ಏಷ್ಯಾಕಪ್ ಸೋಲಿನ ಬಳಿಕ ಅಂಡರ್ 19 ತಂಡದ ವಿರುದ್ಧ ಅಚ್ಚರಿಯ ಕ್ರಮಕ್ಕೆ ಮುಂದಾದ ಬಿಸಿಸಿಐ
PC: x.com/CricketNDTV
ಹೊಸದಲ್ಲಿ: ಏಷ್ಯಾಕಪ್ ಅಂಡರ್ 19 ಕ್ರಿಕೆಟ್ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ತಲುಪಿದ ಬಳಿಕವೂ ಅಂತಿಮ ಕದನದಲ್ಲಿ 191 ರನ್ ಗಳ ಭಾರಿ ಅಂತರದಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕೆ ಮಣಿದ ಭಾರತ ತಂಡದ ಸಾಧನೆಯ ಪರಾಮರ್ಶೆಗೆ ಬಿಸಿಸಿಐ ಮುಂದಾಗಿದೆ. ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆಯವರಂಥ ಐಪಿಎಲ್ ಆಟಗಾರರಿಂದ ಕೂಡಿದ್ದ ತಂಡ ಟೂರ್ನಿಯುದ್ದಕ್ಕೂ ಪ್ರಾಬಲ್ಯ ಮೆರೆದರೂ ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಮುಗ್ಗರಿಸಿದ ಹಿನ್ನೆಲೆಯಲ್ಲಿ ತಂಡದ ಆಟಗಾರರು ಹಾಗೂ ಆಡಳಿತ ವರ್ಗದಿಂದ ವಿವರಣೆ ಕೇಳಲು ಬಿಸಿಸಿಐ ನಿರ್ಧರಿಸಿದೆ ಎಂದು ಕ್ರಿಕ್ ಬಝ್ ವರದಿ ಹೇಳಿದೆ.
ಸಮೀರ್ ಮಿನ್ಹಾಸ್ ಕೇವಲ 113 ಎಸೆತಗಳಲ್ಲಿ 172 ರನ್ ಸಿಡಿಸಿ ಪಾಕಿಸ್ತಾನದ ಭಾರಿ ಮೊತ್ತಕ್ಕೆ ಕಾರಣರಾಗಿದ್ದರು. ಎದುರಾಳಿ ತಂಡ 8 ವಿಕೆಟ್ ನಷ್ಟಕ್ಕೆ 347 ರನ್ ಗಳಿಸಿದ ಬಳಿಕ ಭಾರತ ಕೇವಲ 26.2 ಓವರ್ ಗಳಲ್ಲಿ 156 ರನ್ ಗಳಿಗೆ ಆಲೌಟ್ ಆಗಿತ್ತು. ಅಲಿ ರಝಾ (4/42), ಮೊಹ್ಮದ್ ಸಯ್ಯಮ್ (2/38) ಮತ್ತು ಅಬ್ದುಲ್ ಸುಭಾನ್ (2/29) ಭಾರತ ತಂಡದ ಬೆನ್ನೆಲುಬು ಮುರಿದಿದ್ದರು. ಭರ್ಜರಿಯಾಗಿ ಬ್ಯಾಟಿಂಗ್ ಆರಂಭಿಸಿದ ಸೂರ್ಯವಂಶಿ 26 ರನ್ ಗೆ ವಿಕೆಟ್ ಒಪ್ಪಿಸಿದರೆ, ಚೆನ್ನೈ ಸೂಪರ್‌ಕಿಂಗ್ಸ್ ಆಟಗಾರ ಆಯುಷ್ ಮ್ಹಾತ್ರೆ 2 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಖಂಡಮಟ್ಟದ ಟೂರ್ನಿಯಲ್ಲಿ ಆಯುಷ್ ಮ್ಹಾತ್ರೆ ನೇತೃತ್ವದ ತಂಡದ ಪ್ರದರ್ಶನದ ಬಗ್ಗೆ ಸಂಪೂರ್ಣ ಪರಾಮರ್ಶೆ ನಡೆಸಲು ಸೋಮವಾರ ಸಂಜೆ ನಡೆದ ಬಿಸಿಸಿಐ ಆಡಳಿತ ಮಂಡಳಿಯ ಆನ್ಲೈನ್ ಸಭೆಯಲ್ಲಿ ನಿರ್ಧರಿಸಲಾಯಿತು. ಇಡೀ ತಂಡದಿಂದ ವಿವರಣೆ ಕೇಳುವ ಅಗತ್ಯವಿದೆ ಎಂಬ ನಿರ್ಧಾರಕ್ಕೆ ಸಭೆ ಬಂದಿದೆ ಎನ್ನಲಾಗಿದೆ.
ಸಾಮಾನ್ಯವಾಗಿ ಟೂರ್ನಿಯ ಬಳಿಕ ತಂಡದ ವ್ಯವಸ್ಥಾಪಕರು ಬಿಸಿಸಿಐಗೆ ವರದಿ ಸಲ್ಲಿಸುತ್ತಾರೆ. ಈ ಬಾರಿ ಬಿಸಿಸಿಐ ಸಾಮಾನ್ಯ ಪರಾಮರ್ಶೆ ಪ್ರಕ್ರಿಯೆಯಿಂದಾಚೆ ಕ್ರಮ ಕೈಗೊಳ್ಳಲಿದೆ ಎನ್ನಲಾಗಿದೆ. ಮುಖ್ಯಕೋಚ್ ಹೃಷಿಕೇಶ್ ಕಾನಿಟ್ಕರ್ ಮತ್ತು ನಾಯಕ ಆಯುಷ್ ಮ್ಹಾತ್ರೆಯವರ ಜತೆ ಚರ್ಚೆಗೆ ಮುಂದಾಗಿದೆ.
ಆಯುಷ್ ಮ್ಹಾತ್ರೆ ಹಾಗೂ ಸೂರ್ಯವಂಶಿಯವರು ಎದುರಾಳಿ ತಂಡದ ಆಟಗಾರರ ಜತೆ ಮೈದಾನದಲ್ಲಿ ಸಂಘರ್ಷ ನಡೆಸಿರುವ ಅಂಶ ಕೂಡಾ ವಿಮರ್ಶೆಗೆ ಒಳಪಡಲಿದೆ ಎಂದು ತಿಳಿದು ಬಂದಿದೆ.