ಮ್ಯಾಂಚೆಸ್ಟರ್ ನಲ್ಲಿ ಬುಮ್ರಾರನ್ನು ಆಡಿಸುವುದೋ, ವಿಶ್ರಾಂತಿ ನೀಡುವುದೋ?: ಭಾರತೀಯ ತಂಡಾಡಳಿತದಲ್ಲಿ ಗೊಂದಲ
ಜಸ್‌ಪ್ರೀತ್ ಬುಮ್ರಾ | PC : PTI
ಮ್ಯಾಂಚೆಸ್ಟರ್: ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ವೇಗಿ ಜಸ್‌ಪ್ರೀತ್ ಬುಮ್ರಾರನ್ನು ಆಡಿಸುವ ವಿಷಯದಲ್ಲಿ ಭಾರತೀಯ ತಂಡಾಡಳಿತವು ಮತ್ತೊಮ್ಮೆ ಗೊಂದಲದಲ್ಲಿ ಮುಳುಗಿದೆ. ಸರಣಿ ನಿರ್ಣಾಯಕ ಆಗಬಹುದಾದ ಈ ಪಂದ್ಯದಲ್ಲಿ ಬುಮ್ರಾರನ್ನು ಆಡಿಸುವುದೇ ಅಥವಾ ಕೆಲಸದ ಒತ್ತಡವನ್ನು ನಿಭಾಯಿಸುವ ಸೂತ್ರದ ಅಡಿಯಲ್ಲಿ ಅವರಿಗೆ ವಿರಾಮ ನೀಡುವುದೇ ಎನ್ನುವ ಕಠಿಣ ಪ್ರಶ್ನೆಯನ್ನು ಅದು ಎದುರಿಸುತ್ತಿದೆ.
ಮೂರು ಪಂದ್ಯಗಳ ಬಳಿಕ ಭಾರತ ಈಗ ಸರಣಿಯಲ್ಲಿ 1-2ರಿಂದ ಹಿನ್ನಡೆಯಲ್ಲಿದೆ. ಈವರೆಗೆ ಅವರು ಎರಡು ಪಂದ್ಯಗಳಲ್ಲಿ ಆಡಿದ್ದಾರೆ. ಲೀಡ್ಸ್‌ನಲ್ಲಿ ಅವರು 43.4 ಓವರ್ ಗಳನ್ನು ಬೌಲ್ ಮಾಡಿ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗಳ ಗೊಂಚಿಲನ್ನು ಪಡೆದಿದ್ದಾರೆ. ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆದ ಎರಡನೇ ಪಂದ್ಯಕ್ಕೆ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಆ ಪಂದ್ಯವನ್ನು ಭಾರತ ಭರ್ಜರಿ ಅಂತರದಿಂದ ಗೆದ್ದಿದೆ.
ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್ ಗೆ ಅವರು ಮರಳಿದರು. ಅವರು 43 ಓವರ್ ಗಳನ್ನು ಬೌಲ್ ಮಾಡಿ ಮೊದಲ ಇನಿಂಗ್ಸ್ ನಲ್ಲಿ ಐದು ವಿಕೆಟ್ ಗಳ ಗೊಂಚಿಲು ಸೇರಿದಂತೆ ಏಳು ವಿಕೆಟ್‌ಗಳನ್ನು ಉರುಳಿಸಿದರು.
ಭಾರತೀಯ ತಂಡದ ನಾಯಕ ಶುಭಮನ್ ಗಿಲ್ ಈ ವಿಷಯದಲ್ಲಿ ರಹಸ್ಯವನ್ನು ಕಾಯ್ದುಕೊಂಡು ಬಂದಿದ್ದಾರೆ. ‘‘ಶೀಘ್ರದಲ್ಲೇ ನಿಮಗೆ ಇದು ಗೊತ್ತಾಗಲಿದೆ’’ ಎಂದಷ್ಟೇ ಅವರು ಹೇಳಿದ್ದಾರೆ. ಆದರೆ, ಸರಣಿಯು ನಿರ್ಣಾಯಕ ಹಂತದಲ್ಲಿರುವುದರಿಂದ ಮ್ಯಾಂಚೆಸ್ಟರ್ ನಲ್ಲಿ ಬುಮ್ರಾ ಆಡಬೇಕು ಎಂಬುದಾಗಿ ಮಾಜಿ ವೇಗಿ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.