14ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದ ಬುಮ್ರಾ
ಜಸ್‌ಪ್ರಿತ್ ಬುಮ್ರಾ | PC : X
ಲೀಡ್ಸ್: ತನ್ನ ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ ಭಾರತ ತಂಡದ ಸ್ಟಾರ್ ಬೌಲರ್ ಜಸ್‌ಪ್ರಿತ್ ಬುಮ್ರಾ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ.
ಮಿತವ್ಯಯಿ ಬೌಲರ್ ಎನಿಸಿಕೊಂಡ ಬುಮ್ರಾ 24.4 ಓವರ್ ಗಳಲ್ಲಿ 83 ರನ್‌ಗೆ ಐದು ವಿಕೆಟ್‌ಗಳನ್ನು ಉರುಳಿಸಿದರು. ಇಂಗ್ಲೆಂಡ್ ವಿರುದ್ಧ ಭಾರತವು 6 ರನ್ ಮುನ್ನಡೆ ಪಡೆಯಲು ಬುಮ್ರಾ ನಿರ್ಣಾಯಕ ಪಾತ್ರವಹಿಸಿದರು.
ಬುಮ್ರಾ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 14ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದರು. ವಿದೇಶಿ ನೆಲದಲ್ಲಿ 12 ಬಾರಿ ಐದು ವಿಕೆಟ್ ಪಡೆದಿದ್ದು ವಿಶೇಷ. ಇಂದಿನ ಪ್ರದರ್ಶನದೊಂದಿಗೆ ವಿದೇಶಿ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ಗಳನ್ನು ಪಡೆದು ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದರು.
ಲೀಡ್ಸ್ ಟೆಸ್ಟ್ ಪಂದ್ಯದ ವೇಳೆ ವಿದೇಶಿ ನೆಲದಲ್ಲಿ ಗರಿಷ್ಠ ವಿಕೆಟ್‌ಗಳನ್ನು (150)ಪಡೆದ ಏಶ್ಯದ ಬೌಲರ್ ಎನಿಸಿಕೊಂಡರು. ಈ ಮೂಲಕ ಪಾಕಿಸ್ತಾನದ ಮಾಜಿ ಬೌಲರ್ ವಸೀಂ ಅಕ್ರಮ್(146) ದಾಖಲೆ ಮುರಿದರು.