Photo Credit : olympic.ind.in

ಹೊಸದಿಲ್ಲಿ, ಡಿ.10: ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ (ಐಒಎ) ತನ್ನ ನೂತನ ಕಾರ್ಯಕಾರಿ ಮಂಡಳಿಯನ್ನು ಡಿಸೆಂಬರ್ 5ರಂದು ಆಯ್ಕೆ ಮಾಡಲಿದೆ. ಹಾಲಿ ಸಮಿತಿಯ ಅವಧಿ ಮುಗಿಯಲು ಐದು ದಿನಗಳು ಬಾಕಿ ಇರುವಾಗ ಈ ಚುನಾವಣೆ ನಡೆಯಲಿದೆ.

ಮಾಜಿ ಚುನಾವಣಾ ಆಯುಕ್ತ ಸಂಜಯ್ ಕುಮಾರ್ ಶ್ರೀವಾಸ್ತವ ಅವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡುವುದರೊಂದಿಗೆ ಶನಿವಾರ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ.

ನಿವೃತ್ತ ಐಎಎಸ್ ಅಧಿಕಾರಿ ಶ್ರೀವಾಸ್ತವ ಅವರು ದಿಲ್ಲಿ ಹಾಗೂ ಚಂಡೀಗಢದ ಚುನಾವಣಾ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಯಕಾರಿ ಮಂಡಳಿ, ಕ್ರೀಡಾಪಟುಗಳ ಆಯೋಗ ಹಾಗೂ ಸ್ಪೋರ್ಟ್ಸ್‌ಪರ್ಸನ್ಸ್ ಆಫ್ ಔಟ್‌ಸ್ಟ್ಯಾಂಡಿಂಗ್ ಮೆರಿಟ್ ವಿಭಾಗದ ಚುನಾವಣೆಗಳ ಮೇಲ್ವಿಚಾರಣೆ ನಡೆಸಲಿದ್ದಾರೆ.

‘2026ರ ಚುನಾವಣೆಗಳು ಭಾರತೀಯ ಒಲಿಂಪಿಕ್ಸ್ ಚಳವಳಿಯಲ್ಲಿ ಉತ್ತಮ ಆಡಳಿತ, ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ಬಲಪಡಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಿವೆ. ಒಲಿಂಪಿಕ್ಸ್ ಚಾರ್ಟರ್ ಹಾಗೂ ರಾಷ್ಟ್ರೀಯ ಕ್ರೀಡಾ ಆಡಳಿತದ ಚೌಕಟ್ಟಿಗೆ ಸಂಪೂರ್ಣವಾಗಿ ಅನುಗುಣವಾಗಿರುವ, ವಿಶ್ವಾಸಾರ್ಹ ಹಾಗೂ ಕ್ರೀಡಾಪಟು ಕೇಂದ್ರಿತ ಸಂಸ್ಥೆಗಳನ್ನು ನಿರ್ಮಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ಐಒಎ ಅಧ್ಯಕ್ಷೆ ಪಿ.ಟಿ. ಉಷಾ ಹೇಳಿದ್ದಾರೆ.

ನವೆಂಬರ್‌ನಲ್ಲಿ ಕ್ರೀಡಾಪಟುಗಳ ಆಯೋಗದ ಮತದಾನ

ಈ ವರ್ಷದ ವೇಳಾಪಟ್ಟಿಯಲ್ಲಿನ ಮೊದಲ ಪ್ರಮುಖ ಚುನಾವಣೆಯು ಐಒಎ ಕ್ರೀಡಾಪಟುಗಳ ಆಯೋಗದ್ದಾಗಿದೆ. ಮತದಾನ, ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆ ನವೆಂಬರ್ 3ರಂದು ನಡೆಯಲಿದೆ. ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು ತಮ್ಮ ಆಯಾ ಕ್ರೀಡಾಪಟುಗಳ ಆಯೋಗಗಳ ಮೂಲಕ ಇಬ್ಬರು ಕ್ರೀಡಾಪಟು ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡಲು ಅಕ್ಟೋಬರ್ 11ರ ಮಧ್ಯಾಹ್ನ 2 ಗಂಟೆಯವರೆಗೆ ಸಮಯಾವಕಾಶ ಹೊಂದಿವೆ.

ಹೊಸ ಆಯೋಗವು 10 ಚುನಾಯಿತ ಸದಸ್ಯರನ್ನು (ಐವರು ಪುರುಷರು ಹಾಗೂ ಐವರು ಮಹಿಳೆಯರು) ಒಳಗೊಂಡಿರುತ್ತದೆ. ಇದರಲ್ಲಿ ಒಲಿಂಪಿಕ್ಸ್ ವರ್ಗದ ಕ್ರೀಡೆಗಳು ಹಾಗೂ ಪ್ರಮುಖ ಸ್ಪರ್ಧೆಗಳಲ್ಲಿ ಯಶಸ್ಸು ಸಾಧಿಸಿದ ಕ್ರೀಡಾಪಟುಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ನಿಯಮಗಳಿರುತ್ತವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor