Malaysia Open | ಬ್ಯಾಡ್ಮಿಂಟನ್ ಪಂದ್ಯಾವಳಿ ಸೆಮಿ ಫೈನಲ್ ನಲ್ಲಿ ಸೋಲುಂಡ ಸಿಂಧು
ಪಿ.ವಿ. ಸಿಂಧು | Photo Credit : NDTV
ಕೌಲಾಲಂಪುರ, ಜ.10: ಭಾರತೀಯ ಶಟ್ಲರ್ ಪಿ.ವಿ. ಸಿಂಧು ವರ್ಷದ ಮೊದಲ ಮಲೇಶ್ಯ ಓಪನ್ ಸೂಪರ್–1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅಂತಿಮ ನಾಲ್ಕರ ಹಂತದಲ್ಲೇ ತಮ್ಮ ಅಭಿಯಾನವನ್ನು ಅಂತ್ಯಗೊಳಿಸಿದ್ದಾರೆ.
ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಸೆಮಿ ಫೈನಲ್‌ನಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಅವರು ಚೀನಾದ ವಾಂಗ್ ಝಿಹಿ ವಿರುದ್ಧ 16-21, 15-21 ನೇರ ಗೇಮ್ ಗಳ ಅಂತರದಿಂದ ಸೋಲುಂಡರು.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಕಾಣಿಸಿಕೊಂಡ ಕಾಲಿನ ನೋವಿನಿಂದ ಚೇತರಿಸಿಕೊಂಡ ಬಳಿಕ ಆಡಿದ ತಮ್ಮ ಮೊದಲ ಪಂದ್ಯಾವಳಿಯಲ್ಲಿ ಸಿಂಧು ಅವರು ಸೆಮಿ ಫೈನಲ್‌ನುದ್ದಕ್ಕೂ ಅನಗತ್ಯ ತಪ್ಪುಗಳನ್ನು ಎಸಗಿದರು.
ಸಿಂಧು ಸೋಲಿನೊಂದಿಗೆ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಭಾರತ ತಂಡದ ಅಭಿಯಾನ ಅಂತ್ಯಗೊಂಡಿತು.
ಸಿಂಧು ಅವರು ಆಕ್ರಮಣಕಾರಿ ಆರಂಭ ಪಡೆದು ಗರಿಷ್ಠ ರ್ಯಾಂಕಿನ ಎದುರಾಳಿಯ ವಿರುದ್ಧ ಕಠಿಣ ಹೋರಾಟ ನೀಡುತ್ತಾ 5-2 ಮುನ್ನಡೆ ಪಡೆದರು. ಪ್ರತಿರೋಧ ಒಡ್ಡುವಲ್ಲಿ ಯಶಸ್ವಿಯಾದ ವಾಂಗ್ ಸ್ಕೋರನ್ನು ಸಮಬಲಗೊಳಿಸಿದರು. ಚೀನಾ ಶಟ್ಲರ್ ಎಸಗಿದ ಕೆಲವು ತಪ್ಪುಗಳು ಸಿಂಧು ಅವರಿಗೆ 9-7ರಿಂದ ಮುನ್ನಡೆ ಪಡೆಯಲು ಸಹಾಯಮಾಡಿದವು.
13-13ರಿಂದ ಸಮಬಲಗೊಂಡಾಗ ಉಭಯ ಆಟಗಾರ್ತಿಯರು ಲೆಂಗ್ತ್ ಕಾಯ್ದುಕೊಳ್ಳಲು ಪರದಾಟ ನಡೆಸಿದರು. 18-14ರಿಂದ ಮುನ್ನಡೆ ಸಾಧಿಸಿದ ವಾಂಗ್ ಅವರು ಇನ್ನೂ ನಾಲ್ಕು ಅಂಕ ಗಳಿಸಿ ಮೊದಲ ಗೇಮ್ ಅನ್ನು ವಶಪಡಿಸಿಕೊಂಡರು.
ಎರಡನೇ ಗೇಮ್‌ನ ಆರಂಭದಲ್ಲೇ ಅನಗತ್ಯ ತಪ್ಪುಗಳನ್ನು ಎಸಗಿದ ಸಿಂಧು 1-3 ಅಂತರದಿಂದ ಹಿನ್ನಡೆ ಅನುಭವಿಸಿದರು. ಆದರೆ ತಕ್ಷಣವೇ ತಮ್ಮ ತಪ್ಪುಗಳನ್ನು ತಿದ್ದಿಕೊಂಡು 6-3ರಿಂದ ಮುನ್ನಡೆ ಸಾಧಿಸಿದರು. ಮಧ್ಯಂತರದಲ್ಲಿ ಸಿಂಧು 11-6 ಮುನ್ನಡೆಯಲ್ಲಿದ್ದರು.
ವಿರಾಮದ ಬಳಿಕ ವಾಂಗ್ ಭಾರೀ ಹುಮ್ಮಸ್ಸಿನಲ್ಲಿ ಆಡಿದರೂ ಸಿಂಧು 13-9ರಿಂದ ಮುನ್ನಡೆಯಲ್ಲಿದ್ದರು. ಆದರೆ ವಾಂಗ್ ಮತ್ತೊಮ್ಮೆ ಪುಟಿದು ನಿಂತು ಸ್ಕೋರನ್ನು 13-13ರಿಂದ ಸಮಬಲಗೊಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಐದು ಮ್ಯಾಚ್ ಪಾಯಿಂಟ್‌ಗಳನ್ನು ಪಡೆದ ವಾಂಗ್ ಅವರು 21-15 ಅಂತರದಿಂದ ಎರಡನೇ ಗೇಮ್ ಗೆದ್ದುಕೊಂಡು ಫೈನಲ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡರು.