×
Ad

ಕಳೆದ ವರ್ಷ ಕಾಲ್ತುಳಿತಕ್ಕೆ ಬಲಿಯಾದವರಿಗೆ 2026ರ IPL ಟ್ರೋಫಿ ಅರ್ಪಣೆ: ಪಾಟಿದಾರ್

Update: 2026-06-01 21:42 IST

ರಜತ್ ಪಾಟಿದಾರ್ | Photo Credit : @IPL 

ಅಹ್ಮದಾಬಾದ್, ಜೂ. 1: ಕಳೆದ ವರ್ಷ ಎಂ. ಚಿನ್ನಸ್ವಾಮಿ ಸ್ಟೇಡಿಯಂನ ಹೊರಗೆ ನಡೆದ ತಂಡದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ ಅಭಿಮಾನಿಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದಿರುವ ಎರಡನೇ IPL ಪ್ರಶಸ್ತಿಯನ್ನು ಸಮರ್ಪಿಸುವುದಾಗಿ ನಾಯಕ ರಜತ್ ಪಾಟಿದಾರ್ ಹೇಳಿದ್ದಾರೆ.

RCB ಮತ್ತೊಮ್ಮೆ ಚಾಂಪಿಯನ್ಶಿಪ್ ಟ್ರೋಫಿ ಗೆದ್ದ ತಕ್ಷಣ ಅಹ್ಮದಾಬಾದ್ ನ ಆಕಾಶದಲ್ಲಿ ಸಿಡಿಮದ್ದುಗಳು ಸಿಡಿದವು ಹಾಗೂ ಸಾವಿರಾರು RCB ಬೆಂಬಲಿಗರು ಸಂಭ್ರಮಾಚರಣೆ ಮಾಡಿದರು.

‘‘ನಾವು ಈ ಟ್ರೋಫಿಯನ್ನು ನಮ್ಮ ಅಭಿಮಾನಿಗಳಿಗೆ ಅರ್ಪಿಸುತ್ತೇವೆ. ನಿಜವಾಗಿಯೂ ಈ ಟ್ರೋಫಿಯು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಲ್ಲುತ್ತದೆ. ನಾನು ಯಾವಾಗಲೂ ಈ ಟ್ರೋಫಿಯನ್ನು ಅವರಿಗೆ ಸಮರ್ಪಿಸಲು ಇಷ್ಟಪಡುತ್ತೇನೆ. ಆ ಭಾವನೆಯನ್ನು ವ್ಯಕ್ತಪಡಿಸಲು ನನ್ನಲ್ಲಿ ಪದಗಳಿಲ್ಲ’’ ಎಂದು ಗುಜರಾತ್ ತಂಡವನ್ನು ಐದು ವಿಕೆಟ್ ಗಳಿಂದ ಮಣಿಸಿ ಸತತ IPL ಕಿರೀಟ ಧರಿಸಿದ ನಂತರ ಪಾಟಿದಾರ್ ಹೇಳಿದರು.

ಕಳೆದ ವರ್ಷ ಸುದೀರ್ಘ ಸಮಯದ ನಂತರ RCB IPL ಟ್ರೋಫಿ ಗೆದ್ದು ತಾಯ್ನಾಡಿಗೆ ಮರಳಿದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನ ಹೊರಗೆ ಸಾವಿರಾರು ಅಭಿಮಾನಿಗಳು ಸೇರಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತದ ಘಟನೆಯಲ್ಲಿ 11 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. RCBಯ ಐತಿಹಾಸಿಕ ಗೆಲುವು ಟೂರ್ನಿಯ ಇತಿಹಾಸದಲ್ಲಿ ಕಪ್ಪು ದಿನವಾಗಿ ಪರಿವರ್ತಿತವಾಗಿತ್ತು. ಜನರನ್ನು ನಿರ್ವಹಿಸಿದ ರೀತಿ ಹಾಗೂ ಹೊಣೆಗಾರಿಕೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News