Brisbane International ಟೆನಿಸ್ ಟೂರ್ನಿ | ಸತತ ಮೂರನೇ ಬಾರಿ ಸಬಲೆಂಕಾ ಫೈನಲ್ ಗೆ
ಸಬಲೆಂಕಾ ಝೆಕ್ | Photo Credit : AP \ PTI
ಬ್ರಿಸ್ಬೇನ್, ಜ.10: ಬೆಲಾರುಸ್ ಆಟಗಾರ್ತಿ ಆರ್ಯನಾ ಸಬಲೆಂಕಾ ಝೆಕ್ ಆಟಗಾರ್ತಿ ಕರೊಲಿನಾ ಮುಚೋವಾರನ್ನು ನೇರ ಸೆಟ್ ಗಳ ಅಂತರದಿಂದ ಮಣಿಸುವ ಮೂಲಕ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ಸತತ ಮೂರನೇ ಬಾರಿ ಫೈನಲ್ ಗೆ ಪ್ರವೇಶಿಸಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಟೂರ್ನಿ ಆರಂಭವಾಗಲು ಇನ್ನೊಂದು ವಾರ ಬಾಕಿ ಇರುವಾಗ ಸಬಲೆಂಕಾ ಈ ಸಾಧನೆ ಮಾಡಿದ್ದಾರೆ.
ಶನಿವಾರ 89 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ನಲ್ಲಿ ಸಬಲೆಂಕಾ ಅವರು ಮುಚೋವಾರನ್ನು 6-3, 6-4 ನೇರ ಸೆಟ್‌ಗಳ ಅಂತರದಿಂದ ಸದೆಬಡಿದರು.
ಸಬಲೆಂಕಾ ಅವರು ಹಿಂದಿನ ಮೂರು ಮುಖಾಮುಖಿಗಳಲ್ಲಿ ಮುಚೋವಾ ವಿರುದ್ಧ ಸೋತಿದ್ದರು. ಇಂದಿನ ಪಂದ್ಯದಲ್ಲಿ ಅವರು ಉತ್ತಮ ಟಚ್‌ನಲ್ಲಿದ್ದಂತೆ ಕಾಣಿಸಿಕೊಂಡರು.
‘‘ನಾನು ಈ ಹಿಂದೆ ಹಲವು ಬಾರಿ ಮುಚೋವಾ ವಿರುದ್ಧದ ಪಂದ್ಯಗಳಲ್ಲಿ ಪರದಾಟ ನಡೆಸಿದ್ದೆ. ಇಂದು ಆರಂಭದಲ್ಲೇ ಪಂದ್ಯದತ್ತ ಗಮನ ಹರಿಸಿದೆ. ಉತ್ತಮ ಟೆನಿಸ್ ಆಡಲು ಶಕ್ತಳಾಗಿ ಹೆಚ್ಚಿನ ಒತ್ತಡ ಹೇರಿದೆ. ನೇರ ಸೆಟ್‌ಗಳಿಂದ ಜಯಶಾಲಿಯಾದೆ’’ ಎಂದು ಸಬಲೆಂಕಾ ಹೇಳಿದರು.
‘‘ವಿಶ್ವದ ಅಗ್ರ-10ರಲ್ಲಿ ಸ್ಥಾನ ಪಡೆದ ಏಳು ಆಟಗಾರ್ತಿಯರು ಈ ಪಂದ್ಯಾವಳಿಯಲ್ಲಿ ಆಡಿದ್ದು, ಇದು ಜನವರಿ 18ರಿಂದ ಮೆಲ್ಬರ್ನ್‌ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್‌ಗೆ ತಯಾರಿ ನಡೆಸಲು ಸೂಕ್ತವಾಗಿದೆ. ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಜಯಶಾಲಿಯಾಗುವ ಗುರಿ ಇಟ್ಟುಕೊಂಡಿದ್ದೇನೆ’’ ಎಂದು 27ರ ಹರೆಯದ ಸಬಲೆಂಕಾ ಹೇಳಿದರು.
ಹಾಲಿ ಚಾಂಪಿಯನ್ ಆಗಿರುವ ಸಬಲೆಂಕಾ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ ಅಥವಾ ಉಕ್ರೇನ್ ನ ಮಾರ್ಟಾ ಕೊಸ್ಟ್ಯುಕ್ ಅವರನ್ನು ಎದುರಿಸಲಿದ್ದಾರೆ.