ಬಿಸಿಸಿಐನ ಪ್ರಧಾನ ಕಚೇರಿಯ ಬೋರ್ಡ್ ರೂಮ್ ಗೆ ಸುನೀಲ್ ಗವಾಸ್ಕರ್ ಹೆಸರು
ಸುನೀಲ್ ಗವಾಸ್ಕರ್ | PC : BCCI
ಮುಂಬೈ: ಭಾರತೀಯ ಕ್ರಿಕೆಟ್ ದಂತಕತೆ ಸುನೀಲ್ ಗವಾಸ್ಕರ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗುರುವಾರ ವಿಶೇಷ ಗೌರವವನ್ನು ನೀಡಿ ಸತ್ಕರಿಸಿದೆ. ಮುಂಬೈನಲ್ಲಿರುವ ಬಿಸಿಸಿಐನ ಪ್ರಧಾನ ಕಚೇರಿಯ ಬೋರ್ಡ್ ರೂಮ್‌ಗೆ ಸುನೀಲ್ ಗವಾಸ್ಕರ್ ಹೆಸರನ್ನು ಅಧಿಕೃತವಾಗಿ ಇಡಲಾಗಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಮೊತ್ತ ಮೊದಲ ಕ್ರಿಕೆಟಿಗನಾಗಿ ಐತಿಹಾಸಿಕ ಸಾಧನೆಯನ್ನು ಮಾಡಿದ್ದ್ದ ಗವಾಸ್ಕರ್‌ಗೆ ಈ ಮೂಲಕ ಗೌರವಿಸಲಾಗುತ್ತಿದೆ.
ನೂತನವಾಗಿ ಉದ್ಘಾಟನೆಗೊಂಡಿರುವ ಕೊಠಡಿಗೆ ‘10,000 ಗವಾಸ್ಕರ್’ಎಂದು ಹೆಸರಿಡಲಾಗಿದ್ದು, ಇದರೊಂದಿಗೆ ಪ್ರತಿಷ್ಠಿತ ಮೈಲಿಗಲ್ಲಿಗೆ ಗೌರವ ಸಲ್ಲಿಸಲಾಗುತ್ತಿದೆ.
1971 ಹಾಗೂ 1987ರ ನಡುವೆ ಭಾರತ ಪರ ಆಡಿದ್ದ ಗವಾಸ್ಕರ್, ವಿಶ್ವದ ಅತ್ಯಂತ ವೇಗದ ಬೌಲರ್‌ಗಳ ವಿರುದ್ದ ತಮ್ಮ ಅದ್ಭುತ ತಂತ್ರ ಹಾಗೂ ಶಾಂತತೆಗೆ ಹೆಸರುವಾಸಿಯಾಗಿದ್ದರು.
ಭಾವನಾತ್ಮಕ ಅನಾವರಣ ಸಮಾರಂಭವನ್ನು ಸೆರೆ ಹಿಡಿದಿರುವ ವೀಡಿಯೊವನ್ನು ಬಿಸಿಸಿಐ ಹಂಚಿಕೊಂಡಿದೆ. ಸಮಾರಂಭದಲ್ಲಿ ಗವಾಸ್ಕರ್ ಅವರೊಂದಿಗೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಹಾಗೂ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರಿದ್ದರು.
‘‘ಈ ಗೌರವವು ತುಂಬಾ ಖುಷಿ ಕೊಟ್ಟಿದೆ. ನನ್ನ ವೃತ್ತಿಜೀವನದಲ್ಲಿ ನನ್ನೊಂದಿಗೆ ನಿಂತಿದ್ದ ಬಿಸಿಸಿಐ ಹಾಗೂ ಎಲ್ಲ ಅಭಿಮಾನಿಗಳಿಗೆ ನಾನು ಕೃತಜ್ಞನಾಗಿದ್ದೇನೆ’’ಎಂದು ಗವಾಸ್ಕರ್ ಹೇಳಿದ್ದಾರೆ.
ಈ ಗೌರವವು ಗವಾಸ್ಕರ್ ಅವರ ಕ್ರಿಕೆಟ್ ಸಾಧನೆಗಳನ್ನು ಎತ್ತಿ ತೋರಿಸುವುದಲ್ಲದೆ, ಭಾರತೀಯ ಕ್ರಿಕೆಟ್‌ಗೆ ಅವರು ತಂದ ಶಿಸ್ತು ಹಾಗೂ ಸಮರ್ಪಣೆಯ ಮೌಲ್ಯಗಳ ದ್ಯೋತಕವಾಗಿದೆ. ಮುಂದಿನ ಪೀಳಿಗೆಗೆ ಇದು ಸ್ಫೂರ್ತಿ ತುಂಬಬಹುದು.