Photo Credit : PTI 

ಇಂದೋರ್, ಅ.10: ಭಾರತ ಹಾಗೂ ವೆಸ್ಟ್‌ಇಂಡೀಸ್ ತಂಡಗಳು ಮೂರನೇ ಟಿ-20 ಅಂತರರಾಷ್ಟ್ರೀಯ ಪಂದ್ಯವನ್ನಾಡಲು ಇಂದೋರ್‌ಗೆ ಆಗಮಿಸಿವೆ. ರಾಂಚಿಯಲ್ಲಿ 38.3 ಓವರ್‌ಗಳಲ್ಲಿ 501 ರನ್ ಗಳಿಸಿದ್ದ ಉಭಯ ತಂಡಗಳು ಬ್ಯಾಟಿಂಗ್ ಸ್ನೇಹಿ ಹೋಳ್ಕರ್ ಸ್ಟೇಡಿಯಂನಲ್ಲೂ ರನ್ ಹೊಳೆ ಹರಿಸುವ ಸಾಧ್ಯತೆಯಿದೆ.

ಶ್ರೇಯಸ್ ಅಯ್ಯರ್ ಬಳಗ ಎರಡನೇ ಟಿ-20ಯಲ್ಲಿ 249 ರನ್ ಗಳಿಸಿದ್ದರೂ ಆರು ವಿಕೆಟ್‌ಗಳಿಂದ ಸೋಲುಂಡಿದೆ. ಶಾಯ್ ಹೋಪ್ ನಾಯಕತ್ವದ ವಿಂಡೀಸ್ ತಂಡವು ಸದ್ಯ ಐದು ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ.

ಬ್ಯಾಟರ್‌ ಗಳಿಗೆ ನೆರವಾಗುವ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆಯುವ ಮೂರನೇ ಪಂದ್ಯದಲ್ಲಿ ಭಾರತ ತಂಡವು ತನ್ನ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲು ಬಯಸಿದೆ. ರಾಂಚಿಯಲ್ಲಿ ವಿಂಡೀಸ್ ತಂಡವು ಮೊದಲ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿದ್ದರೂ, ಎದುರಾಳಿ ಬ್ಯಾಟರ್‌ ಗಳನ್ನು ನಿಯಂತ್ರಿಸುವಲ್ಲಿ ಭಾರತದ ಬೌಲರ್‌ಗಳು ಎಡವಿದ್ದಾರೆ. ಭಾರತ ತಂಡವು ಮೂರನೇ ಪಂದ್ಯದಲ್ಲಿ ಪ್ರಿನ್ಸ್ ಯಾದವ್ ಅವರನ್ನು ಆಡುವ ಹನ್ನೊಂದರ ಬಳಗಕ್ಕೆ ಸೇರಿಸಿಕೊಳ್ಳಬಹುದು.

ಇಂದೋರ್‌ನಲ್ಲಿ ಟಿ-20 ಕ್ರಿಕೆಟ್ ನಡೆಯದೆ ಎರಡು ವರ್ಷಗಳು ಕಳೆದಿವೆ. ಹಿಂದಿನ ಮೂರು ಏಕದಿನ ಪಂದ್ಯಗಳಲ್ಲಿ 399, 385 ಹಾಗೂ 337 ರನ್ ಗಳಿಸಲಾಗಿತ್ತು. ಭಾರತ ತಂಡವು 2017ರಲ್ಲಿ ಶ್ರೀಲಂಕಾ ವಿರುದ್ಧ ಇದೇ ಮೈದಾನದಲ್ಲಿ 260 ರನ್ ಗಳಿಸಿತ್ತು. ಇಂದೋರ್ ಮೈದಾನವು ಸಣ್ಣ ಬೌಂಡರಿಗಳನ್ನು ಹೊಂದಿದ್ದು, ರನ್ ಹೊಳೆ ಹರಿಯುವ ನಿರೀಕ್ಷೆಯಿದೆ.

ಭಾರತ-ವೆಸ್ಟ್‌ಇಂಡೀಸ್ ತಂಡಗಳು ಈ ತನಕ ಮೂರು ಏಕದಿನ ಹಾಗೂ ಎರಡು ಟಿ-20 ಪಂದ್ಯಗಳನ್ನು ಆಡಿದ್ದು, ರನ್ ಚೇಸ್ ಮಾಡಿದ ತಂಡಗಳು ಗೆಲುವು ದಾಖಲಿಸಿವೆ.

ಇಂದೋರ್‌ನಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ 200ಕ್ಕೂ ಅಧಿಕ ರನ್ ಗಳಿಸಿದ ತಂಡ ಗೆಲುವು ಪಡೆದಿದೆ. ಇಲ್ಲಿ ನಡೆದ ಎಂಟು ಏಕದಿನ ಪಂದ್ಯಗಳಲ್ಲಿ ಎರಡು ಬಾರಿ ಯಶಸ್ವಿಯಾಗಿ ರನ್ ಚೇಸ್ ಮಾಡಲಾಗಿದೆ. 2011ರಲ್ಲಿ ವೀರೇಂದ್ರ ಸೆಹ್ವಾಗ್ ಅವರ ದ್ವಿಶತಕದ ಬಲದಿಂದ ಭಾರತವು ಮೊದಲು ಬ್ಯಾಟಿಂಗ್ ಮಾಡಿ 418 ರನ್ ಗಳಿಸಿತ್ತು.

ಇತ್ತೀಚೆಗೆ ನಡೆದಿರುವ ಏಕದಿನ ಸರಣಿಯಲ್ಲಿ 405 ಹಾಗೂ 351 ರನ್‌ಗಳ ಗುರಿಯನ್ನು ಬೆನ್ನಟ್ಟಲಾಗಿದೆ.

ಪ್ರಸಕ್ತ ಸರಣಿಯ ಎರಡನೇ ಟಿ-20 ಪಂದ್ಯದಲ್ಲಿ ವೆಸ್ಟ್‌ಇಂಡೀಸ್ 250 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದೆ.

ಭಾರತ ತಂಡವು ರಾಂಚಿಯಲ್ಲಿ ಟಿ-20 ಪಂದ್ಯ ಸೋಲಲು ಇಬ್ಬನಿ ಮುಖ್ಯ ಕಾರಣವಾಗಿತ್ತು. ಕೇವಲ ಮೂವರು ಸ್ಪೆಷಲಿಸ್ಟ್ ಬೌಲರ್‌ಗಳನ್ನು ಆಡಿಸುತ್ತಿರುವ ಭಾರತ ತಂಡವು ತನ್ನ ನೀತಿಯನ್ನು ಬದಲಿಸುವ ನಿರೀಕ್ಷೆಯಿಲ್ಲ. ಶಿವಂ ದುಬೆ ಬದಲಿಗೆ ಬಲಗೈ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಕಡಿಮೆ. ದುಬೆ ಅವರು ರಾಂಚಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದರೂ ಬ್ಯಾಟ್ ಹಾಗೂ ಚೆಂಡಿನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. 10 ಎಸೆತಗಳಲ್ಲಿ 7 ರನ್ ಗಳಿಸಿದ್ದರು. ಬೌಲಿಂಗ್‌ನಲ್ಲಿ ಎರಡು ಓವರ್‌ಗಳಲ್ಲಿ 30 ರನ್ ಬಿಟ್ಟುಕೊಟ್ಟಿದ್ದರು.

ಹೋಪ್, ರುದರ್‌ಫೋರ್ಡ್ ಹಾಗೂ ಶೆಫರ್ಡ್ ಅವರನ್ನು ಕಟ್ಟಿಹಾಕಲು ಭಾರತಕ್ಕೆ ಐದನೇ ಬೌಲರ್ ಅಗತ್ಯವಿದೆ. ನಮನ್ ಧೀರ್, ಅಕ್ಷರ್ ಪಟೇಲ್ ಹಾಗೂ ದುಬೆಗಿಂತಲೂ ಪ್ರಿನ್ಸ್ ಯಾದವ್ ವೆಸ್ಟ್‌ಇಂಡೀಸ್ ಬ್ಯಾಟರ್‌ಗಳನ್ನು ಒತ್ತಡಕ್ಕೆ ಸಿಲುಕಿಸಬಲ್ಲ ಬೌಲರ್ ಆಗಿದ್ದಾರೆ.

ಎರಡನೇ ಪಂದ್ಯದಲ್ಲಿ ಅಕ್ಷರ್ ಪಟೇಲ್, ನಮನ್ ಧೀರ್ ಹಾಗೂ ಕುಲದೀಪ್ ಯಾದವ್ 9.3 ಓವರ್‌ಗಳಲ್ಲಿ 141 ರನ್ ಬಿಟ್ಟುಕೊಟ್ಟು ಕೇವಲ ಒಂದು ವಿಕೆಟ್ ಪಡೆದಿದ್ದರು. ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಕೋಚ್ ಗೌತಮ್ ಗಂಭೀರ್ ತಮ್ಮ ಬೌಲರ್‌ಗಳನ್ನು ಸಮರ್ಥಿಸಿಕೊಂಡಿದ್ದರು.

ಎರಡನೇ ಟಿ-20ಯಲ್ಲಿ 82 ರನ್ ಗಳಿಸಿರುವ ಸಂಜು ಸ್ಯಾಮ್ಸನ್ ತಮ್ಮ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಕನಿಷ್ಠ ಮೂರನೇ ಟಿ-20 ಪಂದ್ಯದಲ್ಲಾದರೂ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಹಾಗೂ ತಿಲಕ್ ವರ್ಮಾ ಅವರಿಂದ ಮತ್ತೊಮ್ಮೆ ದೊಡ್ಡ ಮೊತ್ತದ ನಿರೀಕ್ಷೆಯಿದೆ.

ರಾಂಚಿಯಲ್ಲಿ ಗೆಲುವು ಪಡೆದಿರುವ ವೆಸ್ಟ್‌ಇಂಡೀಸ್ ತಂಡವು ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ.

ಪಿಚ್ ಹಾಗೂ ವಾತಾವರಣ

ರೋಹಿತ್ ಶರ್ಮಾ, ಹಾಶಿಂ ಅಮ್ಲ, ಚೇತೇಶ್ವರ ಪೂಜಾರ, ಶ್ರೇಯಸ್ ಅಯ್ಯರ್ ಹಾಗೂ ರಿಲೀ ರೊಸ್ಸೌ ಇಂದೋರ್‌ನಲ್ಲಿ ಟಿ-20 ಕ್ರಿಕೆಟ್‌ನಲ್ಲಿ ಶತಕ ಗಳಿಸಿದ್ದರು. ವೀರೇಂದ್ರ ಸೆಹ್ವಾಗ್ ಇದೇ ಮೈದಾನದಲ್ಲಿ ದ್ವಿಶತಕ ದಾಖಲಿಸಿದ್ದರು. ರವಿವಾರದ ಹವಾಮಾನ ಮುನ್ಸೂಚನೆಯ ಪ್ರಕಾರ, ಇಂದೋರ್‌ನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇದು ಇಬ್ಬನಿಯ ಕಾಟಕ್ಕೆ ಸೂಕ್ತವಾದ ಪರಿಸ್ಥಿತಿಯಾಗಬಹುದು.

ಅಂಕಿ-ಅಂಶಗಳು

ವೆಸ್ಟ್‌ಇಂಡೀಸ್ ತಂಡವು ಭಾರತದಲ್ಲಿ ಭಾರತ ತಂಡದ ವಿರುದ್ಧ ಮೂರು ಟಿ-20 ಪಂದ್ಯಗಳನ್ನು ಗೆದ್ದಿದೆ. ಈ ಎಲ್ಲ ಮೂರು ಪಂದ್ಯಗಳನ್ನೂ ರನ್ ಚೇಸ್ ಮಾಡುವಾಗ ಗೆದ್ದಿದೆ. 2016ರ ಟಿ-20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಹಾಗೂ ಇದೀಗ ಭಾರತ ವಿರುದ್ಧ ಗರಿಷ್ಠ ರನ್ ಚೇಸ್ ಮಾಡಿದೆ.

ರಾಂಚಿಯಲ್ಲಿ ಒಟ್ಟು 501 ರನ್ ದಾಖಲಾಗಿದ್ದು, ಇದು ಟಿ-20 ಕ್ರಿಕೆಟ್‌ನ ಎರಡನೇ ಗರಿಷ್ಠ ಮೊತ್ತವಾಗಿದೆ. ಮೂರು ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್‌ಇಂಡೀಸ್ 258 ರನ್ ಗಳಿಸಿದ್ದರೂ ಸೋಲುಂಡಿತ್ತು.

ತಂಡಗಳು

ಭಾರತ (ಸಂಭಾವ್ಯ 11): 1. ಅಭಿಷೇಕ್ ಶರ್ಮಾ, 2. ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), 3. ಇಶಾನ್ ಕಿಶನ್, 4. ಶ್ರೇಯಸ್ ಅಯ್ಯರ್ (ನಾಯಕ), 5. ತಿಲಕ್ ವರ್ಮಾ, 6. ನಮನ್ ಧೀರ್, 7. ನಿತೀಶ್ ರೆಡ್ಡಿ/ಶಿವಂ ದುಬೆ, 8. ಅಕ್ಷರ್ ಪಟೇಲ್, 9. ಕುಲದೀಪ್ ಯಾದವ್, 10. ಮಯಾಂಕ್ ಯಾದವ್, 11. ಅರ್ಷದೀಪ್ ಸಿಂಗ್.

ವೆಸ್ಟ್‌ಇಂಡೀಸ್ (ಸಂಭಾವ್ಯ 11): 1. ಶಾಯ್ ಹೋಪ್ (ನಾಯಕ, ವಿಕೆಟ್‌ಕೀಪರ್), 2. ಕಮಿಲ್ ಪೂರನ್, 3. ಶಿಮ್ರೊನ್ ಹೆಟ್ಮೆಯರ್, 4. ರೊವ್‌ಮನ್ ಪೊವೆಲ್, 5. ಶೆರ್ಫಾನ್ ರುದರ್‌ಫೋರ್ಡ್, 6. ರೊಮಾರಿಯೊ ಶೆಫರ್ಡ್, 7. ರೋಸ್ಟನ್ ಚೇಸ್, 8. ಶಮರ್ ಸ್ಪ್ರಿಂಗರ್, 9. ಅಕೀಲ್ ಹುಸೇನ್, 10. ಶಮರ್ ಜೋಸೆಫ್, 11. ಗುಡಕೇಶ್ ಮೋಟಿ.

ಪಂದ್ಯ ಆರಂಭದ ಸಮಯ: ರಾತ್ರಿ 7.00

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor