ಮೊದಲ ಟೆಸ್ಟ್: ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯ 390 ರನ್
ಮ್ಯಾಟ್ ರೆನ್ ಶಾ ಭರ್ಜರಿ ಶತಕ, ಮುಲ್ಡರ್ ಗೆ ನಾಲ್ಕು ವಿಕೆಟ್
ಮ್ಯಾಟ್ ರೆನ್ ಶಾ | Photo Credit : X , AP
ಡರ್ಬನ್, ಅ.10: ಮಧ್ಯಮ ಸರದಿಯ ಬ್ಯಾಟರ್ ಮ್ಯಾಟ್ ರೆನ್‌ಶಾ ಅವರ ಭರ್ಜರಿ ಶತಕದ (190 ರನ್, 397 ಎಸೆತ, 21 ಬೌಂಡರಿ, 1 ಸಿಕ್ಸರ್) ನೆರವಿನಿಂದ ಆಸ್ಟ್ರೇಲಿಯ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 390 ರನ್ ಗಳಿಸಿ ಆಲೌಟಾಗಿದೆ.
ಎರಡನೇ ದಿನವಾದ ಶನಿವಾರ 6 ವಿಕೆಟ್‌ಗಳ ನಷ್ಟಕ್ಕೆ 187 ರನ್‌ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಆಸ್ಟ್ರೇಲಿಯ ತಂಡವು 137.2 ಓವರ್‌ಗಳಲ್ಲಿ 390 ರನ್ ಕಲೆಹಾಕಿತು.
ಬ್ಯಾಟಿಂಗ್ ಮುಂದುವರಿಸಿದ ರೆನ್‌ಶಾ ಹಾಗೂ ನಾಯಕ ಪ್ಯಾಟ್ ಕಮಿನ್ಸ್ (43 ರನ್, 98 ಎಸೆತ) ಏಳನೇ ವಿಕೆಟ್‌ಗೆ 86 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ನಾಥನ್ ಲಿಯೊನ್ (27 ರನ್, 92 ಎಸೆತ) ಹಾಗೂ ರೆನ್‌ಶಾ ಒಂಬತ್ತನೇ ವಿಕೆಟ್‌ಗೆ 34 ರನ್ ಸೇರಿಸಿ ತಂಡದ ಮೊತ್ತವನ್ನು 364ಕ್ಕೆ ತಲುಪಿಸಿದರು. ಶತಕವೀರ ರೆನ್‌ಶಾ ಕೊನೆಯ ಬ್ಯಾಟರ್ ಆಗಿ ಪೆವಿಲಿಯನ್ ಸೇರಿದರು.
ದಕ್ಷಿಣ ಆಫ್ರಿಕಾ ಪರ ವಿಯಾನ್ ಮುಲ್ಡರ್ (4-68) ಯಶಸ್ವಿ ಪ್ರದರ್ಶನ ನೀಡಿದರೆ, ಮಾರ್ಕ್ ಜಾನ್ಸನ್ (3-68) ಹಾಗೂ ಅನ್ರಿಚ್ ನೋಟ್ಜೆ (2-88) ವಿಕೆಟ್‌ಗಳನ್ನು ಹಂಚಿಕೊಂಡರು.
ಮೊದಲ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ತಂಡವು ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿದೆ. ಮರ್ಕ್ರಮ್ (15 ರನ್) ಹಾಗೂ ಡೇವಿಡ್ ಬೆಡಿಂಗ್‌ಹ್ಯಾಮ್ (12 ರನ್) ಕ್ರೀಸ್‌ನಲ್ಲಿದ್ದಾರೆ.