RCBಯ ಸತತ ಎರಡನೇ IPL ಪ್ರಶಸ್ತಿಯ ಹಿಂದಿನ ಸೂತ್ರಧಾರಿಗಳು ಯಾರು?
Photo Credit ; PTI
ಹೊಸದಿಲ್ಲಿ, ಜೂ. 1: IPL ಟ್ರೋಫಿಗಳನ್ನು ಮೈದಾನದಲ್ಲಿ ಗೆಲ್ಲಲಾಗುತ್ತದೆ. ಆದರೆ ಚಾಂಪಿಯನ್ಶಿಪ್ ನ ರೂಪುರೇಷೆಗಳು ಬೋರ್ಡ್ ರೂಮ್ಗಳು, ಹರಾಜಿನ ಟೇಬಲ್ ಗಳು ಹಾಗೂ ಕಾರ್ಯತಂತ್ರದ ಸಭೆಗಳಲ್ಲಿ ಮೂಡುತ್ತವೆ.
RCB ಸತತ ಪ್ರಶಸ್ತಿಗಳನ್ನು ಜಯಿಸಿ ಇತಿಹಾಸ ನಿರ್ಮಿಸುವಲ್ಲಿ ಆಡುವ ಹನ್ನೊಂದರ ಬಳಗದ ಆಚೆಗೂ ವಿಸ್ತರಿಸಿದ ದೂರದೃಷ್ಟಿಯ ಪರಿಣಾಮವಿದೆ. ಪ್ರಧಾನ ಕೋಚ್ ಆ್ಯಂಡಿ ಫ್ಲವರ್ ಅವರ ಕುಶಾಗ್ರಮತಿ, ಮೊ ಬೊಬಾಟ್ ಅವರ ದೀರ್ಘಕಾಲೀನ ಯೋಜನೆಯಿಂದ ತೊಡಗಿ ದಿನೇಶ್ ಕಾರ್ತಿಕ್ ಅವರ ಆಟಗಾರರ ನಿರ್ವಹಣೆ ಹಾಗೂ ಮಲೋಲನ್ ರಂಗರಾಜನ್ ಅವರ ಪ್ರತಿಭೆ ಗುರುತಿಸುವಿಕೆಯ ತನಕ ಎಲ್ಲವೂ ಕೆಲಸ ಮಾಡಿದೆ.
►RCBಯ ಸತತ ಪ್ರಶಸ್ತಿ ಗೆಲುವಿನ ಹಿಂದಿನ ರೂವಾರಿಗಳತ್ತ ಒಂದು ನೋಟ:
ಆ್ಯಂಡಿ ಫ್ಲವರ್ (ಮುಖ್ಯ ಕೋಚ್): 2024ರ IPLಗೂ ಮೊದಲು ಆ್ಯಂಡಿ ಫ್ಲವರ್ ಮುಖ್ಯ ಕೋಚ್ ಆಗಿ ನೇಮಕಗೊಂಡ ಬಳಿಕ RCBಯ ಅದೃಷ್ಟ ಖುಲಾಯಿಸಿದೆ. ಮೂರು ವರ್ಷಗಳಲ್ಲಿ ಎರಡು IPL ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ಆ್ಯಂಡಿ ಫ್ಲವರ್ ಆಧುನಿಕ ಕ್ರಿಕೆಟ್ನ ಶ್ರೇಷ್ಠ ಕೋಚ್ಗಳಲ್ಲಿ ಒಬ್ಬರಾಗಿದ್ದಾರೆ. ಎಲ್ಲ ಮೂರು ಮಾದರಿಯ ಕ್ರಿಕೆಟ್ನಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಇಂಗ್ಲೆಂಡ್ ತಂಡವು 2009, 2010-11 ಹಾಗೂ 2013ರಲ್ಲಿ ಮೂರು ಬಾರಿ ಆ್ಯಶಸ್ ಸರಣಿ ಗೆದ್ದಾಗ ಅವರು ಮೇಲ್ವಿಚಾರಣೆ ನಡೆಸಿದ್ದರು. ಇಂಗ್ಲೆಂಡ್ ತಂಡವು 2010ರ ಟಿ20 ವಿಶ್ವಕಪ್ನಲ್ಲಿ ತನ್ನ ಚೊಚ್ಚಲ ಜಾಗತಿಕ ಪ್ರಶಸ್ತಿಯನ್ನು ಜಯಿಸಿತ್ತು. 2012ರಲ್ಲಿ 28 ವರ್ಷಗಳ ಬಳಿಕ ಐತಿಹಾಸಿಕ ಟೆಸ್ಟ್ ಸರಣಿಯನ್ನೂ ಗೆದ್ದಿತ್ತು.
ಆ ಬಳಿಕ ಫ್ಲವರ್ ಅವರು 2023ರಲ್ಲಿ ಏಕದಿನ ವಿಶ್ವಕಪ್ ಜಯಿಸಿದ್ದ ಆಸ್ಟ್ರೇಲಿಯಾ ತಂಡದ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. 2022ರಲ್ಲಿ ಟ್ರೆಂಟ್ ರಾಕೆಟ್ಸ್ ತಂಡ ದ ಹಂಡ್ರೆಡ್ ಪ್ರಶಸ್ತಿ ಹಾಗೂ 2025ರಲ್ಲಿ RCB ಫ್ರಾಂಚೈಸಿಯು ತನ್ನ ಚೊಚ್ಚಲ IPL ಕಿರೀಟ ಧರಿಸುವಲ್ಲಿಯೂ ಮಾರ್ಗದರ್ಶನ ನೀಡಿದ್ದರು.
ಫ್ಲವರ್ ಅವರನ್ನು ಪ್ರಶಂಸಿಸಿದ RCB ನಾಯಕ ರಜತ್ ಪಾಟಿದಾರ್, ಅವರೊಬ್ಬ ಸಾರ್ವಕಾಲಿಕ ಶ್ರೇಷ್ಠ ಕೋಚ್ ಎಂದಿದ್ದಾರೆ.
‘‘ಆಟಗಾರರನ್ನು ನಿಭಾಯಿಸುವ ರೀತಿಯನ್ನು ನೋಡಿದರೆ ಅವರೊಬ್ಬ ಶ್ರೇಷ್ಠ ಕೋಚ್. ಆಟವಾಡದೇ ಇರುವ ಆಟಗಾರರು ಹಾಗೂ ಮೊದಲ IPL ಆಡುತ್ತಿರುವ ಹೊಸ ಆಟಗಾರರಿಗೆ ಸಮಾನ ಪ್ರಾಮುಖ್ಯತೆ ನೀಡುತ್ತಾರೆ. ಅವರು ಪ್ರತಿಯೊಬ್ಬ ಆಟಗಾರನೊಂದಿಗೆ ಸಾಕಷ್ಟು ಸಮಯ ಕಳೆಯುತ್ತಾರೆ. ಅವರನ್ನು ಬಣ್ಣಿಸಲು ನನ್ನಲ್ಲಿ ಪದಗಳಿಲ್ಲ. ನಾನು ನೋಡಿದ ಅತ್ಯಂತ ಶ್ರೇಷ್ಠ ಕೋಚ್ ಅವರಾಗಿದ್ದಾರೆ’’ ಎಂದರು.
►ಮೊ ಬೊಬಾಟ್ (ಕ್ರಿಕೆಟ್ ನಿರ್ದೇಶಕ): IPL-2024ಕ್ಕೂ ಮೊದಲು ಮೊ ಬೊಬಾಟ್ ಕ್ರಿಕೆಟ್ ನಿರ್ದೇಶಕರಾಗಿ RCB ತಂಡವನ್ನು ಸೇರಿದರು. ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಮಂಡಳಿಯಲ್ಲಿ ದಶಕಗಳ ಕಾಲ ಕೆಲಸ ಮಾಡಿದ ಅನುಭವಿಯಾಗಿದ್ದಾರೆ. ಬೊಬಾಟ್ ಈ ಹಿಂದೆ RCBಯ ಸಲಹೆಗಾರರಾಗಿಯೂ ಕೆಲಸ ಮಾಡಿದ್ದರು.
‘‘ಗೆಲುವಿಗೆ ಹಲವಾರು ಆಟಗಾರರ ಕೊಡುಗೆಯಿಂದ ನಮಗೆ ಖುಷಿಯಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಬಲ್ಲ ಹಲವು ಉತ್ತಮ ಆಟಗಾರರು ನಮ್ಮಲ್ಲಿದ್ದಾರೆ. ನಾವು ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಒಂದಿಬ್ಬರು ಆಟಗಾರರನ್ನು ಅವಲಂಬಿಸಿಲ್ಲ. ಇದು ನಿಜವಾಗಿಯೂ ಖುಷಿಯ ವಿಚಾರ’’ ಎಂದು ಬೊಬಾಟ್ ಹೇಳಿದ್ದಾರೆ.
►ದಿನೇಶ್ ಕಾರ್ತಿಕ್ (ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್):
RCBಯ ವಿಕೆಟ್ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ, ತನ್ನ ಬೆಳವಣಿಗೆಗೆ ದಿನೇಶ್ ಕಾರ್ತಿಕ್ ಕಾರಣ ಎಂದು ಶ್ಲಾಘಿಸಿದರು.
‘‘ಅವರು ನನ್ನೊಳಗಿನ ಸಾಮರ್ಥ್ಯವನ್ನು ನೋಡಿದರು. ಉಳಿದವರು ನನ್ನಲ್ಲಿನ ನ್ಯೂನತೆಗಳನ್ನು ಹುಡುಕುತ್ತಿದ್ದರು. ಆದರೆ ಆ ವ್ಯಕ್ತಿ ನನ್ನ ಸಾಮರ್ಥ್ಯವನ್ನು ಕಂಡರು’’ ಎಂದರು.
ತೆರೆಯ ಹಿಂದೆ ಕಾರ್ತಿಕ್ ಜೊತೆಗೆ ಕೆಲಸ ಮಾಡಿದ್ದ ವೆಂಕಟೇಶ್ ಅಯ್ಯರ್, ಪಾಟಿದಾರ್ ಗಾಯಗೊಂಡಾಗ ಅವರ ಅನುಪಸ್ಥಿತಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಔಟಾಗದೆ 73 ರನ್ ಗಳಿಸಿದ್ದರು. ಆ ಬಳಿಕ ಅವರು ತಂಡದಲ್ಲಿ ಖಾಯಂ ಸ್ಥಾನ ಪಡೆದರು.
►ಎಂ. ರಂಗರಾಜನ್ (ಸ್ಪಿನ್ ಬೌಲಿಂಗ್ ಕೋಚ್, RCB ಮಹಿಳಾ ತಂಡದ ಮುಖ್ಯ ಕೋಚ್):
ಆ್ಯಂಡಿ ಫ್ಲವರ್ ಹಾಗೂ ಮೊ ಬೊಬಾಟ್ ಅವರು RCBಯ ದೃಷ್ಟಿಕೋನವನ್ನು ರೂಪಿಸಿದರು. ಎಂ. ರಂಗರಾಜನ್ ಇದಕ್ಕೆ ಬುನಾದಿ ಹಾಕಿಕೊಟ್ಟರು.
ತಮಿಳುನಾಡಿನ ಮಾಜಿ ಆಫ್ಸ್ಪಿನ್ನರ್ ರಂಗರಾಜನ್ ಭಾರತೀಯ ಕ್ರಿಕೆಟ್ನ ಗೌರವಾನ್ವಿತ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. RCBಯ ಸ್ಕೌಟಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಆಗಿ ಫ್ರಾಂಚೈಸಿಯ ದೀರ್ಘಕಾಲೀನ ಯೋಜನೆಗೆ ಹೊಂದುವ ಆಟಗಾರರನ್ನು ಗುರುತಿಸಿದ್ದರು.
ದೇಶೀಯ ಕ್ರಿಕೆಟ್ ಅನ್ನು ಆಳವಾಗಿ ಅರ್ಥೈಸಿಕೊಂಡಿರುವ ರಂಗರಾಜನ್, RCB ತಂಡ ಶಕ್ತಿಯುತವಾಗಲು ಪ್ರಮುಖ ಪಾತ್ರವಹಿಸಿದ್ದರು. ತಂಡದ ಅಥ್ಲೆಟಿಕ್ಸ್ ಗುಣಮಟ್ಟ ಹೆಚ್ಚಿಸಲು ಫೀಲ್ಡಿಂಗ್ ವಿಭಾಗದಲ್ಲೂ ಕೆಲಸ ಮಾಡಿದ್ದಾರೆ.
ಸತತ IPL ಪ್ರಶಸ್ತಿಗಳನ್ನು ಗೆಲ್ಲುವ ಸಾಮರ್ಥ್ಯವಿರುವ ಸಮತೋಲಿತ ತಂಡವನ್ನು ಕಟ್ಟುವಲ್ಲಿ ಪರದೆಯ ಹಿಂದೆ ರಂಗರಾಜನ್ ನಿರ್ಣಾಯಕ ಕೊಡುಗೆ ನೀಡಿದ್ದಾರೆ. RCBಯ ಮಹಿಳಾ ತಂಡದ ಮುಖ್ಯ ಕೋಚ್ ಕೂಡ ಆಗಿದ್ದಾರೆ.
►ಓಂಕಾರ್ ಸಾಳ್ವಿ (ಬೌಲಿಂಗ್ ಕೋಚ್):
IPL ಟ್ರೋಫಿ ಗೆದ್ದ ಬಳಿಕ ನಾಯಕ ರಜತ್ ಪಾಟಿದಾರ್ ಅವರು RCBಯ ಬೌಲಿಂಗ್ ದಾಳಿಯಲ್ಲಿ ಬದಲಾವಣೆ ತಂದ ಬೌಲಿಂಗ್ ಕೋಚ್ ಓಂಕಾರ್ ಸಾಳ್ವಿ ಅವರನ್ನು ಬಾಯ್ತುಂಬ ಹೊಗಳಿದರು.
‘‘ನಾನು ಮೊದಲ ರಣಜಿ ಟ್ರೋಫಿ ಋತುವನ್ನು ಆಡಲು ಆರಂಭಿಸಿದಾಗಲೇ ಸಾಳ್ವಿ ಅವರನ್ನು ನೋಡಿದ್ದೇನೆ. ಆ ಬಳಿಕ ಅವರನ್ನು ಹತ್ತಿರದಿಂದ ಗಮನಿಸಿದ್ದೇನೆ. ಅವರು ಪ್ರತಿಯೊಬ್ಬ ಬೌಲರ್ನೊಂದಿಗೆ ಸಾಕಷ್ಟು ಸಮಯ ಕಳೆಯುತ್ತಾರೆ. ಬಹುಶಃ ಇದು ಪ್ರತಿ ಬೌಲರ್ಗೆ ನೆರವಾಗಿರಬಹುದು’’ ಎಂದು ಪಾಟಿದಾರ್ ಹೇಳಿದ್ದಾರೆ.