯಿತು.
ಆಸ್ಟ್ರೇಲಿಯ ಸ್ಪಿನ್ನರ್ ಬೋ ವೆಬ್‌ಸ್ಟರ್ ರ ಎಸೆತವೊಂದನ್ನು ದಕ್ಷಿಣ ಆಫ್ರಿಕದ ಬ್ಯಾಟರ್ ಡೇವಿಡ್ ಬೆಡಿಂಗಮ್ ಬ್ಯಾಟ್ ಮೂಲಕ ನಿಭಾಯಿಸಿದಾಗ ಅದು ಇನ್ ಸೈಟ್ ಎಜ್ ಆಗಿ ಅವರ ಪ್ಯಾಡ್ ಸಮೀಪಕ್ಕೆ ಬಂತು. ಆಸ್ಟ್ರೇಲಿಯ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಚೆಂಡನ್ನು ಕ್ಯಾಚ್ ಹಿಡಿಯಲು ಬ್ಯಾಟರ್ ನ ಸಮೀಪಕ್ಕೆ ಧಾವಿಸಿದರು. ಆದರೆ, ಚಲನೆಯಲ್ಲಿದ್ದ ಚೆಂಡನ್ನು ಬೆಡಿಂಗಮ್ ಹಿಡಿದು ಪಕ್ಕಕ್ಕೆ ಎಸೆದರು.
ಆಗ ಉಸ್ಮಾನ್ ಖ್ವಾಜ ಮತ್ತು ಸ್ಟೀವ್ ಸ್ಮಿತ್ ಬ್ಯಾಟರ್ ಔಟಾಗಿದ್ದಾರೆ ಎಂಬುದಾಗಿ ತೀರ್ಪು ನೀಡುವಂತೆ ಕೋರಿ ಅಂಪೈರ್ ಗೆ ಮನವಿ ಮಾಡಿದರು. ಫೀಲ್ಡಿಂಗ್ ಮಾಡುವಾಗ ತಡೆಯೊಡ್ಡಲಾಗಿದೆ ಎಂದು ಹೇಳುತ್ತಾ ಕ್ಯಾರಿ ತನ್ನ ಮನವಿಯನ್ನು ಮುಂದುವರಿಸಿದರು. ಆದರೆ, ಅಂಪೈರ್ ಗಳಿಗೆ ಅದು ಮನವರಿಕೆಯಾಗಲಿಲ್ಲ. ಅಂತಿಮವಾಗಿ ಆಸ್ಟ್ರೇಲಿಯ ನಾಯಕ ಪ್ಯಾಟ್ ಕಮಿನ್ಸ್ ನಗುತ್ತಾ ಘಟನೆಯನ್ನು ಮುಕ್ತಾಯಗೊಳಿಸಿದರು.
ಕ್ರಿಕೆಟ್ ನಿಯಮಗಳ ಪ್ರಕಾರ, ಚೆಂಡು ಬ್ಯಾಟರ್‌ನ ಪ್ಯಾಡ್‌ಗೆ ಬಡಿದಾಗ ಅದನ್ನು ಡೆಡ್ ಎಂಬುದಾಗಿ ಪರಿಗಣಿಸಲಾಗುತ್ತದೆ. ಆದರೆ, ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಚೆಂಡು ಚಲನೆಯಲ್ಲಿತ್ತು ಮತ್ತು ಪ್ಯಾಡ್ ಗೆ ಬಡಿದು ನಿಂತಿರಲಿಲ್ಲ.
ಅದು ಫೀಲ್ಡಿಂಗ್‌ಗೆ ತಡೆಯಲ್ಲ ಎಂಬುದಾಗಿ ಅಂಪೈರ್‌ಗಳು ಭಾವಿಸಿದರೆ, ವೀಕ್ಷಕ ವಿವರಣೆಗಾರರ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಆ ಚೆಂಡನ್ನು ಕ್ಯಾಚ್ ಹಿಡಿಯಲು ವಿಕೆಟ್ ಕೀಪರ್ ಗೆ ಅವಕಾಶವಿತ್ತು ಎಂಬುದಾಗಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ದೀಪ್ ದಾಸ್‌ಗುಪ್ತಾ ಅಭಿಪ್ರಾಯಪಟ್ಟರೆ, ಇನ್ನೋರ್ವ ಭಾರತೀಯ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಅದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.