ಬುಮ್ರಾಗೆ ವಿಶ್ರಾಂತಿ, ನಿತೀಶ್ ರೆಡ್ಡಿ, ಆಕಾಶ್ ದೀಪ್ ಗೆ ಅವಕಾಶ
ಜಸ್‌ಪ್ರಿತ್ ಬುಮ್ರಾ | PC : PTI
ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ವಿರುದ್ಧ ಬುಧವಾರ ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಸ್ಟಾರ್ ಬೌಲರ್ ಜಸ್‌ಪ್ರಿತ್ ಬುಮ್ರಾಗೆ ವಿಶ್ರಾಂತಿ ನೀಡಿದೆ. ಬುಮ್ರಾ ಅವರನ್ನು ಕೊನೆಯ 3 ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಆಡಿಸುವ ಸಾಧ್ಯತೆಯಿದೆ.
ಬುಮ್ರಾಗೆ ವಿಶ್ರಾಂತಿ ನೀಡುವ ಜೊತೆಗೆ ಭಾರತದ ಆಡುವ 11ರ ಬಳಗದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ಆಕಾಶ್ ದೀಪ್, ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಶಿಂಗ್ಟನ್ ಸುಂದರ್ ಅವರನ್ನು ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ.
ಹೆಡ್ಡಿಂಗ್ಲೆಯಲ್ಲಿ 5 ವಿಕೆಟ್ ಗಳಿಂದ ಸೋತ ಹಿನ್ನೆಲೆಯಲ್ಲಿ ಭಾರತ ತಂಡವು ಈ ನಿರ್ಧಾರ ತೆಗೆದುಕೊಂಡಿದೆ. ಬಿ. ಸಾಯಿ ಸುದರ್ಶನ್ ಹಾಗೂ ಶಾರ್ದುಲ್ ಠಾಕೂರ್ ರನ್ನು ಕೈಬಿಡಲಾಗಿದ್ದು, ಕರುಣ್ ನಾಯರ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.
ಬುಮ್ರಾಗೆ ವಿಶ್ರಾಂತಿ ನೀಡಿರುವ ನಿರ್ಧಾರಕ್ಕೆ ವಿವರಣೆ ನೀಡಿರುವ ನಾಯಕ ಶುಭಮನ್ ಗಿಲ್, ಎಜ್‌ಬಾಸ್ಟನ್ ಪಿಚ್‌ಗಿಂತ ಲಾರ್ಡ್ಸ್ ಕ್ರೀಡಾಂಗಣದ ಪಿಚ್ ಬುಮ್ರಾಗೆ ಹೆಚ್ಚು ಒಪ್ಪುತ್ತದೆ ಎಂದು ಟೀಮ್ ಮ್ಯಾನೇಜ್‌ಮೆಂಟ್ ಭಾವಿಸಿದೆ ಎಂದರು.
‘‘ನಾವು ಉತ್ತಮ ವಿರಾಮ ಪಡೆದಿದ್ದೇವೆ..ಸರಣಿಯ ಮೂರನೇ ಟೆಸ್ಟ್ ಪಂದ್ಯವು ಲಾರ್ಡ್ಸ್‌ನಲ್ಲಿ ನಡೆಯಲಿದೆ. ನಾವು ಬುಮ್ರಾರನ್ನು 3ನೇ ಟೆಸ್ಟ್ ಪಂದ್ಯದಲ್ಲಿ ಆಡಿಸಲು ಬಯಸಿದ್ದೇವೆ’’ ಎಂದರು.
‘‘ಕುಲದೀಪ್ ಯಾದವ್ ಆಯ್ಕೆಯಾಗುವ ಎಲ್ಲ ಸಾಧ್ಯತೆ ಇತ್ತು. ಉತ್ತಮ ಬ್ಯಾಟಿಂಗ್ ಸಾಮರ್ಥ್ಯ ಹೊಂದಿರುವ ವಾಶಿಂಗ್ಟನ್ ಸುಂದರ್‌ಗೆ ಅವಕಾಶ ನೀಡಲು ನಿರ್ಧರಿಸಲಾಯಿತು. ಮೊದಲ ಟೆಸ್ಟ್ ನಲ್ಲಿ 8ರಿಂದ 11ನೇ ಕ್ರಮಾಂಕದ ಬ್ಯಾಟರ್‌ಗಳು ಎರಡೂ ಇನಿಂಗ್ಸ್‌ಗಳಲ್ಲಿ ಕೇವಲ 9 ರನ್ ಗಳಿಸಿದ್ದ ಕಾರಣ ಕೆಳ ಕ್ರಮಾಂಕವನ್ನು ಬಲಿಷ್ಠಗೊಳಿಸುವುದು ನಮ್ಮ ಮೊದಲ ಆದ್ಯತೆಯಾಗಿತ್ತು’’ಎಂದು ಗಿಲ್ ಹೇಳಿದರು.
ಇಂಗ್ಲೆಂಡ್ ಕ್ರಿಕೆಟ್ ತಂಡವು ಸೋಮವಾರವೇ ತನ್ನ ಆಡುವ 11ರ ಬಳಗವನ್ನು ಪ್ರಕಟಿಸಿದ್ದು, ಮೊದಲ ಟೆಸ್ಟ್ ಪಂದ್ಯದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಇಂಗ್ಲೆಂಡ್ ಈ ಹಿಂದೆ 2017ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ್ದ ಸ್ವದೇಶದಲ್ಲಿ ನಡೆದಿದ್ದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ.