ಕೇಂದ್ರ ವಾರ್ಷಿಕ ಗುತ್ತಿಗೆ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗೆ BCCI ಚಿಂತನೆ
Photo Credit : PTI
ಹೊಸದಿಲ್ಲಿ, ಜ.20: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ತನ್ನ ವಾರ್ಷಿಕ ಕೇಂದ್ರ ಗುತ್ತಿಗೆ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆ ಮಾಡಲು ಸಜ್ಜಾಗಿದೆ. ‘ಎ’ ಪ್ಲಸ್ ವರ್ಗವನ್ನು ತೆಗೆದು ಹಾಕುವ ಮೂಲಕ ವ್ಯಾಪಕ ಬದಲಾವಣೆಗೆ ಚಿಂತನೆ ನಡೆಸುತ್ತಿದೆ.
ಪ್ರತಿಷ್ಠಿತ ‘ಎ’ ಪ್ಲಸ್ ಶ್ರೇಣಿಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಆಯ್ಕೆ ಸಮಿತಿಯು ಪ್ರಸ್ತಾವಿಸಿದೆ. ಈ ಹೆಜ್ಜೆಯು ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಮಂಡಿಸಿರುವ ಪ್ರಸ್ತಾವನೆಯ ಪ್ರಕಾರ, ಸದ್ಯದ ನಾಲ್ಕು ಹಂತದ ವ್ಯವಸ್ಥೆಯ ಬದಲಿಗೆ ಎ, ಬಿ ಹಾಗೂ ಸಿ — ಕೇವಲ ಮೂರು ವಿಭಾಗಗಳಾಗಿ ಪುನರ್ ರಚಿಸಲು ಶಿಫಾರಸು ಮಾಡಿದೆ.
ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ನಿಂದ ಅನುಮೋದನೆ ಪಡೆದರೆ, ವಾರ್ಷಿಕವಾಗಿ 7 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಆಟಗಾರರನ್ನು ಹೊಂದಿರುವ ‘ಎ’ ಪ್ಲಸ್ ವರ್ಗವು ರದ್ದುಗೊಳ್ಳುವ ಸಾಧ್ಯತೆ ಇದೆ.
ಏಪ್ರಿಲ್ 2025ರಲ್ಲಿ ಪ್ರಕಟಿಸಲಾಗಿರುವ 2024–25ರ ಕೇಂದ್ರ ಗುತ್ತಿಗೆಯ ಪಟ್ಟಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜ ಹಾಗೂ ಜಸ್‌ಪ್ರಿತ್ ಬುಮ್ರಾ ‘ಎ’ ಪ್ಲಸ್ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ.
‘ಎ’ ಗ್ರೇಡ್‌ನಲ್ಲಿ ಮುಹಮ್ಮದ್ ಸಿರಾಜ್, ಕೆ.ಎಲ್. ರಾಹುಲ್, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ಮುಹಮ್ಮದ್ ಶಮಿ ಹಾಗೂ ರಿಷಭ್ ಪಂತ್ ಇದ್ದಾರೆ.
‘ಬಿ’ ಗ್ರೇಡ್‌ನಲ್ಲಿ ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್ ಹಾಗೂ ಶ್ರೇಯಸ್ ಅಯ್ಯರ್ ರಂತಹ ಆಟಗಾರರು ಸ್ಥಾನ ಪಡೆದಿದ್ದಾರೆ.
‘ಸಿ’ ಗ್ರೇಡ್‌ನಲ್ಲಿ ಉದಯೋನ್ಮುಖ ಆಟಗಾರರ ದೊಡ್ಡ ಗುಂಪು ಇದೆ.