Photo Credit : x@BCCI

ಇಂದೋರ್, ಅ. 11: ಬ್ಯಾಟಿಂಗ್‌ ನಲ್ಲಿ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಆಟ, ಬೌಲಿಂಗ್‌ ನಲ್ಲಿ ಅರ್ಷದೀಪ್ ಸಿಂಗ್ ಅವರ ಮಾರಕ ದಾಳಿ! ಈ ಜೋಡಿಯ ನೆರವಿನಿಂದ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ 14 ರನ್‌ ಗಳ ರೋಚಕ ಜಯ ದಾಖಲಿಸಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ 2–1 ಮುನ್ನಡೆ ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ ಗಳಲ್ಲಿ 223 ರನ್‌ ಗಳಿಗೆ ಆಲೌಟ್ ಆಯಿತು. ಬೃಹತ್ ಮೊತ್ತ ದಾಖಲಿಸಿದ್ದರೂ, ವೆಸ್ಟ್ ಇಂಡೀಸ್‌ ನ ಆಕ್ರಮಣಕಾರಿ ಬ್ಯಾಟಿಂಗ್ ಭಾರತಕ್ಕೆ ಆತಂಕ ಮೂಡಿಸಿತ್ತು. ಆದರೆ, ಒತ್ತಡದ ಸಂದರ್ಭದಲ್ಲೂ ದಿಟ್ಟ ಪ್ರದರ್ಶನ ನೀಡಿದ ಭಾರತೀಯ ಬೌಲರ್‌ಗಳು ಎದುರಾಳಿಯನ್ನು 209 ರನ್‌ ಗಳಿಗೆ ನಿಯಂತ್ರಿಸಿ ಗೆಲುವು ತಂದುಕೊಟ್ಟರು.

ಅಭಿಷೇಕ್ ಅಬ್ಬರಕ್ಕೆ ವಿಂಡೀಸ್ ತತ್ತರ

ಭಾರತದ ಇನಿಂಗ್ಸ್‌ ಗೆ ಸ್ಫೋಟಕ ವೇಗ ನೀಡಿದ ಅಭಿಷೇಕ್ ಶರ್ಮಾ ಕೇವಲ 30 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಐದು ಸಿಕ್ಸರ್‌ ಗಳ ನೆರವಿನಿಂದ 69 ರನ್ ಸಿಡಿಸಿದರು. ಅವರ ಆಕ್ರಮಣಕಾರಿ ಆಟ ವೆಸ್ಟ್ ಇಂಡೀಸ್ ಬೌಲರ್‌ ಗಳನ್ನು ಒತ್ತಡಕ್ಕೆ ಸಿಲುಕಿಸಿತು. ಇಶಾನ್ ಕಿಶನ್ 18 ಎಸೆತಗಳಲ್ಲಿ 37 ರನ್ ಗಳಿಸಿ ಉತ್ತಮ ಸಾಥ್ ನೀಡಿದರು.

ತಿಲಕ್ ವರ್ಮಾ 28, ನಿತೀಶ್ ಕುಮಾರ್ ರೆಡ್ಡಿ 21 ಹಾಗೂ ಅಕ್ಷರ್ ಪಟೇಲ್ 20 ರನ್ ಗಳಿಸಿದರು. ಕೊನೆಯ ಹಂತದಲ್ಲಿ ಪ್ರಿನ್ಸ್ ಯಾದವ್ ಆರು ಎಸೆತಗಳಲ್ಲಿ 13 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಕೊಡುಗೆಗಳ ನೆರವಿನಿಂದ ಭಾರತ ಸವಾಲಿನ ಮೊತ್ತ ದಾಖಲಿಸಿತು.

ಪೂರನ್–ಹೆಟ್ಮೆಯರ್ ಪ್ರತಿದಾಳಿ

ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್‌ ಗೆ ನಾಯಕ ಶಾಯ್ ಹೋಪ್ ಬೇಗನೆ ವಿಕೆಟ್ ಒಪ್ಪಿಸಿದ್ದು ಹಿನ್ನಡೆಯಾಯಿತು. ಆದರೆ, ಕಮಿಲ್ ಪೂರನ್ ಮತ್ತು ಶಿಮ್ರಾನ್ ಹೆಟ್ಮೆಯರ್ ಭಾರತೀಯ ಬೌಲರ್‌ಗಳ ಮೇಲೆ ಪ್ರತಿದಾಳಿ ನಡೆಸಿದರು. ಪೂರನ್ 27 ಎಸೆತಗಳಲ್ಲಿ 42 ರನ್ ಗಳಿಸಿದರೆ, ಹೆಟ್ಮೆಯರ್ 26 ಎಸೆತಗಳಲ್ಲಿ 43 ರನ್ ಸಿಡಿಸಿದರು. ಶೆರ್ಫೇನ್ ರುದರ್‌ಫೋರ್ಡ್ 32 ರನ್ ಗಳಿಸಿ ಹೋರಾಟಕ್ಕೆ ಬಲ ತುಂಬಿದರು.

ಕೊನೆಯ ಹಂತದಲ್ಲಿ ಶಮರ್ ಸ್ಪ್ರಿಂಗರ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 11 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ಸಹಿತ ಅಜೇಯ 35 ರನ್ ಗಳಿಸಿ ಭಾರತದ ಪಾಳಯದಲ್ಲಿ ಆತಂಕ ಮೂಡಿಸಿದರು. ಆದರೂ, ಗೆಲುವಿಗೆ ಬೇಕಾದ ರನ್‌ ಗಳನ್ನು ಗಳಿಸಲು ವೆಸ್ಟ್ ಇಂಡೀಸ್‌ ಗೆ ಸಾಧ್ಯವಾಗಲಿಲ್ಲ. ತಂಡ 20 ಓವರ್‌ ಗಳಲ್ಲಿ ಏಳು ವಿಕೆಟ್‌ ಗಳಿಗೆ 209 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಭಾರತದ ಪರ ಅರ್ಷದೀಪ್ ಸಿಂಗ್ 44 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ನಮನ್ ಧೀರ್ ಎರಡು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ ಒಂದು ವಿಕೆಟ್ ಗಳಿಸಿದರು.

ಪಂದ್ಯದ ಮಧ್ಯಂತರದಲ್ಲಿ ಭಾರತದ ಮೊತ್ತವನ್ನು ಬೆನ್ನಟ್ಟಬಹುದು ಎಂಬ ನಿರೀಕ್ಷೆ ಮೂಡಿದ್ದರೂ, ನಿರ್ಣಾಯಕ ಹಂತಗಳಲ್ಲಿ ವಿಕೆಟ್ ಕಬಳಿಸಿದ ಭಾರತೀಯ ಬೌಲರ್‌ ಗಳು ಪಂದ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor