×
Ad

ಟಿ-20 ಕ್ರಿಕೆಟ್‌ನಲ್ಲಿ 8 ವಿಕೆಟ್ ಗೊಂಚಲು: ವಿಶ್ವ ದಾಖಲೆ ನಿರ್ಮಿಸಿದ ಭೂತಾನ್ ಬೌಲರ್ ಸೋನಮ್

Update: 2025-12-29 20:53 IST

ಸೋನಮ್ ಯೆಶೆ | Photo Credit : X


ಹೊಸದಿಲ್ಲಿ: ಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 8 ವಿಕೆಟ್‌ಗಳ ಗೊಂಚಲು ಕಬಳಿಸಿದ ಮೊದಲ ಬೌಲರ್ ಎನಿಸಿಕೊಂಡಿರುವ ಭೂತಾನ್‌ನ ಸೋನಮ್ ಯೆಶೆ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದರು. 22ರ ವಯಸ್ಸಿನ ಎಡಗೈ ಸ್ಪಿನ್ನರ್ ಸೋನಮ್ ಅವರು ಗೆಲೆಫುವಿನಲ್ಲಿ ನಡೆದ ಮ್ಯಾನ್ಮಾರ್ ವಿರುದ್ದದ ಮೂರನೇ ಟ್ವೆಂಟಿ-20 ಪಂದ್ಯದ ವೇಳೆ ಈ ಮೈಲಿಗಲ್ಲು ತಲುಪಿದರು. ಸ್ಮರಣೀಯ ಸ್ಪೆಲ್ ಎಸೆದಿರುವ ಸೋನಮ್ ಟಿ-20 ಕ್ರಿಕೆಟ್‌ನಲ್ಲಿ ಅತ್ಯಂತ ಅಸಾಧಾರಣ ಸಾಧನೆ ಮಾಡಿದರು.

ಸೋನಮ್ 4 ಓವರ್‌ಗಳಲ್ಲಿ 1.80ರ ಇಕಾನಮಿ ರೇಟ್‌ನಲ್ಲಿ ಮೇಡನ್ ಸಹಿತ 7 ರನ್ ನೀಡಿ 8 ವಿಕೆಟ್‌ಗಳನ್ನು ಪಡೆದರು. ಸೋನಮ್ ಅವರ ಸ್ಪಿನ್ ಮೋಡಿಗೆ ತತ್ತರಿಸಿದ ಮ್ಯಾನ್ಮಾರ್ ತಂಡ 9.2 ಓವರ್‌ಗಳಲ್ಲಿ ಕೇವಲ 45 ರನ್ ಗಳಿಸಿ ಆಲೌಟಾಯಿತು. ಭೂತಾನ್ 82 ರನ್‌ಗಳ ಅಂತರದಿಂದ ಜಯ ದಾಖಲಿಸಿತು. ಈ ಫಲಿತಾಂಶದಿಂದ ಭೂತಾನ್ ತಂಡ ಐದು ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಪಡೆದು ಪ್ರಾಬಲ್ಯ ಸಾಧಿಸಿತು.

ಸೋನಮ್‌ಗಿಂತ ಮೊದಲು ಪುರುಷರ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಮಲೇಶ್ಯದ ಇದ್ರಸ್ 2023ರಲ್ಲಿ ಚೀನಾದ ವಿರುದ್ಧ 8 ರನ್‌ಗೆ 7 ವಿಕೆಟ್‌ಗಳನ್ನು ಉರುಳಿಸಿದ್ದರು. 2025ರಲ್ಲಿ ಭೂತಾನ್ ವಿರುದ್ಧ ಬಹರೈನ್‌ನ ಅಲಿ ದಾವೂದ್ 19 ರನ್‌ಗೆ 7 ವಿಕೆಟ್‌ಗಳನ್ನು ಪಡೆದಿದ್ದಾರೆ.

2003ರ ಡಿ.3ರಂದು ಜನಿಸಿರುವ ಸೋನಮ್ ಅಂಡರ್-19 ಕ್ರಿಕೆಟ್‌ನಲ್ಲಿ ಆಡುವ ಮೂಲಕ ಭೂತಾನ್ ಕ್ರಿಕೆಟ್ ತಂಡದಲ್ಲಿ ಕಾಣಿಸಿಕೊಂಡರು. 2022ರ ಜುಲೈನಲ್ಲಿ ಹಿರಿಯರ ಕ್ರಿಕೆಟ್ ತಂಡದಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದರು. ಎಡಗೈ ಸ್ಪಿನ್ನರ್ ಆಗಿರುವ ಸೋನಮ್ ಬಲಗೈ ಬ್ಯಾಟರ್ ಕೂಡ ಆಗಿದ್ದಾರೆ.

ಮಲೇಶ್ಯ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ ನಂತರ ಸೋನಮ್ 34 ಪಂದ್ಯಗಳಲ್ಲಿ 37 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ 34 ಪಂದ್ಯಗಳಲ್ಲಿ ಕೇವಲ 37 ರನ್ ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News