ಬಾಂಗ್ಲಾದೇಶ ಕ್ರಿಕೆಟ್ ಪ್ರವಾಸಕ್ಕೆ ಬಿಸಿಸಿಐ ತಡೆ: ತುರ್ತು ಸಭೆ ಕರೆದ ಬಿಸಿಬಿ
Photo Credit : BCCI
ಢಾಕಾ, ಜ.3: ಮುಸ್ತಫಿಝುರ‌್ರಹ್ಮಾನ್‌ರನ್ನು ಶನಿವಾರ ಐಪಿಎಲ್‌ನಿಂದ ಹೊರಗಿಟ್ಟ ನಂತರ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ)ನಡುವಿನ ಸಂಬಂಧ ಹಳಸಿದೆ.
ಬಿಸಿಸಿಐ ಆಗಸ್ಟ್‌ನಲ್ಲಿ ನಿಗದಿಯಾಗಿರುವ ಬಾಂಗ್ಲಾದೇಶದ ಸೀಮಿತ ಓವರ್ ಕ್ರಿಕೆಟ್ ಸರಣಿಗೆ ತಡೆ ಹೇರಿದೆ ಎಂದು ತಿಳಿದುಬಂದಿದೆ.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಲು ಬಿಸಿಬಿ ಕೂಡ ಶನಿವಾರ ರಾತ್ರಿ ತುರ್ತು ಸಭೆ ಕರೆದಿದೆ ಎಂದು ವರದಿಯಾಗಿದೆ.
ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟ ನಂತರ ಬಿಸಿಸಿಐ ಈ ಹಿಂದೆ ಬಾಂಗ್ಲಾದೇಶದ ಪ್ರವಾಸವನ್ನು ರದ್ದುಪಡಿಸಿತ್ತು.
ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ)ಸಭೆಗಳಲ್ಲಿ ಭಾಗವಹಿಸಲು ಢಾಕಾಕ್ಕೆ ಪ್ರಯಾಣಿಸಲು ಬಿಸಿಸಿಐ ಪ್ರತಿನಿಧಿಯೊಬ್ಬರು ಹಿಂದೇಟು ಹಾಕಿದ್ದಾರೆ.
‘‘ಬಿಸಿಸಿಐ ನಿಲುವು ಬದಲಾಗುವುದಿಲ್ಲ. ಬಾಂಗ್ಲಾದೇಶಕ್ಕೆ ಯಾವುದೇ ಕ್ರಿಕೆಟ್ ಪ್ರವಾಸ ಕೈಗೊಳ್ಳುವ ಮೊದಲು ಕ್ರಿಕೆಟ್ ಮಂಡಳಿಯು ಸರಕಾರದ ಅನುಮತಿ ಪಡೆಯುವ ಅಗತ್ಯವಿದೆ. ಇದೀಗ ಬಿಸಿಸಿಐ ವೇಳಾಪಟ್ಟಿಯನ್ನು ಖಚಿತಪಡಿಸಿಲ್ಲ’’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.