×
Ad

ಕೋಚ್ ಜಾನ್ ಝೆಲೆಝ್ನಿ ನಂಟು ಕಡಿದುಕೊಂಡ ನೀರಜ್ ಚೋಪ್ರಾ

Update: 2026-01-10 21:23 IST

ನೀರಜ್ ಚೋಪ್ರಾ | Photo Credit : PTI  

ಹೊಸದಿಲ್ಲಿ, ಜ.10: ‘‘ಝೆಕ್‌ನ ಜಾವೆಲಿನ್ ದಂತಕತೆ ಜಾನ್ ಝೆಲೆಝ್ನಿ ಅವರಿಂದ ಬೇರ್ಪಡುತ್ತಿದ್ದೇನೆ’’ ಎಂದು ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಶನಿವಾರ ಘೋಷಿಸಿದ್ದಾರೆ.

ಚೋಪ್ರಾ ಅವರು 2024ರ ಕೊನೆಯಲ್ಲಿ ಝೆಲೆಝ್ನಿ ಅವರಿಂದ ತರಬೇತಿಯನ್ನು ಪಡೆಯಲು ಆರಂಭಿಸಿದ್ದು, ಇದೀಗ ಇಬ್ಬರೂ ಬೇರ್ಪಡಲು ಒಪ್ಪಿಕೊಂಡಿದ್ದಾರೆ.

ಝೆಲೆಝ್ನಿ ಅವರಿಂದ ಬೇರ್ಪಡಲು ಕಾರಣವೇನೆಂದು ಚೋಪ್ರಾ ವಿವರ ನೀಡಿಲ್ಲ. ಕಳೆದ ವರ್ಷ ಝೆಲೆಝ್ನಿ ಅವರ ಮಾರ್ಗದರ್ಶನದಲ್ಲಿ ಚೋಪ್ರಾ ಅವರು ವೃತ್ತಿಜೀವನದಲ್ಲಿ ಮೊದಲ ಬಾರಿಗೆ 90 ಮೀಟರ್‌ಗೂ ಅಧಿಕ ದೂರ ಜಾವೆಲಿನ್ ಎಸೆದಿದ್ದರು.

2025ರ ದೋಹಾ ಡೈಮಂಡ್ ಲೀಗ್‌ನಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಲು ಆರಂಭಿಸಿದ್ದರು. ಆಗ ಚೋಪ್ರಾ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ 90 ಮೀಟರ್ ದೂರಕ್ಕೆ ಜಾವೆಲಿನ್ ಎಸೆದಿದ್ದರು.

‘‘ಜಾನ್ ಜೊತೆ ಕೆಲಸ ಮಾಡುವುದರಿಂದ ನನ್ನ ಕಣ್ಣುಗಳು ಹಲವು ಹೊಸ ವಿಚಾರಗಳಿಗೆ ತೆರೆಯಿತು. ತಂತ್ರ, ಲಯ ಹಾಗೂ ಚಲನೆಯ ಬಗ್ಗೆ ಅವರು ಯೋಚಿಸುವ ರೀತಿ ಅದ್ಭುತವಾಗಿದೆ. ನಾವು ಒಟ್ಟಿಗೆ ಇದ್ದ ಪ್ರತಿಯೊಂದು ಅವಧಿಯಲ್ಲೂ ನಾನು ಬಹಳಷ್ಟು ಕಲಿತಿದ್ದೇನೆ’’ ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.

ಝೆಲೆಝ್ನಿ ಅವರು ಮೂರು ಒಲಿಂಪಿಕ್ಸ್ ಚಿನ್ನದ ಪದಕಗಳು (1992, 1996, 2000) ಹಾಗೂ ಮೂರು ಬಾರಿ ವಿಶ್ವ ಚಾಂಪಿಯನ್‌ ಶಿಪ್‌ ಗಳು (1993, 1995, 2001) ಜಯಿಸಿದ್ದರು. 1988ರಲ್ಲಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದರು. 98.48 ಮೀಟರ್ ವಿಶ್ವ ದಾಖಲೆ ಸೇರಿದಂತೆ ಸಾರ್ವಕಾಲಿಕ ಒಂಬತ್ತು ಅತ್ಯುತ್ತಮ ಜಾವೆಲಿನ್ ಎಸೆತಗಳಲ್ಲಿ ಐದು ದಾಖಲೆಗಳನ್ನು ತಮ್ಮ ಹೆಸರಲ್ಲಿ ಹೊಂದಿದ್ದಾರೆ. ನೀರಜ್ ಜೊತೆ ಕೈಜೋಡಿಸುವ ಮೊದಲು ಝೆಕ್‌ನ ಜಾವೆಲಿನ್ ಥ್ರೋವರ್ ಜಾಕಬ್ ವಾಡ್ಲೆಚ್ ಅವರೊಂದಿಗೆ ಕೆಲಸ ಮಾಡಿದ್ದರು.

‘‘ನೀರಜ್‌ ರಂತಹ ಕ್ರೀಡಾಪಟುವಿನೊಂದಿಗೆ ಕೆಲಸ ಮಾಡುವುದು ಒಳ್ಳೆಯ ಅನುಭವವಾಗಿತ್ತು. ಅವರೊಂದಿಗೆ ಒಟ್ಟಿಗೆ ಕೆಲಸ ಮಾಡಲು ಸಾಧ್ಯವಾದಾಗ ನನಗೆ ತುಂಬಾ ಖುಷಿಯಾಯಿತು. ಅವರು ಮೊದಲ ಬಾರಿಗೆ 90 ಮೀಟರ್ ತಡೆಗೋಡೆ ಮುರಿಯಲು ಸಾಧ್ಯವಾಯಿತು. ವಿಶ್ವ ಚಾಂಪಿಯನ್‌ಶಿಪ್ ಹೊರತುಪಡಿಸಿ ಉಳಿದ ಟೂರ್ನಿಗಳಲ್ಲಿ ಎರಡನೇ ಸ್ಥಾನ ಪಡೆದರು. ಇದು ಕಳಪೆ ದಾಖಲೆಯಲ್ಲ. ದುರದೃಷ್ಟವಶಾತ್ ಟೋಕಿಯೊಗೆ ತೆರಳಲು 12 ದಿನಗಳ ಮೊದಲು ಬೆನ್ನುನೋವಿಗೆ ಒಳಗಾದದ್ದು ಅವರ ಅವಕಾಶಗಳ ಮೇಲೆ ಪರಿಣಾಮ ಬೀರಿತು’’ ಎಂದು ಝೆಲೆಝ್ನಿ ಹೇಳಿದ್ದಾರೆ.

‘‘2026ರಲ್ಲಿ ಉತ್ತಮ ಸಾಧನೆ ಮಾಡಲು ಎದುರು ನೋಡುತ್ತಿದ್ದೇನೆ. ನವೆಂಬರ್ ಆರಂಭದಲ್ಲಿ ನಾನು ತಯಾರಿಯನ್ನು ಆರಂಭಿಸಿದ್ದೇನೆ. ಆರೋಗ್ಯವಾಗಿರುವುದು ಎಂದಿನಂತೆ ನನ್ನ ಮುಖ್ಯ ಉದ್ದೇಶ. ಶೀಘ್ರದಲ್ಲೇ ಸ್ಪರ್ಧಿಸಲು ಉತ್ಸುಕನಾಗಿದ್ದೇನೆ. ವಿಶೇಷವಾಗಿ 2027ರ ವಿಶ್ವ ಚಾಂಪಿಯನ್‌ಶಿಪ್ ಹಾಗೂ 2028ರ ಒಲಿಂಪಿಕ್ಸ್ ಕ್ರೀಡಾಕೂಟಗಳತ್ತ ಗಮನ ಹರಿಸುತ್ತಿದ್ದೇನೆ’’ ಎಂದು ನೀರಜ್ ಹೇಳಿದ್ದಾರೆ.

ನೀರಜ್ ಚೋಪ್ರಾ ಅವರು ಕಳೆದ ವರ್ಷ ದೋಹಾ ಡೈಮಂಡ್ ಲೀಗ್‌ನಲ್ಲಿ 90 ಮೀಟರ್ ದೂರಕ್ಕೆ ಜಾವೆಲಿನ್ ಎಸೆದ ಬಳಿಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎಂಟನೇ ಸ್ಥಾನ ಪಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News