IPL 2025 | ಪಂಜಾಬಿನಲ್ಲಿ ಬೆಂಗಳೂರು 'ಕಿಂಗ್'
PC X@IPL
ಮುಲ್ಲನ್ಪುರ, ಎ.20: ಆರಂಭಿಕ ಆಟಗಾರ ವಿರಾಟ್ ಕೊಹ್ಲಿ(ಔಟಾಗದೆ 73, 54 ಎಸೆತ, 7 ಬೌಂಡರಿ,1 ಸಿಕ್ಸರ್)ಹಾಗೂ ದೇವದತ್ತ ಪಡಿಕ್ಕಲ್(61 ರನ್, 35 ಎಸೆತ, 5 ಬೌಂಡರಿ, 4 ಸಿಕ್ಸರ್)ಅರ್ಧಶತಕದ ಕೊಡುಗೆ, ಕೃನಾಲ್ ಪಾಂಡ್ಯ(2-25) ನೇತೃತ್ವದ ಬೌಲರ್ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು 7 ವಿಕೆಟ್ಗಳ ಅಂತರದಿಂದ ಸದೆಬಡಿದಿದೆ. ಬೆಂಗಳೂರಿನಲ್ಲಿ ಮಳೆಬಾಧಿತ ಪಂದ್ಯದಲ್ಲಿನ ಸೋಲಿಗೆ ತಕ್ಕ ಸೇಡು ತೀರಿಸಿಕೊಂಡಿದೆ.
ಎಂ.ವೈ.ಎಸ್.ಇಂಟರ್ನ್ಯಾಶನಲ್ ಕ್ರೀಡಾಂಗಣದಲ್ಲಿ ರವಿವಾರ ನಡೆದ 37ನೇ ಐಪಿಎಲ್ ಪಂದ್ಯದಲ್ಲಿ ಗೆಲ್ಲಲು 158 ರನ್ ಗುರಿ ಪಡೆದಿದ್ದ ಆರ್ಸಿಬಿ ತಂಡವು 18.5 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 159 ರನ್ ಗಳಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಆತಿಥೇಯ ಪಂಜಾಬ್ ತಂಡವನ್ನು ಆರ್ಸಿಬಿ ಬೌಲರ್ಗಳು 6 ವಿಕೆಟ್ಗಳ ನಷ್ಟಕ್ಕೆ 157 ರನ್ ನಿಯಂತ್ರಿಸಿ ತಂಡದ ಗೆಲುವಿಗೆ ವೇದಿಕೆ ಒದಗಿಸಿಕೊಟ್ಟರು.
ಗೆಲ್ಲಲು ಸುಲಭ ಸವಾಲು ಬೆನ್ನಟ್ಟಿದ ಆರ್ಸಿಬಿ ತಂಡ ಅರ್ಷದೀಪ್ ಸಿಂಗ್ ಬೌಲಿಂಗ್ನಲ್ಲಿ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ (1 ರನ್) ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆಗ 2ನೇ ವಿಕೆಟ್ಗೆ 103 ರನ್ ಜೊತೆಯಾಟ ನಡೆಸಿದ ಕೊಹ್ಲಿ ಹಾಗೂ ದೇವದತ್ತ ಪಡಿಕ್ಕಲ್ ತಂಡವನ್ನು ಆಧರಿಸಿದರು. ಪಡಿಕ್ಕಲ್ ಕೇವಲ 35 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ಗಳ ಸಹಿತ 61 ರನ್ ಸಿಡಿಸಿದರು.
ಪೋಷಕನ ಪಾತ್ರ ನಿರ್ವಹಿಸಿದ ಕೊಹ್ಲಿ 15ನೇ ಓವರ್ನಲ್ಲಿ ತನ್ನ ದಾಖಲೆಯ ಅರ್ಧಶತಕ ಪೂರೈಸಿದರು. ನಾಯಕ ರಜತ್ ಪಾಟಿದಾರ್(12 ರನ್)ಅವರೊಂದಿಗೆ 34 ರನ್ ಜೊತೆಯಾಟ ನಡೆಸಿದ ಕೊಹ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
19ನೇ ಓವರ್ನಲ್ಲಿ ನೇಹಾಲ್ ವಧೇರ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಜಿತೇಶ್ ಶರ್ಮಾ(ಔಟಾಗದೆ 11) ಇನ್ನೂ 7 ಎಸೆತಗಳು ಬಾಕಿ ಇರುವಾಗಲೇ ಆರ್ಸಿಬಿಗೆ ಗೆಲುವು ತಂದರು.
ಈ ಗೆಲುವಿನ ಮೂಲಕ ಆರ್ಸಿಬಿ 8 ಪಂದ್ಯಗಳಲ್ಲಿ 10 ಅಂಕ ಕಲೆ ಹಾಕಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.
*ಪಂಜಾಬ್ 1576: ಇದಕ್ಕೂ ಮೊದಲು ಆರ್ಸಿಬಿ ಸ್ಪಿನ್ನರ್ಗಳಾದ ಕೃನಾಲ್ ಪಾಂಡ್ಯ(2-25)ಹಾಗೂ ಸುಯಶ್ ಶರ್ಮಾ(2-26)ಮಧ್ಯಮ ಓವರ್ನಲ್ಲಿ ಪಂಜಾಬ್ ಕಿಂಗ್ಸ್ ರನ್ ಓಟಕ್ಕೆ ಬ್ರೇಕ್ ಹಾಕಿದರು. ಬೌಲಿಂಗ್ನಲ್ಲಿ ಆಲ್ರೌಂಡ್ ಪ್ರದರ್ಶನ ತೋರಿದ ಆರ್ಸಿಬಿ ತಂಡವು ಎದುರಾಳಿ ತಂಡವನ್ನು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ಗೆ ನಿಯಂತ್ರಿಸುವಲ್ಲಿ ಶಕ್ತವಾಯಿತು.
ಟಾಸ್ ಜಯಿಸಿದ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಪಂಜಾಬ್ ತಂಡವು ಪವರ್ ಪ್ಲೇನಲ್ಲಿ ಅಬ್ಬರಿಸಿದ್ದು, ಪ್ರಿಯಾಂಕ್ ಆರ್ಯ(22 ರನ್,15 ಎಸೆತ) ಹಾಗೂ ಪ್ರಭ್ಸಿಮ್ರನ್ ಸಿಂಗ್(33 ರನ್,17 ಎಸೆತ) 4.2 ಓವರ್ಗಳಲ್ಲಿ 42 ರನ್ ಸೇರಿಸಿದರು. ಆರ್ಯ ವಿಕೆಟನ್ನು ಪಡೆದ ಕೃನಾಲ್ ಪಾಂಡ್ಯ ಈ ಜೋಡಿಯನ್ನು ಬೇರ್ಪಡಿಸಿದರು.
ಪ್ರಸಕ್ತ ಐಪಿಎಲ್ನಲ್ಲಿ 3 ಅರ್ಧಶತಕ ಗಳಿಸಿರುವ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್(6ರನ್) ಮತ್ತೊಮ್ಮೆ ವೈಫಲ್ಯ ಕಂಡರು. ನೇಹಾಲ್ ವಧೇರ (5 ರನ್) ಅನಗತ್ಯವಾಗಿ ರನೌಟಾದರು. ಸುಯಶ್ ಶರ್ಮಾ ಅವರು ಜೋಸ್ ಇಂಗ್ಲಿಸ್(29 ರನ್,17 ಎಸೆತ)ಹಾಗೂ ಮಾರ್ಕಸ್ ಸ್ಟೋಯಿನಿಸ್(1 ರನ್) ವಿಕೆಟ್ ಕಬಳಿಸಿದಾಗ ಪಂಜಾಬ್ 14ನೇ ಓವರ್ನಲ್ಲಿ 114 ರನ್ಗೆ 6ನೇ ವಿಕೆಟ್ ಕಳೆದುಕೊಂಡಿತು. ಪಂಜಾಬ್ ಮಧ್ಯಮ ಓವರ್ಗಳಲ್ಲಿ ಕೇವಲ 67 ರನ್ ಗಳಿಸಿ 5 ವಿಕೆಟ್ಗಳನ್ನು ಕಳೆದುಕೊಂಡಿತು.
ಶಶಾಂಕ್ ಸಿಂಗ್(ಔಟಾಗದೆ 31,33 ಎಸೆತ) ಹಾಗೂ ಮಾರ್ಕೊ ಜಾನ್ಸನ್(ಔಟಾಗದೆ 25, 20 ಎಸೆತ) ಇನಿಂಗ್ಸ್ ಅಂತ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಯತ್ನಿಸಿದರು. ಆದರೆ ಭುವನೇಶ್ವರ್ ಹಾಗೂ ಹೇಝಲ್ವುಡ್ ಇದಕ್ಕೆ ಅವಕಾಶ ನೀಡಲಿಲ್ಲ. ಇನಿಂಗ್ಸ್ ಅಂತ್ಯದಲ್ಲಿ ಜಾನ್ಸನ್ ಸಿಕ್ಸರ್ ಸಿಡಿಸಿದರೂ ಅರ್ಸಿಬಿ ಮೇಲುಗೈ ಸಾಧಿಸಿತು.
ಸಂಕ್ಷಿಪ್ತ ಸ್ಕೋರ್
ಪಂಜಾಬ್ ಕಿಂಗ್ಸ್: 20 ಓವರ್ಗಳಲ್ಲಿ 157/6
(ಪ್ರಭ್ಸಿಮ್ರನ್ ಸಿಂಗ್ 33, ಶಶಾಂಕ್ ಸಿಂಗ್ ಔಟಾಗದೆ 31, ಇಂಗ್ಲಿಸ್ 29, ಜಾನ್ಸನ್ ಔಟಾಗದೆ 25, ಕೃನಾಲ್ ಪಾಂಡ್ಯ 2-25, ಸುಯಶ್ ಶರ್ಮಾ 2-26)
ಆರ್ಸಿಬಿ: 18.5 ಓವರ್ಗಳಲ್ಲಿ 159/3
(ವಿರಾಟ್ ಕೊಹ್ಲಿ ಔಟಾಗದೆ 73, ದೇವದತ್ತ ಪಡಿಕ್ಕಲ್ 61, ಅರ್ಷದೀಪ್ ಸಿಂಗ್ 1-26, ಹರ್ಪ್ರೀತ್ 1-27,ಚಹಾಲ್ 1-36)
ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ.